Advertisement

ಶಾಸನ ಸಭೆಗೆ ಉಡುಪಿ, ದ.ಕ.ದಿಂದ 6 ಹೊಸಮುಖ

11:37 PM May 14, 2023 | Team Udayavani |

ಉಡುಪಿ/ಮಂಗಳೂರು: ಜಿಲ್ಲೆಯಿಂದ ರಾಜ್ಯ ವಿಧಾನಸಭೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಆಯ್ಕೆಯಾಗಿರುವ 13 ಜನಪ್ರತಿನಿಧಿಗಳಲ್ಲಿ ಇಬ್ಬರು ಹೊಸಬರು ಎನ್ನುವುದು ಈ ಬಾರಿಯ ವಿಶೇಷ.

Advertisement

ಪ್ರತೀ ಚುನಾವಣೆಯಲ್ಲೂ ಕರಾವಳಿಯಿಂದ ಒಬ್ಬರು ಅಥವಾ ಇಬ್ಬರು ಹೊಸಬರು ವಿಧಾನಸಭೆ ಪ್ರವೇಶ ಮಾಡುತ್ತಾರೆ. ಒಂದೇ ಬಾರಿಗೆ ಆರು ಮಂದಿ ಹೊಸಬರು ಪ್ರವೇಶ ಮಾಡಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಇದೇ ಮೊದಲು. ಅದರಲ್ಲೂ ಐವರು ಒಂದೇ ಪಕ್ಷಕ್ಕೆ ಸೇರಿದವರು.

ಉಡುಪಿ ಕ್ಷೇತ್ರದಿಂದ ಯಶ್‌ಪಾಲ್‌ ಎ. ಸುವರ್ಣ, ಕಾಪುವಿನಿಂದ ಗುರ್ಮೆ ಸುರೇಶ್‌ ಶೆಟ್ಟಿ, ಬೈಂದೂರಿನಿಂದ ಗುರುರಾಜ ಗಂಟಿಹೊಳೆ, ಕುಂದಾಪುರದಿಂದ ಕಿರಣ್‌ ಕೊಡ್ಗಿ, ಸುಳ್ಯದಿಂದ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರಿನಿಂದ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಶಾಸಕರಾಗಿ ವಿಧಾನಸೌಧ ಪ್ರವೇಶಿಸಲಿದ್ದಾರೆ. 2018ರಲ್ಲಿ ದ.ಕ.ದಲ್ಲೂ 8 ಕ್ಷೇತ್ರದಿಂದ 6 ಮಂದಿ ಹೊಸಬರು ಏಕಕಾಲಕ್ಕೆ ವಿಧಾನಸಭೆ ಪ್ರವೇಶ ಮಾಡಿದ್ದರು. ಆ ಆರು ಮಂದಿಯಲ್ಲಿ ಐವರು ಈ ಬಾರಿಯೂ ಪುನರ್‌ ಆಯ್ಕೆಯಾಗಿದ್ದಾರೆ. ಒಬ್ಬರು ಕಣದಲ್ಲಿರಲಿಲ್ಲ.

ಕಿರಣ್‌ ಕೊಡ್ಗಿಯವರ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಶ್‌ಪಾಲ್‌ ಸುವರ್ಣ ಅವರ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಕೆ.ರಘುಪತಿ ಭಟ್‌ ಹಾಗೂ ಗುರ್ಮೆ ಸುರೇಶ್‌ ಶೆಟ್ಟಿ ಆಯ್ಕೆಯಲ್ಲಿ ನಿರ್ಗಮಿತ ಶಾಸಕ ಲಾಲಾಜಿ ಮೆಂಡನ್‌ ಅವರ ಶ್ರಮವೂ ಇದೆ. ಆದರೆ, ಗುರುರಾಜ ಗಂಟಿಹೊಳೆಯವರಿಗೆ ನಿರ್ಗಮಿತ ಶಾಸಕರ ಬೆಂಬಲ ಸಿಗದೇ ಇದ್ದರೂ ಕಾರ್ಯಕರ್ತರು, ಪರಿವಾರ ಸಂಘಟನೆಗಳ ಪ್ರಮುಖರು ಕೈಬಿಡಲಿಲ್ಲ.

ಈ ನಾಲ್ವರು ಹೊಸ ಮುಖ ಜಿಲ್ಲೆಯ ಹಲವು ಸಮಸ್ಯೆಗಳನ್ನು ಶಾಸನ ಸಭೆಗಳಲ್ಲಿ ಯಾವ ರೀತಿಯಲ್ಲಿ ಪ್ರಸ್ತುತ ಪಡಿಸಿ, ಅದಕ್ಕೆ ಉತ್ತರ ಕಂಡುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ಯಶ್‌ಪಾಲ್‌ ಸುವರ್ಣ ಉಡುಪಿಯಿಂದ ಆಯ್ಕೆಯಾಗಿರುವ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಅವರು ಈ ಹಿಂದೆ ಉಡುಪಿ ನಗರಸಭೆಯೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಉಳಿದ ಮೂವರು ಜನಪ್ರತಿನಿಧಿಗಳಾಗಿರಲಿಲ್ಲ, ಪಕ್ಷದಲ್ಲಿ ಸಕ್ರಿಯರಾಗಿದ್ದರು.

ಕಿರಣ್‌ ಕೊಡ್ಗಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾಗಿದ್ದ ಕಿರಣ್‌ ಕೊಡ್ಗಿಯವರ ತಂದೆ ಎ.ಜಿ. ಕೊಡ್ಗಿಯವರು ಶಾಸಕರಾಗಿದ್ದರು.

ಗುರುರಾಜ ಗಂಟಿಹೊಳೆ ಗುರುರಾಜ ಗಂಟಿಹೊಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣವಧಿ ಪ್ರಚಾರಕರಾಗಿ 10 ವರ್ಷ ಸೇವೆ ಸಲ್ಲಿಸಿ, ಅನಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುರೇಶ್‌ ಶೆಟ್ಟಿ ಸಮಾಜ ಸೇವಕರಾಗಿರುವ ಗುರ್ಮೆ ಸುರೇಶ್‌ ಶೆಟ್ಟಿಯವರು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾಗೀರಥಿ ಮುರುಳ್ಯ ಮೀಸಲು ಕ್ಷೇತ್ರ ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯಅವರು ಜಿ.ಪಂ. ಮಾಜಿ ಸದಸ್ಯೆ. ಪ್ರಥಮ ಬಾರಿಗೆ ಬಿಜೆಪಿಯಿಂದ ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದವರು. ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಹೈನುಗಾರಿಕೆ, ಟೈಲರಿಂಗ್‌ ವೃತ್ತಿಯನ್ನೂ ನಿರ್ವಹಿಸುತ್ತಿದ್ದಾರೆ.

ಅಶೋಕ್‌ ಕುಮಾರ್‌ ರೈ ಪುತ್ತೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು ಪುತ್ತೂರು ರೈ ಎಸ್ಟೇಟ್ಸ್‌ ಎಜುಕೇಶನ್‌ ಹಾಗೂ ಚಾರಿಟೆಬಲ್‌ ಟ್ರಸ್ಟ್‌ ಮುಖ್ಯಸ್ಥರು. ಟ್ರಸ್ಟ್‌ ಮೂಲಕ ಹತ್ತಾರು ಜನಪರ ಕಾರ್ಯ ನಡೆಸುತ್ತಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next