Advertisement

ಮತದಾರ ಪಟ್ಟಿ ಸೇರಲು 6 ದಿನ ಅವಕಾಶ 

05:08 PM Apr 09, 2018 | Team Udayavani |

ಧಾರವಾಡ: ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ಸಮಿತಿಯು ಇಲ್ಲಿನ ಸಕ್ಷಮ ಫೌಂಡೇಷನ್‌ ಹಾಗೂ ತೇಜಸ್‌ ಚಾರಿಟೇಬಲ್‌ ಹೆಲ್ತ್‌ ಟ್ರಸ್ಟ್‌ ಸಹಯೋಗದಲ್ಲಿ ರವಿವಾರ ಸೈಕಲ್‌ ಜಾಥಾ ಹಮ್ಮಿಕೊಂಡಿತ್ತು.

Advertisement

ಕರ್ನಾಟಕ ಮಹಾವಿದ್ಯಾಲಯದ ಮಹಾದ್ವಾರದ ಬಳಿ ಜಾಥಾಕ್ಕೆ ಚಾಲನೆ ನೀಡಿದ ಜಿಪಂ ಸಿಇಒ ಸ್ನೇಹಲ್‌ ಆರ್‌. ಮಾತನಾಡಿ, ಸಾರ್ವಜನಿಕರಲ್ಲಿ ಸೈಕಲ್‌ ಬಳಕೆ ಅಗತ್ಯದ ಅರಿವು ಮೂಡಿಸುವುದು, ಸ್ವಚ್ಛ ಮತ್ತು ಹಸಿರು ಧಾರವಾಡ ನಿರ್ಮಾಣದ ಆಶಯದ ಜೊತೆಯಲ್ಲಿ ಮತದಾನ ಜಾಗೃತಿಯೂ ಸಹ ಜಾಥಾದ ಉದ್ದೇಶವಾಗಿದೆ ಎಂದರು.

ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಹೆಮ್ಮೆಯಿಂದ ಭಾಗವಹಿಸಿ ತಮ್ಮ ಮತ ಚಲಾಯಿಸಬೇಕು. ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದೆ ಇದ್ದರೆ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಗೆ ಸೇರಲು ಏ. 14ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಮತದಾರರ ನೋಂದಣಿ ಕಾರ್ಯ ಆಯಾ ಮತಗಟ್ಟೆ ಅಧಿಕಾರಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದರು.

ಸೈಕಲ್‌ ಜಾಥಾವು ಕೆಸಿಡಿಯಿಂದ ಆರಂಭವಾಗಿ ಸಪ್ತಾಪುರ, ಶ್ರೀನಗರ ವೃತ್ತ, ಜಯನಗರ ವೃತ್ತ, ದಾಸನಕೊಪ್ಪ ವೃತ್ತ, ಜರ್ಮನ್‌ ಆಸ್ಪತ್ರೆ, ಉಪನಗರ ಪೊಲೀಸ್‌ ಠಾಣೆ, ಕಾರ್ಪೋರೇಷನ್‌, ಸುಭಾಸ ರಸ್ತೆ, ಗಾಂಧಿ ಚೌಕ, ವಿವೇಕಾನಂದ ವೃತ್ತದ ಮೂಲಕ ಹಾಯ್ದು ಡಾ| ಮಲ್ಲಿಕಾರ್ಜುನ ಮನಸೂರ ಕಲಾಭವನ ತಲುಪಿತು. ಕಾರ್ಯಕ್ರಮ ಆಯೋಜಕಿ ಡಾ| ಸಂಧ್ಯಾ ಕುಲಕರ್ಣಿ, ಸಂಚಾರ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಮುರುಗೇಶ ಚನ್ನಣ್ಣವರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next