Advertisement

D.K.ಜಿಲ್ಲೆಯಲ್ಲಿ 6 ಕಟ್ಟಡ ಬಾಕಿ; ಉಡುಪಿಯಲ್ಲಿ ಇನ್ನೂ ಆರಂಭಗೊಳ್ಳದ ಕಾಮಗಾರಿ

12:25 AM Dec 27, 2023 | Team Udayavani |

ಬಂಟ್ವಾಳ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು 10 ಮೌಲಾನಾ ಆಜಾದ್‌ ಮಾದರಿ ಶಾಲೆ(ಆಂಗ್ಲ ಮಾಧ್ಯಮ)ಗಳ ಪೈಕಿ ಕಟ್ಟಡ ನಿರ್ಮಾಣಕ್ಕೆ ಬಾಕಿರುವ ದ.ಕ. ಜಿಲ್ಲೆಯ 6 ಶಾಲೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸಲು ಮುಂದಿನ ವರ್ಷದವರೆಗೆ ಕಾಯಬೇಕು.

Advertisement

ಅಧಿಕಾರಿಗಳೇನೋ ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಕಟ್ಟಡದಲ್ಲಿ ಕಾರ್ಯಾಚರಿಸುತ್ತೇವೆ ಎಂದು ಹೇಳುತ್ತಿದ್ದರು.ಆದರೆ ವಾಸ್ತವವಾಗಿ ಕೆಲವೆಡೆ ಕಟ್ಟಡ ನಿರ್ಮಾಣ ಇನ್ನೂ ಮುಗಿದಿಲ್ಲ. ಜತೆಗೆ ಉಡುಪಿ ಜಿಲ್ಲೆಯ ಎರಡು ಕಡೆ ಕಾಮಗಾರಿಯೇ ಆರಂಭವಾಗಿಲ್ಲ.

ಕಾಮಗಾರಿ ನಡೆಯುತ್ತಿರುವ ಶಾಲೆಗಳಿಗೆೆ ಮಂಜೂರಾದ ತಲಾ 2.35 ಕೋ.ರೂ. ಅನುದಾನದಲ್ಲಿ ಶೇ. 50 ಮಾತ್ರ ಮಂಜೂರಾಗಿದ್ದು, ಸುಮಾರು 1.17 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಹೀಗಾಗಿ ಸದ್ಯಕ್ಕೆ ಎಲ್ಲೆಡೆ ಪರ್ಯಾಯ ವ್ಯವಸ್ಥೆಯ ಮೂಲಕ ಶಾಲೆಗಳನ್ನು ನಡೆಸಲಾಗುತ್ತಿದೆ.

ಪ್ರಧಾನಮಂತ್ರಿಗಳ ಜನವಿಕಾಸ ಕಾರ್ಯಕ್ರಮ (ಪಿಎಂಜೆವಿಕೆ)ದಡಿ ರಾಜ್ಯ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಮೂಲಕ ಮೌಲಾನಾ ಆಜಾದ್‌ ಮಾದರಿ ಶಾಲೆಗಳು ಕಾರ್ಯಾಚರಿಸುತ್ತಿವೆ. 6ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ಶಾಲೆಗಳು ಕೂಡ ತರಗತಿಯೊಂದಕ್ಕೆ ತಲಾ 60 ವಿದ್ಯಾರ್ಥಿಗಳಂತೆ ಒಟ್ಟು 300 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ.

ಮೂಲರಪಟ್ಣ ಬಹುತೇಕ ಪೂರ್ಣ
ದ.ಕ.ಜಿಲ್ಲೆಗೆ ಮಂಜೂರಾದ 8 ಶಾಲೆಗಳ ಪೈಕಿ ಪುತ್ತೂರಿನ ಸಾಲ್ಮರ ಹಾಗೂ ಮಂಗಳೂರಿನ ಕುದ್ರೋಳಿಯ ಶಾಲೆಗಳ ಕಟ್ಟಡಗಳು ಪೂರ್ಣಗೊಂಡು ಶಾಲೆಗಳು ಕಾರ್ಯಾಚರಿಸುತ್ತಿವೆ. ಬಂಟ್ವಾಳದ ಮೂಲರಪಟ್ಣ ಶಾಲೆಯ ಕಟ್ಟಡ ಬಹುತೇಕ ಪೂರ್ಣಗೊಂಡು ಒಳಾಂಗಣದ ಕಾಮಗಾರಿ ಬಾಕಿ ಇದೆ. ಫರಂಗಿಪೇಟೆ ಸಮೀಪದ ಸುಜೀರು, ಮಂಗಳೂರಿನ ಗುರುಕಂಬಳ, ಉಳ್ಳಾಯಿಬೆಟ್ಟು, ಉಳ್ಳಾಲದ ಬೋಳಿಯಾರು, ಮಂಜನಾಡಿಯ ಶಾಲಾ ಕಟ್ಟಡಗಳು ಪ್ರಗತಿಯಲ್ಲಿದ್ದು, ಬಾಕಿ ಅನುದಾನ ಬಿಡುಗಡೆ ಆಗಬೇಕಿದೆ.

Advertisement

ಇಲಾಖೆಯ ಮಾಹಿತಿ ಪ್ರಕಾರ ಕೇಂದ್ರ ಸರಕಾರದ ಪಿಎಂಜೆವಿಕೆ ದಡಿ ಕೆಲವು ದಿನಗಳ ಹಿಂದೆ ಸುಮಾರು 50 ಕೋ.ರೂ. ರಾಜ್ಯಕ್ಕೆ ಬಂದಿದ್ದು, ರಾಜ್ಯ ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ಪ್ರತಿ ಶಾಲೆಗೆ ಬಿಡುಗಡೆ ಮಾಡಬೇಕಿದೆ. ಅದು ಹಂಚಿಕೆಯಾದ ಬಳಿಕವೇ ಕಾಮಗಾರಿ ಮುಂದುವರಿಯುವ ಸಾಧ್ಯತೆ ಹೆಚ್ಚು. ಇದು ಕಟ್ಟಡದ ಸಂಗತಿಯಾದರೆ ಶಾಲೆಗಳ ಖಾಯಂ ಶಿಕ್ಷಕರ ಹುದ್ದೆಯೂ ಖಾಲಿ ಇದ್ದು, ಅದರ ಭರ್ತಿಗೂ ಕ್ರಮಕೈಗೊಳ್ಳಬೇಕಿದೆ.

ಕಾರ್ಕಳಕ್ಕೆ ಜಾಗವೇ ಅಂತಿಮವಾಗಿಲ್ಲ
ಕಾಪು ಹಾಗೂ ಕಾರ್ಕಳ ಸೇರಿ ಉಡುಪಿ ಜಿಲ್ಲೆಯಲ್ಲಿ 2 ಶಾಲೆಗಳು ಪರ್ಯಾಯ ವ್ಯವಸ್ಥೆಯ ಮೂಲಕ ಕಾರ್ಯಾಚರಿಸುತ್ತಿದ್ದು, ಕಾಪು ಶಾಲೆಗೆ ಜಾಗ ಅಂತಿಮಗೊಂಡು ಸರಕಾರಕ್ಕೆ ಕ್ರೀಯಾಯೋಜನೆ ಸಲ್ಲಿಸಲಾಗಿದೆ. ಆದರೆ ಕಾರ್ಕಳಕ್ಕೆ ಇನ್ನೂ ಜಾಗವೇ ಅಂತಿಮಗೊಂಡಿಲ್ಲ. ಈ ಹಿಂದೆ ನೋಡಲಾದ ಜಾಗ ಕೊಂಚ ಒಳ ಪ್ರದೇಶದಲ್ಲಿದ್ದು, ಜತೆಗೆ ಗುಡ್ಡ ಪ್ರದೇಶ ಎನ್ನುವ ಕಾರಣಕ್ಕೆ ಕಾರ್ಕಳದ ಉರ್ದು ಶಾಲೆಯ ಬಳಿ ಪರ್ಯಾಯ ಜಾಗದ ಸರ್ವೇ ಕಾರ್ಯ ನಡೆದಿದೆ. ಹೀಗಾಗಿ ಅದು ಅಂತಿಮಗೊಂಡ ಬಳಿಕವೇ ಕ್ರಿಯಾಯೋಜನೆ ಸಲ್ಲಿಕೆಯಾಗಬೇಕಿದೆ.

ದ.ಕ.ಜಿಲ್ಲೆಯಲ್ಲಿ ಶಾಲೆಯ ಕಟ್ಟಡ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಒಂದಷ್ಟು ಕೆಲಸಗಳು ಬಾಕಿ ಇದೆ. ಪ್ರಸ್ತುತ ಕಟ್ಟಡಗಳಿಗೆ 50 ಶೇ.ರಷ್ಟು ಅನುದಾನ ಬಿಡುಗಡೆಯಾಗಿದ್ದು, ಬಾಕಿ ಬಂದ ಮೇಲೆ ಕಾಮಗಾರಿ ಮುಂದುವರಿಯಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಶಾಲೆಗಳೂ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವ ಸಾಧ್ಯತೆ ಇದೆ.
– ಜಿನೇಂದ್ರ ಎಂ.,
ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ, ದ.ಕ.ಜಿಲ್ಲೆ

ಕಾಪು ಶಾಲೆಯ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಕೆಯಾಗಿದ್ದು, ಕಾರ್ಕಳದ ಹಿಂದಿನ ಜಾಗ ಸೂಕ್ತವಾಗಿಲ್ಲ ಎಂದು ಉರ್ದು ಶಾಲೆಯ ಬಳಿಯ ಜಾಗದ ಸರ್ವೆ ನಡೆದಿದೆ. ಅದರ ವರದಿ ಇನ್ನಷ್ಟೇ ಬರಬೇಕಿದೆ.
– ಪೂರ್ಣಿಮಾ ಬಿ. ಚೂರಿ
ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next