ಬೆಂಗಳೂರು : ರಾಜ್ಯದಲ್ಲಿ ಫೆ.22ರಿಂದ 6ರಿಂದ 8ನೇ ತರಗತಿಗಳು ಆರಂಭವಾಗಲಿದ್ದು, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಜಿಲ್ಲೆಯ ಶಾಲೆಗಳಲ್ಲಿ 8ನೇ ತರಗತಿ ಮಾತ್ರ ಆರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ
ಈ ಸಂಬಂಧ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಕೋವಿಡ್ ಪ್ರಕರಣ ಇನ್ನು ಪತ್ತೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಕರ್ನಾಟಕ ಜಿಲ್ಲೆಗಳ ಶಾಲೆಗಳಲ್ಲಿ ಸದ್ಯ 6 ಮತ್ತು 7ನೇ ತರಗತಿ ಆರಂಭಿಸುತ್ತಿಲ್ಲ. 8ನೇ ತರಗತಿ ಮಾತ್ರ ಆರಂಭಿಸಲಿದ್ದೇವೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಫೆ. 22 ರಿಂದ 6 ರಿಂದ 8ನೇ ತರಗತಿ ಆರಂಭವಾಗಲಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ 6 -8 ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ನಡೆಸಲಾಗುತ್ತಿದ್ದು, ಇದೀಗ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದ್ದು,ಅದರಂತೆ ಶಾಲಾ ಆರಂಭಕ್ಕೆ ದಿನ ನಿಗದಿಯಾಗಿದೆ.
ಇದನ್ನೂ ಓದಿ : ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರು ಕಾರ್ಡ್ ವಾಪಾಸ್ ನೀಡಿ : ಸಿಎಂ ಬಿಎಸ್ ವೈ
1 ರಿಂದ 5 ನೇ ತರಗತಿಗಳಿಗೆ ಸದ್ಯ ವಿದ್ಯಾಗಮ ಯೋಜನೆಯನ್ನು ಮುಂದುವರೆಸಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕೆನ್ನುವ ಯಾವುದೇ ನಿಯಮಗಳಿಲ್ಲ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಅನಮತಿ ಪತ್ರವನ್ನು ತರಬೇಕೆಂದು ಸಚಿವರು ಹೇಳಿದ್ದಾರೆ.
ಕೋವಿಡ್ ಸಲಹಾ ಸಮಿತಿಯ ಜತೆಗೆ ಫೆ.24 ಅಥವಾ ಫೆ.25ರಂದು ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಈಗ 1 ರಿಂದ 5ನೇ ತರಗತಿ ಆರಂಭದ ಬಗ್ಗೆ ಚರ್ಚೆ ನಡೆಸಲಿದ್ದೇವೆ. ತರಗತಿ ನಡೆಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.