Advertisement

Congress: 6-7 ಸಚಿವರು, 4 ಕೈ ಶಾಸಕರು ಲೋಕಸಭೆಗೆ ಸ್ಪರ್ಧಿಸಲು ತಾಕೀತು?

01:10 AM Jan 20, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ 6ರಿಂದ 7 ಜನ ಸಚಿವರು ಮತ್ತು ಮೂರ್‍ನಾಲ್ಕು ಶಾಸಕರ ಹೆಸರುಗಳು ಪ್ರಸ್ತಾವವಾಗಿದೆ. ಹೀಗಾಗಿ ಅವರಿಗೆ ಕಣಕ್ಕಿಳಿಯುವ ಅನಿವಾರ್ಯ ಕಾಡತೊಡಗಿದೆ. ಹೀಗಾಗಿ ಸಚಿವರ ಪಾಲಿಗೆ ಬರುವ ಚುನಾವಣೆ ಅಕ್ಷರಶಃ ಅಗ್ನಿಪರೀಕ್ಷೆ ಆಗುವ ಸ್ಪಷ್ಟ ಸೂಚನೆಗಳಿವೆ.
ಅಗತ್ಯಬಿದ್ದರೆ ಕೆಲವೆಡೆ ಸಚಿವರು ಮತ್ತು ಶಾಸಕರು ಕೂಡ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯ ಬೇಕಾಗುತ್ತದೆ. ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಸುಳಿವು ನೀಡಿದ್ದರು. ಈ ಮಧ್ಯೆಯೇ ಪ್ರಾಥಮಿಕ ಸಮೀಕ್ಷೆಯಲ್ಲಿ 6-7 ಸಚಿವರು ಮತ್ತು 3-4 ಶಾಸಕರ ಹೆಸರುಗಳು ಪ್ರಸ್ತಾವವಾಗಿದೆ. ಯಾವುದೇ ಕಾರಣಕ್ಕೂ

Advertisement

ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಒಂದು ವೇಳೆ ಸೋತರೆ ಸಚಿವ ಸ್ಥಾನಕ್ಕೂ ಕುತ್ತು ಬರಬಹುದು ಎಂದು ಸುರ್ಜೇವಾಲಾ ಖಡಕ್‌ ಸೂಚನೆ ನೀಡಿದ್ದಾರೆ. ಇದು ಕೆಲವರಲ್ಲಿ ತಳಮಳ ಸೃಷ್ಟಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರೀಯ ಚುನಾವಣ ಸ್ಕ್ರೀನಿಂಗ್‌ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್‌ ಲೋಕಸಭಾ ಚುನಾವಣ ಸಮಿತಿಯ ಸಭೆ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಿತು. ಈ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸುರ್ಜೇವಾಲಾ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಹಲವು ಮುಖಂಡರು ಭಾಗವಹಿಸಿದ್ದರು.

ಯಾರ್ಯಾರಿಗೆ ಸೂಚನೆ?
ಕೋಲಾರ ಭಾಗದ ಹಿರಿಯ ಸಚಿವರು, ಕಿತ್ತೂರು ಕರ್ನಾಟಕ ಪ್ರಾಂತದ ಪ್ರಭಾವಿ ಸಚಿವರು, ಕಲ್ಯಾಣ ಕರ್ನಾಟಕದ ಸಚಿವರು, ಉತ್ತರ ಕನ್ನಡ ಜಿಲ್ಲೆಯ ಹಿರಿಯ ಶಾಸಕರು, ಬೆಂಗಳೂರಿನ ಅಲ್ಪಸಂಖ್ಯಾಕ ಸಮುದಾಯದ ಶಾಸಕರು ಸೇರಿ 10ರಿಂದ 11 ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿರುವಂತೆ ಸೂಚನೆ.

ರಾಜ್ಯದ ಮೇಲೆ ಅಪಾರ ನಿರೀಕ್ಷೆ
“ಈ ಚುನಾವಣೆಯಲ್ಲಿ ಹೈಕಮಾಂಡ್‌ಗೆ ರಾಜ್ಯದ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಗೆಲುವಿಗೆ ಸಾಕಷ್ಟು ಅವಕಾಶಗಳು ನಮಗಿವೆ. ಅಭ್ಯರ್ಥಿಗಳ ಆಯ್ಕೆಗೆ ಇನ್ನೊಂದು ಸುತ್ತಿನ ಸಮೀಕ್ಷೆ ನಡೆಯಲಿದೆ. ಅದರಲ್ಲೂ ಸಚಿವರು, ಶಾಸಕರ ಹೆಸರು ಬಂದರೆ ಸಮಜಾಯಿಷಿ ನೀಡದೆ ಕಣಕ್ಕಿಳಿಯಬೇಕಾಗುತ್ತದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ’ ಎಂದು ಸುರ್ಜೇವಾಲಾ ಹೇಳಿದ್ದಾರೆ ಎನ್ನಲಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್‌ನೊಂದಿಗೆ ಕೈಜೋಡಿಸಿ ಕೆಟ್ಟೆವು. ಈ ಬಾರಿ ಬಿಜೆಪಿ- ಜೆಡಿಎಸ್‌ ಕೈಜೋಡಿಸಿದ್ದರಿಂದ ಚಿತ್ರಣ ಭಿನ್ನವಾಗಿದ್ದು, ಪಕ್ಷಕ್ಕೆ ಪೂರಕ ವಾತಾವರಣ ಇದೆ. ಅಗತ್ಯಬಿದ್ದರೆ ಸಚಿವರೂ ಕಣಕ್ಕಿಳಿದು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮತ್ತೂಂದು ವರದಿಗೆ ಸೂಚನೆ
ಈ ಮಧ್ಯೆ ಎಲ್ಲ ಉಸ್ತುವಾರಿ ಸಚಿವರು ವಾರದಲ್ಲಿ ಮತ್ತೂಂದು ವರದಿ ಸಲ್ಲಿಸಬೇಕು. ಅಷ್ಟೇ ಅಲ್ಲ, ಈ ತಿಂಗಳಾಂತ್ಯದ ಒಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನೂ ಸಲ್ಲಿಸುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಚುನಾವಣ ಸಮಿತಿಯು ಕೆಪಿಸಿಸಿಗೆ ಸೂಚನೆ ನೀಡಿದೆ. ಈಗಾಗಲೇ ಎಲ್ಲ ಸಚಿವರು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಸಂಬಂಧಿಸಿ ನೀಡಿದ ವರದಿಯು ಕಾಂಗ್ರೆಸ್‌ ರಾಷ್ಟ್ರೀಯ ಚುನಾವಣ ಸಮಿತಿ ಕೈಸೇರಿದೆ. ಅದರಲ್ಲಿ ಮೂರರಿಂದ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next