Advertisement

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

01:15 AM Sep 29, 2024 | Team Udayavani |

ಬೆಂಗಳೂರು: ”ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ರಾಜ್ಯ ಸರಕಾರದ ಆರರಿಂದ ಏಳು ಮಂದಿ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ” ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಶನಿವಾರ(ಸೆ28) ಬಾಂಬ್ ಸಿಡಿಸಿದ್ದಾರೆ.

Advertisement

ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಸಿದ್ದರಾಮಯ್ಯ ನೇತೃತ್ವದ ಸರಕಾರದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕ ” ಕೆಲವು ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭವಾದ ನಂತರ ಮತ್ತು ಸಾರ್ವಜನಿಕವಾಗಿ ಚರ್ಚೆ ಪ್ರಾರಂಭ ವಾದ ನಂತರ ಕಾಂಗ್ರೆಸ್ ಆಡಳಿತ ನನ್ನನ್ನು ಕೆಲವು ಪ್ರಕರಣಗಳಲ್ಲಿ ಸಿಲುಕಿಸಲು ಯತ್ನಿಸುತ್ತಿದೆ” ಎಂದರು.

”ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸರಕಾರ ಎಂದು ಆರೋಪಿಸಿ ಅಧಿಕಾರಕ್ಕೆ ಬಂದರು. ಇಂದು ಅವರದೇ ಪಕ್ಷದವರೇ ಅಧಿಕಾರಕ್ಕೆ ಬಂದ ನಂತರ ಶೇ.40ಕ್ಕಿಂತ ಹೆಚ್ಚು ಕಮಿಷನ್ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಜನರು ನಿಮಗೆ ಇದಕ್ಕಾಗಿ ಅಧಿಕಾರ ಕೊಟ್ಟಿದ್ದಾರೆಯೇ?” ಎಂದು ಪ್ರಶ್ನಿಸಿದರು.

”ನಾನು ಸಚಿವರುಗಳ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ, ಭಯದಿಂದ ಓಡಿಹೋಗುವುದಿಲ್ಲ, ಹಿಟ್ ಅಂಡ್ ರನ್ ಪ್ರಶ್ನೆಯೇ ಇಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲದಿದ್ದರೆ, ಸಚಿವ ಸಂಪುಟದಲ್ಲಿ ತರಾತುರಿಯಲ್ಲಿ ಕೆಲವು ನಿರ್ಧಾರಗಳನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದರು.

”ರಾಜ್ಯದಲ್ಲಿ ಸರ್ಕಾರ ಹೊಸ ರೀತಿಯ ಕಾನೂನು ವ್ಯವಸ್ಥೆಯನ್ನು ತರುತ್ತಿದೆ. ಸಿದ್ದರಾಮಯ್ಯ ಪ್ರಕರಣದಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದ 48 ಗಂಟೆಗಳ ನಂತರವೂ ಎಫ್‌ಐಆರ್ ದಾಖಲಾಗಿರಲಿಲ್ಲ” ಎಂದು ಕಿಡಿ ಕಾರಿದರು.

Advertisement

ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿರುದ್ಧ ಕಿಡಿ ಕಾರಿ ”ಬೆಂಗಳೂರು ಕಮಿಷನರ್, ಸಿಐಡಿ ಮುಖ್ಯಸ್ಥರ ಹುದ್ದೆಗಳ ಭರವಸೆ ಎಷ್ಟು ಅಧಿಕಾರಿಗಳಿಗೆ ನೀಡಿದ್ದೀರಿ? ಇದಕ್ಕಾಗಿ ನೀವು ಅವರನ್ನು ಏನು ಮಾಡುತ್ತೀರಿ” ಎಂದು ಪ್ರಶ್ನಿಸಿದರು.

”ನಾನು ಬಿಜೆಪಿಯೊಂದಿಗೆ ಕೈಜೋಡಿಸುವ ಮೊದಲೇ ನಿಮ್ಮ ಸರ್ಕಾರವನ್ನು ಗುರಿಯಾಗಿಸಲು ಪ್ರಾರಂಭಿಸಿದ ದಿನದಿಂದ, ನೀವು ಅಧಿಕಾರಿಗಳು ಮತ್ತು ಮಂತ್ರಿಗಳ ಮಟ್ಟದಲ್ಲಿ ಎಷ್ಟು ಸಭೆಗಳನ್ನು ನಡೆಸಿದ್ದೀರಿ? ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ಮಾಹಿತಿ ಇಲ್ಲವೇ? ” ಎಂದು ಕೆಂಡಾಮಂಡಲವಾದರು.

ಕುಮಾರಸ್ವಾಮಿ ಅವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಮುಂದೆ ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಮರುದಿನ ಸುದ್ದಿಗೋಷ್ಠಿ ನಡೆಸಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಲೋಕಾ ಯುಕ್ತ ಎಡಿಜಿಪಿ ವಿರುದ್ಧ ಕೇಂದ್ರಕ್ಕೆ ದೂರು
ಸರಣಿ ಆರೋಪಗಳನ್ನು ಹೊತ್ತ ಭ್ರಷ್ಟ ಐಪಿಎಸ್‌ ಅಧಿಕಾರಿಯೊಬ್ಬ ರಾಜಭವನ ಸಿಬಂದಿಯನ್ನು ತನಿಖೆ ಮಾಡಲು ಅನುಮತಿ ಕೇಳಿದ್ದು, ಈತನಿಗೆ ರಾಜ್ಯ ಸರಕಾರದ ಸಂಪೂರ್ಣ ಕೃಪಾಕಟಾಕ್ಷವಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಗಣಿ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ರಚನೆಯಾಗಿರುವ ವಿಶೇಷ ತನಿಖಾ ದಳದ ಮುಖ್ಯಸ್ಥ ಹಾಗೂ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಎಂ. ಚಂದ್ರಶೇಖರ್‌ ವಿರುದ್ಧ ವಾಗ್ಧಾಳಿ ನಡೆಸಿದರು.

ಅವರ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಕಳುಹಿಸಿಕೊಡುವುದಾಗಿಯೂ ಹೇಳಿದರು.

ಆಂಧ್ರಪ್ರದೇಶ ಮೂಲದ ಚಂದ್ರಶೇಖರ್‌ ಹಿಮಾಚಲ ಪ್ರದೇಶ ವೃಂದದ ಐಪಿಎಸ್‌ ಅಧಿಕಾರಿ. ಆದರೆ ಎರವಲು ಸೇವೆ ಮೇಲೆ ಕರ್ನಾಟಕಕ್ಕೆ ನಿಯುಕ್ತಿಗೊಂಡಿದ್ದ. ಈಗ ಬೌರಿಂಗ್‌ ಆಸ್ಪತ್ರೆಯ ವೈದ್ಯರಿಂದ ಸುಳ್ಳು ಪ್ರಮಾಣಪತ್ರ ಪಡೆದು, ಹಿಮಾಚಲ ಪ್ರದೇಶದ ವಾತಾವರಣ ಸರಿ ಹೊಂದುವುದಿಲ್ಲ ಎಂಬ ಆರೋಗ್ಯದ ನೆಪವೊಡ್ಡಿ ಕರ್ನಾಟಕದಲ್ಲೇ ನೆಲೆಸಿದ್ದಾನೆ. ಈತ ಒಬ್ಬ ಭ್ರಷ್ಟ ಅಧಿಕಾರಿಯಾಗಿದ್ದು, ಇಂತಹ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರಕಾರ ತನಿಖೆಗಳನ್ನು ಮಾಡಿಸುತ್ತಿದೆ ಎಂದು ಏಕವಚನದಲ್ಲಿಯೇ ವಾಗ್ಧಾಳಿ ನಡೆಸಿದರು.

ದಿಲ್ಲಿಯಲ್ಲಿ ಲಕ್ಷಾಂತರ ಎಕರೆ ಖರೀದಿಸಿ ಭೂಬ್ಯಾಂಕ್‌ ನಿರ್ಮಿಸುವ ಪಿಎಸಿಎಲ್‌ ಎಂಬ ಸಂಸ್ಥೆ 2.50 ಲಕ್ಷ ಕೋಟಿ ರೂ.ಗಳ ಆಸ್ತಿ ಹೊಂದಿತ್ತು. ಖಾಸಗಿ ವಾಹಿನಿ ನಡೆಸುತ್ತಿದ್ದ ವಿಜಯ್‌ ಟಾಟಾಗೂ ಈ ಸಂಸ್ಥೆಗೂ ಸಂಬಂಧವಿತ್ತು. ಇದಕ್ಕೆಲ್ಲ ಗಾಡ್‌ ಫಾದರ್‌ ಚಂದ್ರಶೇಖರ್‌. ವಿಜಯ್‌ ಟಾಟಾ, ಚಂದ್ರಶೇಖರ್‌ ಸೇರಿ ವಾಹಿನಿ ಹಾಗೂ ಸಿಸಿಬಿಯಲ್ಲಿದ್ದ ಅಧಿಕಾರ ಬಳಸಿಕೊಂಡು ಬೆದರಿಕೆ ಹಾಕಿ ಹಲವು ಬಿಲ್ಡರ್‌ಗಳನ್ನು ಸುಲಿಗೆ ಮಾಡಿದ್ದಾರೆ. 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರ ವಿರುದ್ಧ ರೌಡಿಶೀಟರ್‌ ಶ್ರೀಧರ್‌ ದೂರಿನಿಂದ ಇಬ್ಬರ ಆಟ ಬೆಳಕಿಗೆ ಬಂದಿತ್ತು. ಫೋರ್ಜರಿ ಪ್ರಕರಣದಲ್ಲಿ ಹಿಂದಿನ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಕೂಡ ಇಬ್ಬರ ವಿರುದ್ಧ ದೂರು ದಾಖಲಿಸಲು ಸೂಚಿಸಿದ್ದರು. ಆಂಬಿಡೆಂಟ್‌ ಕಂಪೆನಿಗೂ ಬೆದರಿಕೆ ಹಾಕಿದ್ದರು. ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳೂ ಕಿರುಕುಳ ತಾಳಲಾರದೆ ದೂರುಗಳನ್ನು ಕೊಟ್ಟಿರುವುದಿದೆ. ರಾಜಕಾಲುವೆ, ಕೆರೆ ಒತ್ತುವರಿ ಮಾಡಿಕೊಂಡು ಪತ್ನಿ ಹೆಸರಿನಲ್ಲಿ 38 ಅಂತಸ್ತಿನ ಕಟ್ಟಡ ಕಟ್ಟುತ್ತಿದ್ದಾನೆ ಎಂದು ದೂರಿದರು.

ಕಾನೂನುಬಾಹಿರ ಕೃತ್ಯ

ಮೊದಲೇ ಸರಣಿ ಅಪರಾಧಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಐಜಿಪಿ ಚಂದ್ರಶೇಖರ್‌ ಅವರಿಗೆ ರಾಜ್ಯ ಸರಕಾರ ಆಮಿಷ ಒಡ್ಡಿ ಹಲವು ಕಾನೂನುಬಾಹಿರ ಕೃತ್ಯ ಮಾಡಿಸುತ್ತಿದೆ. ಅವರಿಗೆ ಬೆಂಗಳೂರು ನಗರದ ಪೊಲೀಸ್‌ ಆಯುಕ್ತರ ಹುದ್ದೆಯ ಆಮಿಷವನ್ನೂ ವೊಡ್ಡಲಾಗಿದೆ. ಈ ಸರಕಾರ ಒಬ್ಬರಿಗೆ ಈ ರೀತಿಯ ಆಮಿಷ ಒಡ್ಡಿಲ್ಲ. ಬಿ.ಕೆ. ಸಿಂಗ್‌, ಎಂ. ಚಂದ್ರಶೇಖರ್‌, ಗುಪ್ತದಳ ಮುಖ್ಯಸ್ಥರು ಸೇರಿದಂತೆ ಅನೇಕರಿಗೆ ಕಮಿಷನರ್‌ ಮಾಡುತ್ತೇವೆ ಎಂದು ಟೋಪಿ ಹಾಕಿದೆ. ಇಂತಹ ಸರಕಾರದಲ್ಲಿ ತನಿಖೆಗಳು ಪಾರದರ್ಶಕವಾಗಿ ನಡೆಯುತ್ತವೆ ಎನ್ನುವ ನಂಬಿಕೆ ಇಲ್ಲ.

ಚಂದ್ರಶೇಖರ್‌ರಿಂದಲೇ ಪತ್ರ ಸೋರಿಕೆ

ನನ್ನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಲೋಕಾಯುಕ್ತಕ್ಕೆ ಬರೆದಿದ್ದ ಅತಿ ಗೌಪ್ಯ ಪತ್ರವೊಂದು ಸೋರಿಕೆ ಆಗಿತ್ತು. ಅದು ನಮ್ಮ ಕುಟುಂಬದ ವಿರುದ್ಧ ಅನೇಕ ತಿಂಗಳಿನಿಂದ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವ ಖಾಸಗಿ ಸುದ್ದಿವಾಹಿನಿಗೆ ಆ ಪತ್ರ ಸೋರಿಕೆ ಆಗಿತ್ತು. ಅದು ಐಜಿಪಿ ಚಂದ್ರಶೇಖರ್‌ ಅವರಿಂದಲೇ ಸೋರಿಕೆ ಆಗಿದೆ. ಆತನಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧದ ತನಿಖೆಗಳು  ಏನಾದವು?

ನಾನು ಬಹಳ ಕ್ಲೀನ್‌, ಪಾರದರ್ಶಕ, ನನ್ನ ಜೀವನ ತೆರೆದ ಪುಸ್ತಕ ಎಂದೆಲ್ಲ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ ಪ್ರಕರಣಗಳ ಕಥೆ ಏನಾಗಿದೆ? ಅವುಗಳ ತನಿಖೆ ಎಲ್ಲಿಗೆ ಬಂದಿದೆ ಎಂಬುದನ್ನು ಜನರಿಗೆ ಹೇಳಬೇಕಲ್ಲವೇ? ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಮಧ್ಯರಾತ್ರಿ ಹಠಾತ್‌ ಎದ್ದು ಕೂತಿದ್ದೇಕೆ?

ನಾನು ಯಾವುದಕ್ಕೂ ಹೆದರುವುದಿಲ್ಲ ಎನ್ನುವ ಸಿದ್ದರಾಮಯ್ಯ ಮಧ್ಯರಾತ್ರಿ 1.50- 2 ಗಂಟೆ ವೇಳೆಯಲ್ಲಿ ಏನನ್ನೋ ಕನವರಿಸುತ್ತ ಹಠಾತ್‌ ಎದ್ದು ಕುಳಿತರಂತೆ. ವೈದ್ಯರನ್ನೂ ಕರೆಯಿಸಿಕೊಂಡರಂತೆ. ಹೊರ ಹೋಗಬೇಕು ಎಂದಾಗ, ನೀವೆಲ್ಲೂ ಹೋಗುವಂತಿಲ್ಲ, ಕತ್ತಲಾಗಿದೆ ಇಲ್ಲೇ ಇರಬೇಕೆಂದು ತಡೆದರು ಎಂದು ಸಿಎಂ ನಿವಾಸದ ಕೆಲಸದವರು ಹೇಳುತ್ತಿದ್ದರು ಎಂಬುದಾಗಿ ಕುಮಾರಸ್ವಾಮಿ ಕತೆ ಬಿಚ್ಚಿಟ್ಟರು. ಹಿಂದೆ ಯಡಿಯೂರಪ್ಪ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ವೇಳೆ ರಾಜ್ಯ ಪಾಲರನ್ನು ಬಹಳಷ್ಟು ಹೊಗಳಿದ್ದ ಸಿದ್ದರಾಮಯ್ಯ, ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರನ್ನು ಹೀನಾಮಾನವಾಗಿ ತೆಗಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮಾಡಿದ್ದ ಭಾಷಣದ ತುಣುಕು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next