ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರ್ಭಟಕ್ಕೆ ಅನೇಕ ಕಡೆ ಪ್ರವಾಹದ ಸ್ಥಿತಿ ಉಂಟಾಗಿದ್ದರೆ, ರಾಜ್ಯದ ಕೆಲವು ಗ್ರಾಮೀಣ ಭಾಗಗಳಲ್ಲಿ ಇನ್ನೂ ಕುಡಿಯವ ನೀರಿನ ಹಾಹಾಕಾರವಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರಕಾರ ಅಗತ್ಯ ಹಣ ಬಿಡುಗಡೆ ಮಾಡಿದೆ.
ಅದರಂತೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಎಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಯಾರಾದ “ನಿಯೋಜಿತ ರೂಪುರೇಷೆ’ ವರದಿ ಆಧಾರದಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆಯಿಂದ ಸರಕಾರದ ವತಿಯಿಂದ 5.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಿಂದ ಈ ಹಿಂದೆ ಒದಗಿಸಿದ್ದ 1 ಕೋಟಿ ರೂ. ಸೇರಿ ಸರಕಾರ ಒಟ್ಟು 6.14 ಕೋಟಿ ರೂ. ನೀಡಿದಂತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಮಾಹಿತಿನೀಡಿದ್ದು, ರಾಜ್ಯದ ಹಲವೆಡೆ ಮುಂಗಾರಿನ ಅಭಾವ ಎದುರಾಗಿದ್ದು ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ರಾಜ್ಯದಲ್ಲಿ ಬರದ ಛಾಯೆ ಎದುರಾಗುವ ಮುನ್ನವೇ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಈ ಬಗ್ಗೆ ಸರಕಾರ ಸಂಪುಟ ಉಪ ಸಮಿತಿ ರಚಿಸಿ 2 ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಪಷ್ಟ ಚಿತ್ರಣ ರೂಪಿಸಿದೆ. ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗ ದಂತೆ ನೋಡಿಕೊಳ್ಳುತ್ತೇವೆ ಎಂದು ಶಾಸನ ಸಭೆಯಲ್ಲೂ ಸರಕಾರ ಪುನರುಚ್ಚರಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜಿ.ಪಂ. ಸಿಇಒ ಜತೆಗೆ ಕಳೆದ ಒಂದು ತಿಂಗಳಲ್ಲಿ 2 ವಿಸ್ತೃತ ಸಭೆ ನಡೆಸಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಪೂರ್ವ ನಿಯೋಜಿತ ರೂಪುರೇಷೆ ತಯಾರಿಸುವಂತೆ ಸೂಚಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.
514 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ವರದಿಯಲ್ಲಿ ನೀಡಿರುವಂತೆ ಒಟ್ಟು 101 ತಾಲೂಕುಗಳ 366 ಗ್ರಾಮ ಪಂಚಾಯತ್‌ಗಳಲ್ಲಿ 514 ಹಳ್ಳಿಗಳಿಗೆ 254 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಒಟ್ಟು ರಾಜ್ಯಾದ್ಯಂತ ಟ್ಯಾಂಕರ್‌ಗಳಲ್ಲಿ ಪ್ರತಿ ದಿನ 703 ಟ್ರಿಪ್‌ಗ್ಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುವುದು. ಜತೆಗೆ 465 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಜನರಿಗೆ ಸರಬರಾಜು ಮಾಡಲೂ ಹಣ ಒದಗಿಸಲಾಗಿದೆ.
ಕಲುಷಿತ ನೀರು; ಬೋರ್‌ವೆಲ್ ಸ್ಥಗಿತ
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆಹಳ್ಳಿ ಗ್ರಾಮದ ಒಂದು ನಿರ್ದಿಷ್ಟ ಕೊಳವೆಬಾವಿಯ ನೀರು ಕಲುಷಿತವಾಗಿರುವುದು ಪತ್ತೆ ಯಾಗಿದ್ದು, ಈ ಕೊಳವೆ ಬಾವಿ ನೀರು ಪೂರೈಕೆ ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕಲುಷಿತ ನೀರು ಸೇವಿಸಿ 20 ಮಂದಿ ಅಸ್ವಸ್ಥರಾಗಿದ್ದು, 8 ಮಂದಿ ಹರಪನಹಳ್ಳಿ ಸರಕಾರಿ ಆಸ್ಪತ್ರೆ ಹಾಗೂ ಮೂವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಒಬ್ಬರನ್ನು ದಾವಣಗೆರೆ ಸಿಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸುಧಾರಣೆಯಾಗುತ್ತಿದೆ. ಕಲುಷಿತ ನೀರು ಸರಬರಾಜಾಗುತ್ತಿದ್ದ ಪ್ರದೇಶದಿಂದ 16 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ನಿರಂತರ ಕಣ್ಗಾವಲು ಮಾಡಲಾಗುತ್ತಿದೆ. ಈ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.