ನಾಯಕನಿಗೆ ಬೋರ್‌ವೆಲ್ ತೋಡುವ ಕಾಯಕ. ನಾಯಕಿ ಆಟೋ ಓಡಿಸುವ ಚಾಲಕಿ. ಇವರಿಬ್ಬರದ್ದೂ ಸಾತ್ವಿಕ-ಸರಳ ಜೀವನ ಅಂದುಕೊಳ್ಳುವಷ್ಟರಲ್ಲಿ ಎರಡು ಭೀಕರ ಕೊಲೆಗಳಾಗುತ್ತವೆ. ಅದಕ್ಕೂ ನಾಯಕನಿಗೂ ಸಂಬಂಧವಿದೆಯಾ ಅಂದುಕೊಳ್ಳುತ್ತಿರುವಾಗಲೇ ಕಥೆಗೊಂದು ಟ್ವಿಸ್ಟ್ ಸಿಗುತ್ತದೆ. ಅದರ ಬೆನ್ನಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಭಿನಂದನ್ (ಎಸ್. ನಾರಾಯಣ್) ಎಂಟ್ರಿ ಕೊಡುತ್ತಾರೆ. ಅಲ್ಲಿಂದ ಕಥೆಯ ಓಘ ಮತ್ತಷ್ಟು ಹೆಚ್ಚಾಗುತ್ತದೆ.
ತನಿಖೆಯಿಂದ ಒಂದೊಂದೇ ಸಿಕ್ಕುಗಳನ್ನು ಬಿಡಿಸುತ್ತಾ ಸಾಗುವ ಅಭಿನಂದನ್, ಮಧ್ಯಂತರದ ವೇಳೆಗೆ ಒಂದೊಳ್ಳೆ ಶಾಕ್ ಕೊಟ್ಟು ಬ್ರೇಕ್ ಕೊಡುತ್ತಾರೆ. ಮೊದಲಾರ್ಧದಲ್ಲಿ ನಡೆದ ಕೊಲೆಗಳು ಹಾಗೂ ದ್ವಿತೀಯಾರ್ಧದಲ್ಲಿ ನಡೆಯುವ ಮತ್ತಷ್ಟು ಕೊಲೆಗಳ ಜಾಡು ಹಿಡಿಯುವುದೇ ಅಭಿನಂದನ್ ಫುಲ್ ಟೈಂ ಕೆಲಸ. ಸರಣಿ ಕೊಲೆಗಳು, ಐವರ ದುಷ್ಟಕೂಟ, ಬ್ಲಿಡ್ ಮಾಫಿಯಾ, ನಡುನಡುವೆ ಕೆಲವೊಂದು ಟ್ವಿಸ್ಟ್‌ಗಳು…
ಒಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಕ್ಕೆ ಬೇಕಾದ ಎಲ್ಲ ಸರಕನ್ನು ಇಟ್ಟುಕೊಂಡು ಎಸ್. ನಾರಾಯಣ್ “5ಡಿ’ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲಲ್ಲಿ ಒಂದಷ್ಟು ತಿರುವುಗಳು ನೋಡುಗರಿಗೆ ಎದುರಾಗುತ್ತವೆ. ಪ್ರಮುಖ ಪಾತ್ರಧಾರಿಗಳ ಜತೆಗೆ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾನಾ ದಿಕ್ಕಿನಲ್ಲಿ ಸಾಗುವ ಕಥೆಯಲ್ಲಿ ಒಂದು ಸಂದೇಶ ಹೇಳುವ ಪ್ರಯತ್ನ ಕೂಡ ಮಾಡಲಾಗಿದೆ. ಅಂತಿಮವಾಗಿ ಕಥೆಯ ಕೊನೆಗೆ ಒಂದು ತೀರ್ಪು ಕೊಟ್ಟು “ಶುಭಂ’ ಹಾಡಲಾಗುತ್ತದೆ.
ಆದಿತ್ಯ ಮೊದಲಾರ್ಧ ಗಂಭೀರವಾಗಿದ್ದರೂ, ಅದು ಕಥೆಗೆ ಪೂರಕವಾಗಿದೆ ಎಂಬುದು ನಂತರ ತಿಳಿಯುತ್ತದೆ. ಅದಿತಿ ಇದ್ದಷ್ಟು ಹೊತ್ತು ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಜ್ಯೋತಿ ರೈ ಎರಡೂ ಶೇಡ್ ಗಳಲ್ಲಿ ಗಮನ ಸೆಳೆಯುತ್ತಾರೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “5ಡಿ’ ನೋಡಿಬರಬಹುದು.
ರವಿಪ್ರಕಾಶ್ ರೈ