Advertisement

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

12:35 AM Oct 06, 2024 | Team Udayavani |

ಚಾಮರಾಜನಗರ: ಆನೆಗಳ ಆವಾಸಕ್ಕೆ ಪ್ರಶಸ್ತವಾದ ಅರಣ್ಯಗಳನ್ನು ಹೊಂದಿರುವ ರಾಜ್ಯದಲ್ಲಿ ಈ ವರ್ಷದ ಜನವರಿಯಿಂದ ಇದುವರೆಗೆ 59 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ 50 ಆನೆಗಳು ಸಹಜವಾಗಿ ಮೃತಪಟ್ಟರೆ, 9 ಅಸ್ವಾಭಾವಿಕ ಕಾರಣಗಳಿಂದ ಸತ್ತಿವೆ.

Advertisement

ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗಿದ್ದು, 25 ಆನೆಗಳು ಸಹಜ ಸಾವಿನಿಂದ ಮೃತಪಟ್ಟಿವೆ. (ಗುರುವಾರ ಹೊಸಪುರದಲ್ಲಿ ಕಂದಕಕ್ಕೆ ಬಿದ್ದು ಆನೆಯೊಂದು ಸತ್ತಿರುವುದು ಹೊರತುಪಡಿಸಿ). ಕೊಡಗಿನಲ್ಲಿ 22, ಮೈಸೂರು ಜಿಲ್ಲೆಯಲ್ಲಿ 4, ಚಿಕ್ಕಮಗಳೂರು 5, ದ.ಕನ್ನಡ, ಉ.ಕನ್ನಡ, ಬೆಂಗಳೂರು ಜಿಲ್ಲೆಯಲ್ಲಿ ತಲಾ 1 ಆನೆ ಮೃತಪಟ್ಟಿದೆ.

ರಾಜ್ಯದ ಮಟ್ಟಿಗೆ ಚಾಮರಾಜನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಆನೆಗಳು ವಾಸಿಸುತ್ತಿವೆ. ಇಲ್ಲಿ ಬಂಡೀಪುರ, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಕಾವೇರಿ ಸೇರಿದಂತೆ ಒಟ್ಟು ನಾಲ್ಕು ಸಂರಕ್ಷಿತ ಅರಣ್ಯಗಳಿವೆ. ಈ ಸಾಲಿನ ಗಣತಿ ಪ್ರಕಾರ ರಾಜ್ಯದ ಎಲ್ಲ ಅರಣ್ಯಗಳಲ್ಲಿ ಒಟ್ಟು 6,395 ಆನೆಗಳಿದ್ದು, ಇವುಗಳ ಪೈಕಿ 2,877 ಆನೆಗಳು ಚಾಮರಾಜನಗರ ಜಿಲ್ಲೆಯ ಅರಣ್ಯಗಳಲ್ಲಿವೆ. ಬಂಡೀಪುರ-1,116, ಮಲೆ ಮಹದೇಶ್ವರ-706, ಬಿಳಿಗಿರಿರಂಗನಾಥ-619, ಕಾವೇರಿ ವನ್ಯಜೀವಿ ತಾಣದಲ್ಲಿ 136 ಆನೆಗಳಿವೆ. ಮೈಸೂರು, ಕೊಡಗು ಜಿಲ್ಲೆಗೆ ವ್ಯಾಪಿಸಿರುವ ನಾಗರಹೊಳೆಯಲ್ಲಿ 831ಆನೆಗಳಿವೆ.

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಆನೆಗಳಿರುವುದರಿಂದ ವಯಸ್ಸಿನ ಕಾರಣ, ಕಾದಾಟದಿಂದ ಮೃತಪಡುವ ಪ್ರಕರಣಗಳೂ ಹೆಚ್ಚು.

ನಾಗರಹೊಳೆ ಶಿಬಿರದಲ್ಲಿ ಮೃತಪಟ್ಟ ಆನೆಗಳು
ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಕಳೆದ ವರ್ಷದ ಫೆಬ್ರವರಿಯಲ್ಲಿ ಮೇಯಲು ಹೋಗುವಾಗ ಗುಂಡೇಟು ತಿಂದು ಮೃತಪಟ್ಟಿತ್ತು. ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು. ಕೆಲವು ತಿಂಗಳ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.

Advertisement

ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ಸಂರಕ್ಷಿತ ಅರಣ್ಯ ಸೇರಿ 4 ಅರಣ್ಯಗಳಿದ್ದು, ಇಲ್ಲಿ ಅತಿ ಹೆಚ್ಚು ಆನೆಗಳು ಆವಾಸಸ್ಥಾನವಾಗಿರುವುದರಿಂದ ಸಹಜ ಸಾವಿನ ಪ್ರಕರಣಗಳು ಸಹ ಹೆಚ್ಚು. ಆನೆಗಳು ಮೃತಪಟ್ಟ ಅನೇಕ ದಿನಗಳ ಅನಂತರ ಪತ್ತೆಯಾಗಿರುವುದು ಸಮಸ್ಯೆಯನ್ನು ಎತ್ತಿ ತೋರಿಸಿದೆ.
-ಟಿ.ಹೀರಾಲಾಲ್‌,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾ.ನಗರ ವೃತ್ತ

 ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next