ಎಚ್.ಡಿ.ಕೋಟೆ: ತಾಲೂಕಿನ 39 ಗ್ರಾಮ ಪಂಚಾಯಿತಿಗಳಿಗೆ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮಂಜೂರಾಗಿರುವ 570 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವಂತೆ ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು ಮತ್ತು ತಾಲೂಕು ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯ ತನಕ ತಾಲೂಕಿನಿಂದ 1700 ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 570 ಮನೆ ಮಂಜೂರಾಗಿವೆ. ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ನೂತನ ತಾಲೂಕು ಪಂಚಾಯಿತಿ ಕಟ್ಟಡದ ಕಾಮಗಾರಿ ಪರಿಶೀಲಿಸಿದ ಶಾಸಕರು, ಗುಣಮಟ್ಟದ ಕಾಮಗಾರಿ ನಡೆಯಬೇಕು, ಜನರ ಅಗತ್ಯತೆಗೆ ತಕ್ಕಂತೆ ಶೌಚಾಲಯ ನಿರ್ಮಿಸಬೇಕು. ಕಾಮಗಾರಿ ಕಳಪೆಯಾದರೆ ಸಂಬಂಧ ಪಟ್ಟವರನ್ನೇ ಹೊಣೆಗಾರರನ್ನಾಗಿಸುವುದಾಗಿ ಎಇಇ ಪರಮೇಶ್ವರ್ ಅವರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಸ್ಟೇಡಿಯಂಗೆ ಭೇಟಿ ನೀಡಿದ ಶಾಸಕರು, ಕ್ರೀಡಾ ಇಲಾಖೆ ನಿರ್ದೇಶಕ ಓಂಪ್ರಕಾಶ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಸ್ಟೇಡಿಯಂ ಅಭಿವೃದ್ಧಿಗೆ 40 ಲಕ್ಷ ರೂ. ಬಿಡುಗಡೆಯಾಗಿದ್ದು ಕೂಡಲೇ ಸ್ಟೇಡಿಯಂ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಬೇಕು ಎಂದು ಸೂಚಿಸಿದರು.
ಈ ವೇಳೆ ತಹಸೀಲ್ದಾರ್ ಆರ್. ಮಂಜುನಾಥ್,ತಾಪಂಇಒರಾಮಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಆಶಾ, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಪುರಸಭಾ ಸದಸ್ಯರು, ತಾಪಂ ಸದಸ್ಯರು ಹಾಜರಿದ್ದರು.