Advertisement

57 ಲಕ್ಷ ಮಕ್ಕಳಿಗೆ ಸಾರಿಗೆ ಭಾಗ್ಯವಿಲ್ಲ!

03:39 PM May 17, 2019 | pallavi |
ಬೆಂಗಳೂರು: ಖಾಸಗಿ ಶಾಲೆಗೆ ಹೋಗುವ ಪ್ರತಿ ವಿದ್ಯಾರ್ಥಿಯ ಸಾರಿಗೆ ವ್ಯವಸ್ಥೆಯಯನ್ನು ಖುದ್ದು ಪರಿಶೀಲಿಸುವ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದನ್ನೇ ಮರೆತಿದೆ. ಸರ್ಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ರಿಯಾಯ್ತಿ ದರದ ಬಸ್‌ಪಾಸ್‌ ಹಾಗೂ 8ನೇ ತರಗತಿ ಮಕ್ಕಳಿಗೆ ಸೈಕಲ್‌ ವಿತರಣೆ ಹೊರತುಪಡಿಸಿ ಬೇರ್ಯಾವುದೇ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗಿಲ್ಲ.

ಉಳಿದೆಲ್ಲ ತರಗತಿಯ ವಿದ್ಯಾರ್ಥಿಗಳು ಹೇಗೆ ಶಾಲೆಗೆ ಹೋಗುತ್ತಾರೆ. ಯಾವ ಸಾರಿಗೆ ಬಳಸಿಕೊಂಡು ಮನೆಗೆ ಹೋಗುತ್ತಾರೆ ಎನ್ನುವ ಬಗ್ಗೆ ಸರ್ಕಾರ ಗಮನ ಹರಿಸುತ್ತೂಲೇ ಇಲ್ಲ. ರಾಜ್ಯದ ಗ್ರಾಮಾಂತರ ಭಾಗದಲ್ಲಿ 38,496, ನಗರ ಪ್ರದೇಶದಲ್ಲಿ 4,996 ಸರ್ಕಾರಿ ಪ್ರಾಥಮಿಕ ಶಾಲೆ, ಗ್ರಾಮಾಂತರ ಭಾಗದಲ್ಲಿ 3,891, ನಗರ ಪ್ರದೇಶದಲ್ಲಿ 805 ಸರ್ಕಾರಿ ಪ್ರೌಢಶಾಲೆಗಳಿವೆ.

Advertisement

ಹಾಗೇ ಗ್ರಾಮಾಂತರ ಭಾಗದಲ್ಲಿ 6,414, ನಗರ ಪ್ರದೇಶದಲ್ಲಿ 8,014 ಖಾಸಗಿ ಪ್ರಾಥಮಿಕ ಶಾಲೆ, ಗ್ರಾಮಾಂತರ ಭಾಗದಲ್ಲಿ 2,267, ನಗರ ಪ್ರದೇಶದಲ್ಲಿ 4,479 ಖಾಸಗಿ ಪ್ರೌಢಶಾಲೆಗಳಿಗೆ. ಅದೇ ರೀತಿ ರಾಜ್ಯದಲ್ಲಿ 3,015 ಅನುದಾನಿತ ಪ್ರಾಥಮಿಕ ಶಾಲೆ ಹಾಗೂ 3,801 ಅನುದಾನಿತ ಪ್ರೌಢಶಾಲೆಗಳಿವೆ.

ಸರ್ಕಾರಿ ಶಾಲೆಗಳಲ್ಲಿ 21,11,176 ಗಂಡುಮಕ್ಕಳು, 22,68,078 ಹೆಣ್ಣುಮಕ್ಕಳು ಸೇರಿ ಒಟ್ಟು 43,79,254 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಶಾಲೆಗಳಲ್ಲಿ 24,60,838 ಗಂಡುಮಕ್ಕಳು, 19,40,471 ಹೆಣ್ಣುಮಕ್ಕಳು ಸೇರಿ 44,01,309 ವಿದ್ಯಾರ್ಥಿಗಳಿದ್ದಾರೆ.

ಅನುದಾನಿತ ಶಾಲೆಯಲ್ಲಿ 6,94,661 ಗಂಡು ಮಕ್ಕಳು, 6,41,895 ಹೆಣ್ಣು ಮಕ್ಕಳು ಸೇರಿ 13,36,556 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಸುಮಾರು 1.01 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2019-20ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮುಗಿದ ನಂತರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟದ ಏರಿಕೆಯಾಗಲಿದೆ.

ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 44,01,309 ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆಯನ್ನು ಮಾತ್ರ ಖುದ್ದು ಪರಿಶೀಲನೆ ನಡೆಸುವ ಸರ್ಕಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮಾರು 57.15 ಲಕ್ಷ ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆ ಹೇಗಿದೆ ಎಂಬುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಖಾಸಗಿ ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲೆಹಾಕುತ್ತಾರೆ.

ಎಷ್ಟು ವಿದ್ಯಾರ್ಥಿಗಳು ಶಾಲಾ ವಾಹನ ಬಳಸುತ್ತಾರೆ, ಎಷ್ಟು ಮಂದಿ ಸೈಕಲ್‌, ದ್ವಿಚಕ್ರ ವಾಹನ, ಕಾರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಲಕ ಬರುತ್ತಿದ್ದಾರೆ ಎಂಬ ಸಂಪೂರ್ಣ ವಿವರವನ್ನು ಖಾಸಗಿ ಆಡಳಿತ ಮಂಡಳಿಗಳು ಆಗಿಂದಾಗೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಬೇಕು.

ಇಲಾಖೆಯ ಅಧಿಕಾರಿಗಳು ಶಾಲೆಗೆ ಬಂದು ಇದರ ಸಂಪೂರ್ಣ ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಆದರೆ, ಶಾಲಾ ವಾಹನದ ನಿಯಮ ಉಲ್ಲಂಘನೆಯಾದರೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ.

Advertisement

ಚರ್ಚೆ ನಡೆಸಿದರೂ ತೀರ್ಮಾನವಿಲ್ಲ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಾಗೂ ಪೋಷಕರನ್ನು ಆಕರ್ಷಿಸುವ ದೃಷ್ಟಿಯಿಂದ ಪ್ರತಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಒಂದು ಸಾರ್ವಜನಿಕ ಕಾರ್ಪೊರೇಟ್‌ ಹೊಣೆಗಾರಿಯಲ್ಲಿ ಶಾಲೆ ರಚಿಸುವ ಬಗ್ಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ತೀವ್ರ ಚರ್ಚೆ ನಡೆದಿತ್ತು.

ಆ ಶಾಲಾ ಮಕ್ಕಳಿಗೆ ಸರ್ಕಾರದಿಂದಲೇ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆಯಾಗಿತ್ತು. ಅಂತಿಮವಾಗಿ ಯಾವುದೇ ನಿರ್ಧಾರ ಆಗಲಿಲ್ಲ.

ಭದ್ರತಾ ಲೋಪಗಳಿಗೆ ಕಡಿವಾಣವಿಲ್ಲ
ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಬಹುತೇಕ ಪೋಷಕರು ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಶಾಲಾಡಳಿತ ಮಂಡಳಿಯ ವಾಹನಗಳಿಗೆ ದುಬಾರಿ ಶುಲ್ಕ ನೀಡಲು ಯೋಚನೆ ಮಾಡುವುದಿಲ್ಲ. ತಿಂಗಳಿಗೆ 500 ರೂ.ಗಳಿಂದ ಆರಂಭವಾಗಿ 3 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ವಾಹನ ಶುಲ್ಕ ಪಡೆಯುವ ಶಾಲೆಗಳು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿವೆ.

ಕೆಲವೊಂದು ಶಾಲೆಗಳು ಕಿ.ಮೀ ಲೆಕ್ಕದಲ್ಲಿ ಮಕ್ಕಳ ಪಾಲಕ, ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತವೆ. ದುಬಾರಿ ಶುಲ್ಕ ನೀಡಿದರೂ ಭದ್ರತೆ ಹಾಗೂ ಸುರಕ್ಷತೆಯ ಲೋಪದ ಬಗ್ಗೆ ಪ್ರಶ್ನಿಸುವ ಅಧಿಕಾರವನ್ನು ಪಾಲಕ, ಪೋಷಕರಿಗೆ ಶಾಲಾಡಳಿತ ಮಂಡಳಿ ನೀಡಿರುವುದಿಲ್ಲ. ಇದಕ್ಕೂ ಸರ್ಕಾರ ಹಾಗೂ ಇಲಾಖೆ ಕಡಿವಾಣ ಹಾಕಿಲ್ಲ.

ಸರ್ಕಾರಿ ಶಾಲೆಯಲ್ಲೂ ಶಾಲಾ ವಾಹನವಿದೆ
ರಾಜ್ಯದ 50ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಯಿಂದ ಮನೆಗೆ ಹಾಗೂ ಮನೆಯಿಂದ ಶಾಲೆಗೆ ಕರೆದೊಯ್ಯಲು ಶಾಲಾ ವಾಹನದ ವ್ಯವಸ್ಥೆ ಇದೆ. ಇದನ್ನು ಸರ್ಕಾರ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಲ್ಲ.

ಬದಲಾಗಿ ಸ್ಥಳೀಯರು ನೀಡಿದ ಅನುದಾನ, ಹಳೇ ವಿದ್ಯಾರ್ಥಿಗಳ ಸಂಘದ ಶ್ರಮ ಮತ್ತು ಶಾಲಾಭಿವೃದ್ಧಿ ಸಮಿತಿಗಳ ಪರಿಶ್ರಮದಿಂದ ಸರ್ಕಾರಿ ಶಾಲೆಗೂ ವಾಹನ ಬಂದಿದೆ. ಆ ವಾಹನದ ನಿರ್ವಹಣೆಯನ್ನು ಶಾಲೆಗೆ ವಹಿಸಿಲ್ಲ. ಸಂಘ ಅಥವಾ ಸಮಿತಿಯೇ ನೋಡಿಕೊಳ್ಳುತ್ತಿದೆ. ಸ್ಥಳೀಯರೇ ಚಾಲಕರಾಗಿರುವುದರಿಂದ ಮಕ್ಕಳಿಗೆ ಭದ್ರತೆಯೂ ಹೆಚ್ಚಿದೆ.

–ರಾಜು ಖಾರ್ವಿ ಕೊಡೇರಿ
Advertisement

Udayavani is now on Telegram. Click here to join our channel and stay updated with the latest news.

Next