Advertisement

ಮತದಾರರಿಗೆ ಹಂಚಲು ತಂದಿದ್ದ 560 ಬಾಟಲ್ ಗೋವಾ ಮದ್ಯ, ಮೂವರು ಆರೋಪಿಗಳು ವಶಕ್ಕೆ

02:33 PM May 07, 2023 | Shreeram Nayak |

ಮುದ್ದೇಬಿಹಾಳ: ಮತದಾರರಿಗೆ ಆಮಿಷವೊಡ್ಡುವುದಕ್ಕಾಗಿ ಹಂಚಲು ಗೋವಾದಿಂದ ತರಿಸಲಾಗಿದ್ದ ಅತ್ಯಂತ ಕಳಪೆ ಗುಣಮಟ್ಟದ 86000 ರೂ ಮೌಲ್ಯದ 560 ಮದ್ಯದ ಬಾಟಲುಗಳನ್ನ ವಶಪಡಿಸಿಕೊಂಡಿರುವ ಇಲ್ಲಿನ ಅಬಕಾರಿ ಇಲಾಖೆಯ ಸಿಬ್ಬಂದಿ ಒಟ್ಟು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕವಡಿಮಟ್ಟಿ ಗ್ರಾಮದ ಶಿವಪ್ಪ ರಾಮಣ್ಣ ವಣಕಿಹಾಳ ಎಂಬಾತ ಬೈಕ್ ಮೇಲೆ ಚೀಲಗಳಲ್ಲಿ 180 ಎಂಎಲನ 80 ಬಾಟಲಿಯಲ್ಲಿದ್ದ 14.400 ಲೀಟರ್ ಮದ್ಯ ಮತ್ತು ಬೈಕ್ ಸಮೇತ ಸಿಕ್ಕಿಬಿದ್ದಿದ್ದಾನೆ. ಗೆದ್ದಲಮರಿ ಗ್ರಾಮದ ತೋಟದ ಮನೆಯೊಂದರಲ್ಲಿ ಯಾರಿಗೂ ಸಂಶಯ ಬಾರದಂತೆ ಪೊದೆಗಳಲ್ಲಿ ಅಕ್ರಮವಾಗಿ 10 ಬಾಕ್ಸಗಳಲ್ಲಿ ಬಚ್ಚಿಟ್ಟಿದ್ದ 180 ಎಂಎಲನ 480 ಬಾಟಲಿಗಳಲ್ಲಿದ್ದ 86.400 ಲೀಟರ್ ಮದ್ಯ ವಶಪಡಿಸಿಕೊಂಡು ಗ್ರಾಮದ ರಮೇಶ ಹಣಮಂತ ಹರನಾಳ, ಹಣಮಂತ ಬಸಪ್ಪ ಹರನಾಳ ಎಂಬುವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಅಬಕಾರಿ ಉಪ ಅಧೀಕ್ಷಕ ಲಗಮಪ್ಪ ಸಲಗರ ಮಾರ್ಗದರ್ಶನದಲ್ಲಿ ಮುದ್ದೇಬಿಹಾಳ ಅಬಕಾರಿ ನಿರೀಕ್ಷಕ ಎಂ.ಡಿ.ಕಬಾಡೆ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಬಿ.ಎಸ್.ನಾಗಠಾಣ, ಎಂ.ಬಿ.ಹೊಸಮನಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಅರೋಪಿಗಳು ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದು ಈ ಮದ್ಯವನ್ನು ಆ ಪಕ್ಷದಲ್ಲಿರುವ ಮುಖಂಡರೊಬ್ಬರು ತರಿಸಿ ಮತದಾರರಿಗೆ ತಮ್ಮ ಪಕ್ಷದ ಪರವಾಗಿ ಹಂಚಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಕಳಪೆ ಗುಣಮಟ್ಟ:
ಗೋವಾದಲ್ಲಿ ತಯಾರಾಗಿರುವ ರಾಯಲ್ ಬ್ಲೂ ಮಾಲ್ಟ್ ವಿಸ್ಕಿ ಹೆಸರಿನ ಈ ಮದ್ಯವು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಇದನ್ನು ಸೇವಿಸಿದವರು ಆರೋಗ್ಯ ಸಮಸ್ಯೆ ಎದುರಿಸತೊಡಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಮದ್ಯದ ವಿಷಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅಬಕಾರಿ ಕಚೇರಿಯ ಹೆಸರು ಬಹಿರಂಗಪಡಿಸಲಿಚ್ಚಿಸದ ಸಿಬ್ಬಂದಿಯೊಬ್ಬರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next