Advertisement

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

10:59 PM Nov 20, 2024 | Team Udayavani |

ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲಚಿತ್ರೋತ್ಸವದ 55 ನೇ ಆವೃತ್ತಿ ವಿಧ್ಯುಕ್ತವಾಗಿ ಬುಧವಾರ ಸಂಜೆ ಆರಂಭಗೊಂಡಿತು.

Advertisement

ಸಿನಿಮಾ ಕಲಾವಿದರು, ನಿರ್ದೇಶಕರೂ ಸೇರಿದಂತೆ ಸೃಜನಶೀಲ ಸಮುದಾಯದ ಪ್ರತಿನಿಧಿಯ ಅನುಪಸ್ಥಿತಿಯ ಮಧ್ಯೆ ಬರೀ ರಾಜಕಾರಣಿಗಳಿಂದಲೇ ತುಂಬಿದ್ದ ಸಮಾರಂಭದಲ್ಲಿ ವಿಶಿಷ್ಟವೆಂಬಂತೆ ಗುರೂಜಿ ಶ್ರೀ ರವಿಶಂಕರ್ ಅವರು ತೆಂಗಿನ ಗಿಡದ ಕುಂಡಕ್ಕೆ ನೀರು ಹಾಕುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, ನಮ್ಮದು ಕಥೆಗಳನ್ನು ಹೊಂದಿರುವ ಸಾಮ್ರಾಜ್ಯ. ಪ್ರತಿಯೊಬ್ಬರ ಬದುಕಿನಲ್ಲೂ ಕಥೆಗಳಿರುತ್ತವೆ. ಭರವಸೆ ಕಳೆದುಕೊಳ್ಳದೇ ಬದುಕಬೇಕು. ಬಂದೂಕು ಎಲ್ಲದಕ್ಕೂ ಉತ್ತರವಲ್ಲ ಎಂದರು.

ಉತ್ಸವದ ನಿರ್ದೇಶಕ ಶೇಖರ್ ಕಪೂರ್ ಮಾತನಾಡಿ, ಭಾರತ ಕಂಟೆಂಟ್ ಉತ್ಪಾದಿಸುವ ಸಾಧ್ಯತೆಗಳನ್ನು ಹೊಂದಿರುವ ಬೃಹತ್ ದೇಶ. ನಮ್ಮ ಚಿತ್ರರಂಗವೂ ಬಹಳ ದೊಡ್ಡದು. ಅದನ್ನು ಬೆಂಬಲಿಸಬೇಕು, ಇದು ದೊಡ್ಡ ಉತ್ಸವ ಆಗಬೇಕು ಎಂದರು.

Advertisement

ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಜನ್ಮ ಶತಮಾನೋತ್ಸವ ಸಂಸ್ಮರಣೆಯ ಸಂದರ್ಭದಲ್ಲಿ ಹಾಜರಿದ್ದ ನಟ ನಾಗಾರ್ಜುನ ತಮ್ಮ ತಂದೆಯಿಂದ ಕಲಿತಿದ್ದನ್ನು ಪ್ರಶ್ನೆಯೊಂದಕ್ಕೆ ವಿವರಿಸುತ್ತ, ಸಿನಿಮಾ ಏನೆಂಬುದನ್ನು ಕಲಿತೆ. ಬದುಕುವುದನ್ನು ಕಲಿತೆ, ಎಲ್ಲರಿಂದಲೂ ಕಲಿಯುವುದನ್ನು ಕಲಿಸಿದರು. ಅದಕ್ಕಿಂತ ದೊಡ್ಡ ಪಾಠವಿಲ್ಲ ಎನ್ನುವುದನ್ನು ಮರೆಯಲಿಲ್ಲ.

ನಟ ಶರತ್ ಕುಮಾರ್ ರದ್ದು ಯುವಜನರಿಗೆ ಒಂದೇ ಸಲಹೆ. ‘ಪ್ರಯತ್ನ ಪಟ್ಟರೆ ಯಶಸ್ಸು ಇದ್ದೇ ಇದೆ. ಬದುಕಿನಲ್ಲಿ ಸಾಗುತ್ತಲೇ ಇರಬೇಕು.‌ನಟನೂ ಹಾಗೆಯೇ ಕಲಿಯುತ್ತಿರಬೇಕು ಮತ್ತು ಸಾಗುತ್ತಿರಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಪ್ರಮೋದ್‌ ಸಾವಂತರು, ಇಫಿ ಉತ್ಸವ ಗೋವಾ ಕ್ಕೆ ಸಾಕಷ್ಡು ನೀಡಿದೆ. ಈಗ ಇಫಿ ಎಂದರೆ ಗೋವಾ, ಗೋವಾ ಎಂದರೆ ಇಫಿ ಎನ್ನುವಂತಾಗಿದೆ. ಮೂಲಸೌಕರ್ಯಗಳ ಪ್ರಗತಿಗೂ ಅಸ್ಥೆ‌ವಹಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ಖುಷ್ಭೂ, ಅಮಲ ನಾಗಾರ್ಜುನ, ನಟ ಬೊಮಾನ್ ಇರಾನಿ, ನಿತ್ಯಾ ಮೆನನ್, ರಾಜಕುಮಾರ್ ರಾವ್, ಫಿಲ್ಮ್ ಫೆಡರೇಷನ್ ಆಫ್‌ ಇಂಡಿಯಾದ‌ ಅಧ್ಯಕ್ಷ ರವಿ ಕೊಟ್ಟಾರಕರ ಮತ್ತಿತರು ಹಾಜರಿದ್ದರು.

ವಿವಿಧ ತಂಡಗಳು ನೃತ್ಯ ಪ್ರದರ್ಶನ ನೀಡಿದ್ದವು. ಅಭಿಷೇಕ್ ಬ್ಯಾನರ್ಜಿ ಮತ್ತು ಭೂಮಿ ಪೆಡ್ನೇಕರ್ ನಿರೂಪಿಸಿದರು. ಶತಮಾನೋತ್ಸವ ಸಂಸ್ಕರಣೆ ಯಲ್ಲಿ ನಟ ರಾಜ್ ಕಪೂರ್, ಮಹಮ್ಮದ್ ರಫಿ, ಅಕ್ಕಿನೇನಿ ನಾಗೇಶ್ವರ ರಾವ್, ತಪನ್ ಸಿನ್ಹಾರನ್ನು ಸ್ಮರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next