Advertisement

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

05:59 PM Nov 19, 2024 | Team Udayavani |

ಪಣಜಿ : ಒಟಿಟಿ ವೇದಿಕೆಗಳ ವೆಬ್‌ ಸೀರಿಸ್‌ ಗಳ ಪ್ರಶಸ್ತಿಗೆ ಈ ಬಾರಿ ಸೆಣಸುತ್ತಿರುವ ಸೀರಿಸ್‌ ಗಳ ಸಂಖ್ಯೆ ಐದು. ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ದ 55 ನೇ ಆವೃತಿಯಲ್ಲಿ ಈ ಧಾರಾವಾಹಿಗಳಿಗೆ ಪುರಸ್ಕಾರ ನೀಡುತ್ತಿರುವುದು ಎರಡನೇ ಬಾರಿ. ಕಳೆದ ಇಫಿಯಲ್ಲಿ ಈ ವಿಭಾಗವೊಂದು ಆರಂಭವಾಗಿತ್ತು.

Advertisement

ಕೋಟ ಫ್ಯಾಕ್ಟರಿ, ಕಾಲಾ ಪಾನಿ, ಲಂಪನ್‌, ಅಯಲಿ, ಜೂಬ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಧಾರಾವಾಹಿಗಳು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಐದನ್ನು ಆಯ್ಕೆ ಮಾಡಲಾಗಿದೆ.

ಕೋಟ ಫ್ಯಾಕ್ಟರಿ ನೆಟ್‌ ಫ್ಲಿಕ್ಸ್‌ ನಲ್ಲಿ ಲಭ್ಯವಿರುವ ಸೀರಿಸ್. ಕೋಟ ಎಂಬುದು ರಾಜಸ್ಥಾನದ ಒಂದು ಊರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವಂಥ ಸಾವಿರಾರು ಕೋಚಿಂಗ್‌ ಸೆಂಟರ್‌ ಗಳು ಇರುವ ತಾಣ. ಈ ಎಳೆಯನ್ನೇ ಇಟ್ಟುಕೊಂಡು ಶೈಕ್ಷಣಿಕ ಸವಾಲುಗಳನ್ನು ಎದುರಿಸುವ ಮಕ್ಕಳ ಆಕಾಂಕ್ಷೆ, ಪರಿಶ್ರಮ ಹಾಗೂ ಯಶಸ್ಸುಗಳ ಕುರಿತಾಗಿ ವಿವರಿಸುವಂಥದ್ದು. ಸೌರಭ್‌ ಖನ್ನಾ ಇದನ್ನು ರೂಪಿಸಿದ್ದಾರೆ.

ಕಾಲಾ ಪಾನಿ ಮತ್ತೊಂದು ಸೀರಿಸ್. ಸಮೀರ್‌ ಸಕ್ಷೇನಾ ಹಾಗೂ ಅಮಿತ್‌ ಗೊಲಾನಿ ರೂಪಿಸಿರುವ ಇದೂ ಸಹ ನೆಟ್‌ ಫ್ಲಿಕ್ಸ್‌ ನಲ್ಲಿ ಲಭ್ಯವಿದೆ. ಅಂಡಮಾನ್‌ ದ್ವೀಪದಿಂದ ಬದುಕಿ ಬರುವವರ ಕಥೆ. ಇದೊಂದು ಸರ್ವೈವಲ್‌ ಡ್ರಾಮ. ಮೊದಲ ಸರಣಿಯಲ್ಲಿ ಏಳು ಕಥೆಗಳು ಇದ್ದವು.

Advertisement

ನಿಪುನ್‌ ಧರ್ಮಾಧಿಕಾರಿ ರೂಪಿಸಿರುವ ಸೀರಿಸ್‌ ಲಂಪನ್. ಸೋನಿ ಲೈವ್‌ ನಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶದ ತರುಣನೊಬ್ಬನ ಕಥೆ. ಅವನು ಎದುರಿಸುವ ಭಾವನಾತ್ಮಕ ಹಾಗೂ ಸಾಮಾಜಿಕ ಸಂದರ್ಭಗಳು ಹಾಗೂ ಸವಾಲುಗಳನ್ನು ಎದುರಿಸುವ ನೆಲೆಯದ್ದು.

ಜೀ5 ನಲ್ಲಿ ಲಭ್ಯವಿರುವ ಸೀರಿಸ್‌ ಅಯಲಿ. ಮುತ್ತುಕುಮಾರ್‌ ರೂಪಿಸಿರುವ ಇದು ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯರ ಬದುಕಿನ ಕಥೆ. ಸಂಪ್ರದಾಯಗಳು, ಸಮಾಜದ ನಿರೀಕ್ಷೆಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಅಭೀಪ್ಸೆ ಗಳ ನಡುವಿನ ಸಾಧ್ಯತೆಗಳನ್ನು ಶೋಧಿಸುವಂಥದ್ದು.

ವಿಕ್ರಮಾದಿತ್ಯ ಮೋಟ್ವಾನೆಯವರ ಜೂಬ್ಲಿ ಲಭ್ಯವಿರುವುದು ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ. ಭಾರತೀಯ ಸಿನಿಮಾದ ಸುವರ್ಣ ಕಾಲದ ಒಂದು ನೆನಪು ಎಂಬಂತೆ ರೂಪಿಸಲಾಗಿದೆ.

ಪ್ರಶಸ್ತಿ ಪುರಸ್ಕೃತ ಸೀರಿಸ್‌ ನ ನಿರ್ದೇಶಕ, ಕ್ರಿಯೇಟರ್‌, ಪ್ರೊಡ್ಯೂಸರ್‌ ಅವರನ್ನು ಸಮ್ಮಾನಿಸಲಾಗುತ್ತದೆ. ಬಹುಮಾನದ ಮೊತ್ತವೂ 10 ಲಕ್ಷ ರೂ ನಗದು, ಪ್ರಮಾಣ ಪತ್ರವನ್ನು ಒಳಗೊಂಡಿರಲಿದೆ.

ರೆಹಮಾನ್‌ ರಿಂದ ಬೊಮನ್‌ ಇರಾನಿವರೆಗೆ:

ಗಾಲಾ ಪ್ರೀಮಿಯರ್‌ ವಿಭಾಗ ಹದಿನೈದರ ಗುಚ್ಛ. ಸಿನಿಮಾಗಳು, ಸಾಕ್ಷ್ಯಚಿತ್ರಗಳು, ಶೋಕೇಸ್‌ ಗಳಿಂದ ಕೂಡಿದೆ. ಇದಕ್ಕೆ ಹೊಂದಿಕೊಂಡಂತೆ ಕೆಂಪುಹಾಸಿನಲ್ಲಿ ಸಾಗಿ ಹೋಗುವವರ ಪಟ್ಟಿಯೂ ದೊಡ್ಡದಿದೆ.

ಈ ಬಾರಿಯ ಉತ್ಸವದಲ್ಲಿ ಎಆರ್‌ ರೆಹಮಾನ್‌ ರಿಂದ ಬೊಮನ್‌ ಇರಾನಿವರೆಗೆ ಹಲವಾರು ಮಹನೀಯರು ಕಾಣ ಸಿಗುತ್ತಾರೆ. ಶೋಲೆ ಸಿನಿಮಾ ನಿರ್ಮಿಸಿದ ರಮೇಶ್‌ ಸಿಪ್ಪಿಯವರನ್ನೂ ಕಾಣಲೂ ಇಲ್ಲಿಗೇ ಬರಬೇಕು.

ಗಾಲಾ ಪ್ರೀಮಿಯರ್‌ ಗೆ ಹೊಂದಿಕೊಂಡಂತೆ ಕೆಂಪು ಹಾಸಿನಲ್ಲಿ ಸಾಗಿ ಹೋಗುವವರ ಸಾಲಿನಲ್ಲಿ ಎ ಆರ್‌ ರೆಹಮಾನ್‌, ರಮೇಶ್‌ ಸಿಪ್ಪಿ ಡಿಂಪಲ್‌ ಕಪಾಡಿಯಾ, ಬೊಮನ್‌ ಇರಾನಿ, ರಾಣಾ ದಗ್ಗು ಬಟ್ಟಿ, ಆರ್. ಮಾಧವನ್‌, ಪಂಕಜ್‌ ಕಪೂರ್‌, ಛಾಯಾ ಕದಂ, ಪ್ರಭುದೇವ್‌, ಕಾಜಲ್‌ ಅಗರವಾಲ್‌, ನರೇಶ್‌ ಅಗಸ್ತ್ಯ, ದಿವ್ಯೇಂದು ಶರ್ಮ ಸೇರಿದಂತೆ ಹಲವರು ಸೇರಿದ್ದಾರೆ.

ಗಾಲ ಪ್ರೀಮಿಯರ್‌ ನಲ್ಲಿ 9 ಚಿತ್ರಗಳ ವರ್ಲ್ಡ್‌ ಪ್ರೀಮಿಯರ್‌, ನಾಲ್ಕು ಏಷ್ಯಾ ಪ್ರೀಮಿಯರ್‌, ಒಂದು ಭಾರತ ಪ್ರೀಮಿಯರ್‌ ಹಾಗೂ ಒಂದು ಶೋಕೇಸ್‌ ಇದೆ. ಇವುಗಳ ಸಾಲಿನಲ್ಲಿ ಹಿಂದಿ, ಇಂಗ್ಲಿಷ್‌, ಮರಾಠಿ, ಮಲಯಾಳಂ, ತೆಲುಗು ಮತ್ತಿತರ ಭಾಷೆಗಳ ಚಿತ್ರಗಳಿವೆ.

ದಿ ಪಿಯಾನೋ ಲೆಸನ್‌ ಸಿನಿಮಾವೂ ಇಲ್ಲಿಯೇ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ಜೀರೋಸೇ ಸ್ಟಾರ್ಟ್‌, ಸ್ನೋ ಫ್ಲವರ್‌, ಸಾಲಿ ಮೊಹಬ್ಬತ್‌, ಮಿಸ್ಟರ್ಸ್‌, ವಿಕಟ ಕವಿ, ಪುಣೆ ಹೈವೇ, ಹಜಾರ್‌ ವೇಲ ಶೋಲೆ ಪೆಹಲಿಲ ಮಾನುಸ್‌, ದಿ ಮೆಹ್ತಾ ಬಾಯ್ಸ್‌, ಹಿಸಾಬ್‌ ಬರಾಬರ್‌, ಫಾರ್ಮಾ (ಸೀರಿಸ್), ಹೆಡ್‌ ಹಂಟಿಂಗ್‌ ಟು ಬೀಟ್‌ ಬಾಕ್ಸಿಂಗ್‌, ಜಬ್‌ ಕುಲಿ ಕಿತಾಬ್‌ ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ರಾಣಾ ದಗ್ಗುಬಟ್ಟಿ ಷೋ ಸಹ ಈ ಗಾಲಾ ಸರಣಿಯಲ್ಲೇ ಸೇರಿಕೊಂಡಿದೆ. ವಿಷ್ಣು ಮಂಚು ಅವರ ಕಣ್ಣಪ್ಪ ಶೋಕೇಸ್‌ ವಿಭಾಗದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

ಗಾಲಾ ಪ್ರೀಮಿಯರ್‌ ವಿಭಾಗದಲ್ಲಿ ಈ ಹಿಂದೆ ಹಲವಾರು ಸಿನಿಮಾಗಳು ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ್ದವು. ದೃಶ್ಯಂ 2, ಗಾಂಧಿ ಟಾಕ್ಸ್‌, ಫೌದಾ ಸರಣಿ ಮುಂತಾದವು ಪ್ರದರ್ಶನಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next