Advertisement

ಮೀನುಗಾರರಿಗೆ 5.55 ಕೋ. ರೂ. ಬಡ್ಡಿ ಸಹಾಯಧನ ಬಿಡುಗಡೆ: ಪ್ರಮೋದ್‌

03:45 AM Jul 02, 2017 | Team Udayavani |

ಉಡುಪಿ: ಜಿಲ್ಲೆಯಲ್ಲಿ ಈವರೆಗೆ 5,830 ಮಂದಿ ಮೀನುಗಾರಿಕಾ ಸಾಲ ಪಡೆದಿದ್ದು, ಬಡ್ಡಿ ಸಹಾಯಧನ 5.55 ಕೋ. ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ ಸುಮಾರು 3 ಕೋ. ರೂ. ಅಷ್ಟು ಮೊತ್ತ ಬಿಡುಗಡೆಗೆ ಬಾಕಿ ಇದ್ದು, ಸಂಬಂಧ‌ಪಟ್ಟ ಬ್ಯಾಂಕ್‌ಗಳು ವಿವರವಾದ ಪ್ರಸ್ತಾವನೆಯನ್ನು ತಡಮಾಡದೆ ಆದಷ್ಟು ಬೇಗ ಕಳುಹಿಸಬೇಕು ಎಂದು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. 
 
ಉಡುಪಿ ತಾ. ಪಂ. ಸಭಾಂಗಣದಲ್ಲಿ ಮೀನುಗಾರರ ಬಡ್ಡಿ ಸಹಾಯಧನ ಮರುಪಾವತಿ ಬಗ್ಗೆ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮೀನುಗಾರಿಕಾ ಉದ್ದೇಶಕ್ಕಾಗಿ ಶೇ. 2 ರ ಬಡ್ಡಿದರದಲ್ಲಿ ಮೀನುಗಾರ ಮಹಿಳೆಯರಿಗೆ ನೀಡುತ್ತಿರುವ ಸಾಲಗಳ ಬಡ್ಡಿ ಸಹಾಯಧನ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿಳಂಬ ಮಾಡದೆ, ಸಕಾಲದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಸಾಲ ಕೊಡುವಾಗ ನಡೆಯುವ ಅಕ್ರಮ ತಡೆಯಲು ಹಾಗೂ ಅರ್ಹ ವ್ಯಕ್ತಿಗಳಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಸಾಲ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಕಠಿನಗೊಳಿಸಲು ಚಿಂತಿಸಲಾಗಿದೆ. ಈ ಬಗ್ಗೆ ಶೀಘ್ರ ಬ್ಯಾಂಕ್‌ಗಳು, ಮೀನುಗಾರಿಕಾ ಅಧಿಕಾರಿಗಳು ಹಾಗೂ ಮೀನುಗಾರರ ಸಭೆಯನ್ನು ಕರೆದು ಚರ್ಚಿಸಲಾಗುವುದು ಎಂದು ಹೇಳಿದರು. 
 
ಅರ್ಹರಿಗೆ ಸಾಲ ನೀಡಿ
ಮೀನುಗಾರಿಕಾ ಸಾಲವನ್ನು ಕೆಲವು ವ್ಯಕ್ತಿಗಳು ಸುಳ್ಳು ದಾಖಲೆಗಳೊಂದಿಗೆ ಪಡೆಯುತ್ತಿದ್ದು, ಅಂತಹ ವ್ಯಕ್ತಿಗಳಿಂದ ಮರುಪಾವತಿ ಕಷ್ಟವಾಗುತ್ತಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಸಾಲವನ್ನು ಅರ್ಹ ವ್ಯಕ್ತಿಗಳಿಗೆ ಮಾತ್ರ ನೀಡಬೇಕು. ಈ ಕುರಿತು ಬ್ಯಾಂಕ್‌ಗಳು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಫ್ರಾನ್ಸಿಸ್‌ ಭೋರ್ಜಿಯಾ, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್‌, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು. 

“ಸಾಲ ಮರು ಪಾವತಿ: ಸಮಯ ಕೊಡಿ’
ಬ್ಯಾಂಕ್‌ಗಳು ಕಾಲ ಕಾಲಕ್ಕೆ ಮಾಹಿತಿಗಳನ್ನು ನೀಡುತ್ತಿರಬೇಕು. ವಿಳಂಬ ಮಾಡಿದಲ್ಲಿ ಹಣ ಬಿಡುಗಡೆ ಮಾಡಲು ಅಡ್ಡಿಯಾಗುತ್ತದೆ. 2 ವರ್ಷಗಳ ಅವಧಿಯೊಳಗೆ ಸಾಲ ಮರುಪಾವತಿ ಮಾಡಬೇಕಾದ ಗಡುವು ಇರುವುದರಿಂದ ಅವರಿಗೆ ಶೇ. 12 ರಷ್ಟು ಬಡ್ಡಿದರದಲ್ಲಿ ಸಾಲತೀರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಉದ್ಯಮಿಗಳಾದ ವಿಜಯ ಮಲ್ಯ, ಅದಾನಿ, ಅಂಬಾನಿ ಅವರಿಗೆ ಹೋಲಿಸಿದರೆ ಮೀನುಗಾರರ ಸಾಲ ಏನೂ ಅಲ್ಲ. ಹಾಗಾಗಿ ಸಾಲ ಪಾವತಿಗೆ ಸ್ಪಲ್ಪ ಕಾಲಾವಕಾಶ ನೀಡಿ. ಇನ್ಮುಂದೆ ಹಾಗೆ ಆಗದಂತೆ ನೋಡಿಕೊಳ್ಳಿ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಸಲಹೆ ನೀಡಿದರು. 
 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next