Advertisement

54th IFFI Goa:ನಿರ್ದೇಶಕನ ನಿರೀಕ್ಷೆ ಈಡೇರಿಸುವುದು ನಟನ ಆದ್ಯತೆ: ನಟ ವಿಜಯ್‌ ಸೇತುಪತಿ

02:41 PM Nov 22, 2023 | Team Udayavani |

ಪಣಜಿ: ‘ಪ್ರತಿ ಬಾರಿಯೂ ಕೆಮರಾದ ಎದುರು ನಿಂತಾಗಲೂ ಕಷ್ಟ ಎನಿಸುತ್ತದೆ, ಕಾರಣ, ನಾನು ಪ್ರತಿ ಬಾರಿಯೂ ಹೊಸ ಪಾತ್ರಕ್ಕೆ ಜೀವ ತುಂಬುತ್ತಿರುತ್ತೇನೆ. ಒಬ್ಬ ನಿರ್ದೇಶನಕ ನಿರೀಕ್ಷೆಯನ್ನು ಈಡೇರಿಸುವತ್ತ ನನ್ನ ಮನಸ್ಸು ಯೋಚಿಸುತ್ತಿರುತ್ತದೆ’ ಎಂದವರು ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್‌ ಸೇತುಪತಿ.

Advertisement

ಇದನ್ನೂ ಓದಿ:ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ನೇಮಕ

ತಮ್ಮ ಗಾಂಧಿ ಟಾಕ್ಸ್ ಚಿತ್ರವು ಗಾಲಾ ಪ್ರೀಮಿಯರ್‌ ನಲ್ಲಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಪಾತ್ರವೂ ನನಗೆ ವಿಭಿನ್ನವೇ ಎಂದರು.

‘ಪ್ರತಿ ಚಿತ್ರದ ಸಂದರ್ಭದಲ್ಲೂ ನಾನು ಮೊದಲು ನಿರ್ದೇಶಕರಲ್ಲಿ ತಮಗೆ ಏನು ಬೇಕೆಂದು ಕೇಳುತ್ತೇನೆ. ಇದರ ಉದ್ದೇಶ ಅವರು ತಮ್ಮ ಪಾತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ? ಅದರಲ್ಲಿ ನಾನು ನಿರ್ವಹಿಸಬೇಕಾದದ್ದು ಏನು ಎಂಬುದನ್ನು ಗ್ರಹಿಸಿಕೊಳ್ಳುತ್ತೇನೆ. ಬಳಿಕ ನಟಿಸುತ್ತೇನೆ. ಯಾಕೆಂದರೆ ಪ್ರತಿ ಪಾತ್ರವೂ ನಿರ್ದೇಶಕರಿಂದ ರಚಿಸಲ್ಪಟ್ಟದ್ದು. ಅವರ ನಿರೀಕ್ಷೆಯನ್ನು ಈಡೇರಿಸುವಂಥದ್ದು ನಟನಾದ ನನ್ನ ಆದ್ಯತೆ’ ಎಂಬುದು ಅವರ ಅಭಿಪ್ರಾಯ.

ಗಾಂಧಿ ಟಾಕ್ಸ್ ಸೈಲೆಂಟ್‌ ಚಿತ್ರ. ಶಾರಿಖ್‌ ಪಟೇಲ್ ಮತ್ತು ರಾಜೇಶ್ ಖೇಜ್ರಿವಾಲ್  ನಿರ್ಮಿಸಿ ಕಿಶೋರ್ ಪಾಂಡುರಂಗ ಬೇಳೇಕರ್ ನಿರ್ದೇಶಿಸಿದ್ದಾರೆ. ನಟರಾದ ವಿಜಯ್ ಸೇತುಪತಿ, ಅರವಿಂದ ಸ್ವಾಮಿ, ಅದಿತಿ ರಾವ್‌ ಹೈದರ್, ಸಿದ್ಧಾರ್ಥ್‌ ಜಾಧವ್ ಮತ್ತಿತರರು ನಟಿಸಿದ್ದಾರೆ.

Advertisement

‘ಕಲೆ ಎಂಬುದು ನಮ್ಮನ್ನು ಹರಸಿದರೆ ನಾವು ಪ್ರೇಕ್ಷಕರ ಮನವೊಲಿಸುವಲ್ಲಿ ಗೆಲ್ಲಬಲ್ಲೆವು. ಪ್ರತಿ ಬಾರಿಯೂ ನಾನು ಪಾತ್ರವನ್ನು ಆರಂಭಿಸುವಾಗ ಮನಸ್ಸಿನಲ್ಲಿ ಕೇಳಿಕೊಳ್ಳುವುದು ಅದನ್ನೇ’ ಎಂದು ಪಾತ್ರಗಳ ಅಭಿನಯದ ಬಗೆಗೆ ವಿವರಿಸಿದ ಸೇತುಪತಿ, ‘ಪಾತ್ರಗಳ ಆಯ್ಕೆಯಲ್ಲಿ ಲೆಕ್ಕಾಚಾರ ಕಡಿಮೆ. ಆದರೆ ಆ ಹೊಸ ಪಾತ್ರದ ಮೂಲಕ ನಾನು ಏನು ಹೊಸದು ಕೊಡಬಹುದು, ಹೊಸ ಪ್ರಯತ್ನ ಏನು ಮಾಡಬಹುದು ಎಂಬುದನ್ನು ಆಧರಿಸಿ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ’ ಎಂದದ್ದು ಪಾತ್ರಗಳ ಆಯ್ಕೆ ಕುರಿತು.

ಗಾಂಧಿ ಟಾಕ್ಸ್ ಸಿನಿಮಾದ ಕುರಿತು ಮಾತನಾಡಿ, ಯಾವಾಗಲೂ ಸತ್ಯ ವಾಸ್ತವಕ್ಕಿಂತ ಭಿನ್ನವಾಗಿರುತ್ತದೆ. ಅವೆರಡೂ ಬೇರೆಯೇ ಸಂದರ್ಭಗಳು. ಈ ಸಿನಿಮಾದಲ್ಲೂ ಕಥಾ ನಾಯಕ ಮೊದಲು ನೋಟುಗಳಲ್ಲಿ ಗಾಂಧಿಯ ಚಿತ್ರವನ್ನು ನೋಡುತ್ತಾನೆ. ಬಳಿಕ ಗಾಂಧಿ ಬಗ್ಗೆ ಯೋಚಿಸತೊಡಗುತ್ತಾನೆ. ಈ ದ್ವಂದ್ವದ ಸ್ಥಿತಿಯನ್ನು ಸಿನಿಮಾ ಹಿಡಿದಿಡಲು ಪ್ರಯತ್ನಿಸುತ್ತದೆ’ ಎಂದು ವಿವರಿಸುತ್ತಾರೆ ಸೇತುಪತಿ.

ಆ್ಯಕ್ಷನ್ ಮತ್ತಿತರ ಪ್ರಕಾರದ ಸಿನಿಮಾಗಳಿಗೆ ಹೆಸರುವಾಸಿಯಾದ ನೀವು ಹೀಗೆ ಸೈಲೆಂಟ್‌ ಚಿತ್ರದಲ್ಲಿ ಏಕೆ ನಟಿಸಿದಿರಿ ಎಂಬ ಪ್ರಶ್ನೆಗೆ, ‘ಇದೊಂದು ಪಾತ್ರದ ಅನ್ವೇಷಣೆ. ವಿಶೇಷವೆನಿಸಿತು’ ಎಂದರು. ಒಂದುವೇಳೆ ಈ ಸಿನಿಮಾ ಸೋತರೆ ಎಂಬ ಮರು ಪ್ರಶ್ನೆಗೆ, ‘ಸೋಲು ಮತ್ತು ಗೆಲುವು ಪ್ರತಿ ಸಿನಿಮಾದಲ್ಲೂ ಇದ್ದೇ ಇರುತ್ತದೆ. ಅದು ಸೈಲೆಂಟ್‌ ಅಥವಾ ಆ್ಯಕ್ಷನ್ ಎಂಬ ಭೇದವಿರದು. ಆ ರಿಸ್ಕ್ ನಾವು ತೆಗೆದುಕೊಳ್ಳಲೇಬೇಕು. ನಟನೆ ವೃತ್ತಿಯಲ್ಲಿ ಸಣ್ಣ ಅಳುಕು ಎಂಬುದು ಸದಾ ಇದ್ದೇ ಇರುತ್ತದೆ. ಅದರೊಂದಿಗೇ ಬದುಕಬೇಕು’ ಎಂದರು.

ಸೈಲೆಂಟ್‌ ಮೂವಿಗಳಲ್ಲಿ ಪುಷ್ಪಕ್ ನನಗೆ ಬಹಳ ಹಿಡಿಸಿದ ಚಿತ್ರ. ನಿಜವಾಗಲೂ ಅದೊಂದು ವಿಭಿನ್ನವಾದ ಅನುಭವ ನೀಡುವ ಚಿತ್ರ ಎಂದರು ವಿಜಯ್ ಸೇತುಪತಿ.

ಪುಷ್ಪಕ ವಿಮಾನ 1987 ರಲ್ಲಿ ಸಂಗೀತಂ ಶ್ರೀನಿವಾಸರಾವ್ ನಿರ್ದೇಶಿಸಿ ಕಮಲಹಾಸನ್, ಅಮಲ ನಟಿಸಿರುವ ಚಿತ್ರ. ಅದು ಬೇರೆ ಬೇರೆ ಶೀರ್ಷಿಕೆಗಳಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ಕಮಲಹಾಸನ್ ಮತ್ತು ಸಂಗೀತಂ ಶ್ರೀನಿವಾಸರಾವ್‌ ಅವರಿಗೆ ಅತ್ಯುತ್ತಮ ನಟ ಮತ್ತು ನಿರ್ದೇಶಕ ಪ್ರಶಸ್ತಿಯೂ ಬಂದಿತ್ತು. ಬೆಂಗಳೂರಿನಲ್ಲಿ 35 ವಾರಗಳ ಕಾಲ ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿತವಾಗಿ ಗಳಿಕೆಯಲ್ಲೂ ಯಶಸ್ಸು ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next