ಪಣಜಿ, ನ. ೨೦ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫಿ)ದ ಭಾಗವಾಗಿ ನಡೆಯುವ ಎನ್ ಎಫ್ ಡಿ ಸಿ ಯ ಫಿಲ್ಮ್ ಬಜಾರ್ ನಲ್ಲಿ ಸ್ವತಃ ಫಿಲ್ಮ್ ಬಜಾರ್ ನವರೇ ನಿರ್ಮಾಣ ಮಾಡಿರುವ ಹತ್ತು ಚಿತ್ರಗಳನ್ನು ನೋಡಲು ಮರೆಯಬೇಡಿ ಎಂದು ಪಟ್ಟಿ ಮಾಡಿದ್ದಾರೆ.
ಇದರಲ್ಲಿ ಒಂದು ಕನ್ನಡದ ಚಿತ್ರವೂ ಇರುವುದು ಸಂತೋಷದ ಸಂಗತಿ. ಈ ಪೈಕಿ ಹಿಂದಿ, ಕನ್ನಡ, ಬಂಗಾಳಿ, ಮಾವೋರಿ, ಮಣಿಪುರಿ (ನ್ಯೂಜಿಲೆಂಡ್ ನಲ್ಲಿ ಬಳಸುವ ಒಂದು ಭಾಷೆ) ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿವೆ.
ಆನು – ಪುಲ್ಕಿತ್ ಅರೋರಾ ನಿರ್ದೇಶಿಸಿರುವ ಈ ಚಿತ್ರ ಇರುವುದು ಮಾವೋರಿ-ಹಿಂದಿ-ಇಂಗ್ಲಿಷಿನಲ್ಲಿ. ವಿಧವೆಯೊಬ್ಬಳು ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬರುತ್ತಾಳೆ. ತನ್ನ ಸಂಗಾತಿಯ ಕೆಲವು ಕುರುಹುಗಳನ್ನು ಹುಡುಕುತ್ತಾ ಬರುವ ಅಕೆ ಕೆಲವು ಹೊಸ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.
ರೋಟಿ ಕಿ ಬನಸಿ ಚಿತ್ರವು ಚಂದನ ಸಿಂಗ್ ಶೆಖಾವತ್ ನಿರ್ದೇಶಿಸಿದ್ದಾರೆ. ಇಡೀ ಚಿತ್ರ ರಾಜಸ್ಥಾನದ ಗ್ರಾಮೀಣ ಕುಟುಂಬವನ್ನು ಆಧರಿಸಿದ್ದು. ಈ ಚಿತ್ರ ಚರ್ಚೆ ಮಾಡುವುದು ಪಿತೃ ಪ್ರಧಾನತ್ವ ಅಂಶಗಳನ್ನೇ. ಮಹಿಳೆ ಎಂಬುವವಳು ಹೊರ ಜಗತ್ತಿಗೆ ತೆರೆದುಕೊಳ್ಳಬೇಕೇ? ಅಥವಾ ಹಿಂದಿನಂತೆಯೇ ಮನೆಯೊಳಗೇ ಬಂಧಿತಳಾಗಬೇಕೇ? ಎಂಬುದೂ ಇದರ ಮೂಲ ನೆಲೆ. ತಂದೆ ಮತ್ತು ಮಗನ ಮೂಲಕ ಕಥೆ ಹೇಳಲು ಪ್ರಯತ್ನಿಸುವ ನಿರ್ದೇಶಕ ಆಮೂಲಕ ಎರಡು ತಲೆಮಾರುಗಳ ಆಲೋಚನೆ, ಆಯ್ಕೆ, ಅಗತ್ಯ ಹಾಗೂ ಆದ್ಯತೆಗಳನ್ನು ವಿವರಿಸಲು ಪ್ರಯತ್ನಿಸುತ್ತಾನೆ.
ಟ್ಯೂಸ್ ಡೇಸ್ ವುಮೆನ್ ಚಿತ್ರವು 29 ನಿಮಿಷಗಳದ್ದು. ಇಮಾದ್ ಷಾ ನಿರ್ದೇಶಿಸಿದ್ದಾರೆ. ಇದು ಇಂಗ್ಲಿಷ್ ನಲ್ಲಿರುವ ಚಿತ್ರ. ಜಪಾನಿ ಲೇಖಕ ಹರುಕಿ ಮುರಕಾಮಿಯವರ ಮೂರು ಕಥೆಗಳನ್ನು ಆಧರಿಸಿ ರೂಪಿಸಿರುವ ಚಿತ್ರ. ಕಥಾನಾಯಕನ ಮೂರು ಸಂದರ್ಭಗಳನ್ನು ಹೆಣೆಯುತ್ತಾ ಅವನ ಬದುಕಿನ ಒಂದು ದಿನವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದೊಂದು ಸ್ವತಂತ್ರ ಕೃತಿಯಾಗಿರಲಿ ಎಂಬ ಬಯಕೆಯಿಂದಲೇ ನಿರ್ದೇಶಕರು ಕಥೆಗಳ ರೂಪಾಂತರದಂತೆ ಕಂಡರೂ ತಮ್ಮ ದೃಶ್ಯ ಸಾಧ್ಯತೆಗಳಿಂದ ಅದನ್ನು ಮೀರುವ ಪ್ರಯತ್ನ ನಡೆಸಿದ್ದಾರೆ.
ಮನೀಷ್ ಸೈನಿ ನಿರ್ದೇಶಿಸಿರುವ ಗಿದ್ಧ್ ಹಿಂದಿ ಚಿತ್ರ. ವೃದ್ಧನೊಬ್ಬನು ತನ್ನ ದಿನದ ಅಗತ್ಯವನ್ನು ಪೂರೈಸಿಕೊಳ್ಳಲು ಹೆಣಗುವ ಚಿತ್ರ. ಈ ಮೂಲಕ ಇಂದಿಗೂ ಕೆಲವರ ಬಟ್ಟೆ, ಹಸಿವು ಮತ್ತು ಬದುಕಿನ ಹೋರಾಟವನ್ನು ಕಟ್ಟಿಕೊಡುವ ಪ್ರಯತ್ನ.
ಗೋಪಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರ. ಹದಿನಾಲ್ಕು ನಿಮಿಷಗಳ ಚಿತ್ರವನ್ನು ನಿರ್ದೇಶಿಸಿರುವುದು ನಿಶಾಂತ್ ಗುರುಮೂರ್ತಿ. ಗೋಪಿ ಸಿದ್ಧಿ ಜನಾಂಗದವಳು. ಕಥೆ ಹೇಳುವವಳು. ತನ್ನ ಕಥೆಗಳನ್ನು ತಾನೇ ಪ್ರಕಟಿಸಬೇಕೆಂದು ನಿರ್ಧರಿಸುವ ಆಕೆ ಕೆಲವು ಅನಿರೀಕ್ಷಿತ ಸನ್ನಿವೇಶಗಳು, ಸಾಮಾಜಿಕ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹಾವೋಬನ್ ಪಬನ್ ಕುಮಾರ್ ನಿರ್ದೇಶಿಸಿರುವ ಚಲನಚಿತ್ರ ಐರನ್ ವುಮೆನ್ ಆಫ್ ಮಣಿಪುರ್. ಇಪ್ಪತ್ತಾರು ನಿಮಿಷಗಳದ್ದು. ಮಣಿಪುರದ ಕ್ರೀಡಾಪಟುಗಳಾದ ಕುಂಜರಾಣಿ ದೇವಿ, ಅನಿತಾ ಚಾನು ಹಾಗೂ ಮೀರಾಬಾಯಿ ಚಾನು ಅವರ ಕುರಿತಾದದ್ದು. ಹೊಸ ತಲೆಮಾರಿನಲ್ಲಿ ಸ್ಪೂರ್ತಿಯನ್ನು ತುಂಬಲೆಂದು ರೂಪಿಸಿದ್ದು.
ವೇರ್ ಮೈ ಗ್ರ್ಯಾಂಡ್‌ಮದರ್ ಲಿವ್ಸ್ 51 ನಿಮಿಷಗಳ ಚಿತ್ರ ಬಂಗಾಳಿ ಭಾಷೆಯದ್ದು. ತಸ್ಮಿಯಾ ಆಫ್ರಿನ್ ಮೌ ನಿರ್ದೇಶಿಸಿರುವಂಥದ್ದು. ವಿಭಿನ್ನವಾದ ಕಥಾ ಹಂದರ ಎನಿಸುವಂಥದ್ದು. ಕನಸುಗಳು, ವರ್ತಮಾನದ ಅನಿವಾರ್ಯಗಳು, ಬದುಕು ಮತ್ತು ವಾಸ್ತವ ಹಾಗೂ ಎಲ್ಲ ಅನಿವಾರ್ಯತೆಗಳನ್ನು ಪಕ್ಕದಲ್ಲಿಟ್ಟುಕೊಂಡೇ ಅದನ್ನು ಮೀರಿ ಹೊರಬರಲು ನಡೆಸುವ ಪ್ರಯತ್ನಗಳು-ಎಲ್ಲವನ್ನೂಹೇಳುವ ಪ್ರಯತ್ನವಿದು. ಅದರ ಹಿನ್ನೆಲೆಯಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯೂ ಇದೆ.
ಲಡಾಖ್ ಚಲನಚಿತ್ರವನ್ನು ಶಿವಂ ಸಿಂಗ್ ರಾಜ್ ಪುತ್ ಹಿಂದಿಯಲ್ಲಿ ನಿರ್ಮಿಸಿದ್ದಾರೆ. ಇದು ಸಂಪೂರ್ಣವಾಗಿ ಬದುಕಿನ ಗುರಿ, ಅದನ್ನು ಮುಟ್ಟಲು ನಡೆಸುವ ಛಲದ ಕುರಿತಾದುದು. ಅಜ್ಮೀರ್ ನ ಸೂಫಿಯಾ ದೊಡ್ಡ ಮ್ಯಾರಥಾನ್ ಓಟವನ್ನು ಪೂರೈಸಲು ಸಜ್ಜಾಗುತ್ತಿದ್ದಾಳೆ. ಸಿಯಾಚಿನ್ ನಿಂದ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ಓಡುವ ಆಸೆ. ಅದನ್ನು ಹೇಗೆ ಸಿದ್ಧಿಸಿಕೊಳ್ಳುತ್ತಾಳೆ ಹಾಗೂ ಎಲ್ಲರ ಸಹಕಾರ ಹೇಗೆ ಸಿಗುತ್ತದೆಂಬುದೇ ಕಥಾವಸ್ತು.
ದಿ ಎಕ್ಸೈಲ್ (ಹಾರರ್) ಸಮ್ಮಾನ್ ರಾಯ ನಿರ್ದೇಶಿಸಿರುವ ಬಂಗಾಳಿ ಚಲನಚಿತ್ರ. 1960 ರ ಸಂದರ್ಭದ ಕಥೆ ಮೂಲಕ ಆಗಿನ ಸಮಾಜವನ್ನು, ಅದರ ದೃಷ್ಟಿಕೋನವನ್ನು, ಮಹಿಳೆಯ ಸ್ಥಿತಿಯನ್ನು ಹೇಳಲು ಪ್ರಯತ್ನಿಸುವ ಚಿತ್ರ. ಪತ್ನಿಯನ್ನು ಕಳೆದುಕೊಂಡ ಗೌರಂಗನ ಪಾತ್ರದ ಮೂಲಕ ಎಲ್ಲವನ್ನೂ ವಿವರಿಸಲು ಪ್ರಯತ್ನಿಸಲಾಗಿದೆ.
ಇದರೊಂದಿಗೆ ರಿಟರ್ನ್ ಆಫ್ ದಿ ಜಂಗಲ್ ಆನಿಮೇಷನ್ ಚಲನಚಿತ್ರ ವೈಭವ್ ಕುಮರೇಶ್ ರೂಪಿಸಿರುವ ಚಿತ್ರವಿದು. ಮಕ್ಕಳು ತಮ್ಮ ತಾತನ ಮೂಲಕ ಬದುಕು, ಸಮಾಜ ಹಾಗೂ ಹೊರಜಗತ್ತನ್ನು ಕಂಡುಕೊಳ್ಳುವ ಚಿತ್ರ. ಫಿಲ್ಮ್ ಬಜಾರ್ ನಲ್ಲಿ ಸಿನಿಮಾವನ್ನು ವೀಕ್ಷಿಸಲು ಅದಕ್ಕೇ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕು. ಮುಖ್ಯವಾಗಿ ಇದು ಹೊಸಬರಿಗೆ ತಮ್ಮ ಸಿನಿಮಾವನ್ನು ಪರಿಚಯಿಸುವ, ಪ್ರಚುರ ಪಡಿಸುವ ಆ ಮೂಲಕ ಮಾರುಕಟ್ಟೆಯನ್ನೂ ಕಂಡುಕೊಳ್ಳುವ, ಹೂಡಿಕೆದಾರರನ್ನೂ ಹುಡುಕುವ ವೇದಿಕೆ.
*ಅರವಿಂದ ನಾವಡ