ಮಂಡ್ಯ: ಕೋವಿಡ್ 19 ಆತಂಕದ ನಡುವೆಯೂ ಗುರುವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನ ಯಾವುದೇ ಅಹಿತಕರ ಘಟನೆಗಳಿಲ್ಲದೆ ಯಶಸ್ವಿಯಾಗಿ ಮುಕ್ತಾಯವಾಯಿತು. ಜಿಲ್ಲೆಯಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆಗೆ 20,321 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 19,776 ಹಾಜರಿದ್ದು, 545 ವಿದ್ಯಾರ್ಥಿಗಳು ಗೈರಾದರು. ಗೈರಾದವರ ಪೈಕಿ 99 ಖಾಸಗಿ ಅಭ್ಯರ್ಥಿಗಳಿದ್ದಾರೆ.
ಇನ್ನು ಹೊರ ಜಿಲ್ಲೆಯಿಂದ ಆಗಮಿಸಿ ಮಂಡ್ಯದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 225 ವಿದ್ಯಾರ್ಥಿಗಳು ಹಾಜರಿದ್ದರು. 8 ಬ್ಲಾಕ್‌ನ 82 ಕೇಂದ್ರದಲ್ಲಿ ಪರೀಕ್ಷೆ ನಡೆಯಿತು. ಇದರಲ್ಲಿ ಮಂಡ್ಯದ ಸೆಂಟ್‌ಜಾನ್ ಪ್ರೌಢಶಾಲೆ, ರೋಟರಿ ಪ್ರೌಢಶಾಲೆಯನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿತ್ತು. ಇನ್ನು ಎಲ್ಲ ಪರೀಕ್ಷಾ ಕೇಂದ್ರದಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
ವಿದ್ಯಾರ್ಥಿಗಳು, ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ನೀಡಲಾಗಿದ್ದು, ಸ್ಯಾನಿಟೈಸರ್ ಕೊಟ್ಟು ಕೇಂದ್ರಕ್ಕೆ ಕರೆದುಕೊಳ್ಳಲಾಯಿತು. ಇನ್ನು ಕೇಂದ್ರದಲ್ಲಿಯೂ ಪರೀಕ್ಷಾ ಮಂಡಳಿ ಸೂಚನೆಯಂತೆ ಪ್ರತಿ ವಿದ್ಯಾರ್ಥಿಗೂ 3 ಅಡಿ ದೈಹಿಕ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೇ ನಿಯಮವನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುವ ವೇಳೆಯ ಅನುಸರಿಸಲಾಯಿತು.
ಜ್ವರ, ನೆಗಡಿ, ಕೆಮ್ಮುನಿಂದ ಬಳಲುತ್ತಿದ್ದ 15 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ, ಪರೀಕ್ಷೆ ಬರೆಸಲಾಯಿತು. ವಿದ್ಯಾರ್ಥಿ ಗಳಿಗೆ ವಾಹನ ಸಮಸ್ಯೆಯಾದರೆ ಸಹಾಯವಾಗಲೆಂದು ಪ್ರತಿ ತಾಲೂಕಿನಲ್ಲಿಯೂ ಬಸ್ ಸೌಲಭ್ಯ ಮಾಡಲಾಯಿತು. ಜಿಲ್ಲಾ ಮತ್ತು ತಾಲೂಕು ಖಜಾನೆಯಲ್ಲಿರಿಸಿದ್ದ ಪ್ರಶ್ನೆಪತ್ರಿಕೆಗಳನ್ನು ತಹಶೀಲ್ದಾರ್, ಬಿಇಒ ಸಮ್ಮುಖದಲ್ಲಿ ಕೇಂದ್ರಕ್ಕೆ ರವಾನಿಸಲಾಯಿತು.
ಜಿಲ್ಲಾಧಿಕಾರಿ ಭೇಟಿ: ಪರೀಕ್ಷೆ ಹಿನ್ನೆಲೆಯಲ್ಲಿ ಡೀಸಿ ಡಾ. ಎಂ.ವಿ.ವೆಂಕಟೇಶ್ ನಗರದ ಕಾರ್ಮೆಲ್ ಕಾನ್ವೆಂಟ್, ಮಾಜಿ ಪುರಸಭೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.