Advertisement

ಸಮರ್ಪಕ ವೈದ್ಯಕೀಯ ಸೇವೆ ದೊರೆಯದೆ ಲಾಕ್‌ಡೌನ್‌ನಲ್ಲಿ 54 ಶಿಶು-7 ತಾಯಂದಿರ ಸಾವು !

04:36 PM Sep 13, 2020 | sudhir |

ಹಾವೇರಿ: ಸರ್ಕಾರ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ತಡೆಗಟ್ಟಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ಕೂಡ ಲಾಕ್‌ಡೌನ್‌ ಅವ ಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರಕದೇ ಜಿಲ್ಲೆಯಲ್ಲಿ 54 ಶಿಶು ಹಾಗೂ 7 ತಾಯಂದಿರು ಮರಣ ಹೊಂದಿರುವುದು ಆತಂಕ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಈಗಾಗಲೇ 128 ಜನರು ಬಲಿಯಾಗಿರುವುದು ಒಂದು ಕಡೆಯಾದರೆ, ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಶಿಶು ಹಾಗೂ ತಾಯಂದಿರು ಮರಣ ಹೊಂದುತ್ತಿರುವುದು ಸಮಾಜ ತಲೆತಗ್ಗಿಸುವಂತಹ ಸ್ಥಿತಿ ನಿರ್ಮಿಸಿದೆ.
ಕೋವಿಡ್ ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ 24ರಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಿತ್ತು. ಈ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆದ್ಯತೆ ನೀಡಲಾಯಿತು.

ಖಾಸಗಿ ಆಸ್ಪತ್ರೆಗಳು ಸೇವೆ ಬಂದ್‌ ಮಾಡಿದವು. ಇವೆಲ್ಲದರ ಪರಿಣಾಮವಾಗಿ ನವಜಾತ ಶಿಶುಗಳು ಹಾಗೂ ತಾಯಂದಿರಿಗೆ ಸಮರ್ಪಕ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮೃತಪಟ್ಟಿದ್ದಾರೆ. ಅರಿವಿನ ಕೊರತೆ, ಸಕಾಲಕ್ಕೆ ಚಿಕಿತ್ಸೆ ಹಾಗೂ ಔಷಧ ದೊರೆಯದಿರುವುದು ಸೇರಿದಂತೆ ಅನೇಕ ಕಾರಣಗಳಿಂದ ಶಿಶು ಹಾಗೂ ತಾಯಂದಿರು ಮರಣ ಹೊಂದಿದ್ದಾರೆ.

54 ಶಿಶು ಮರಣ: ಕಳೆದ ಏಪ್ರಿಲ್‌ ತಿಂಗಳಿಂದ ಜುಲೈ ಅಂತ್ಯದವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಅವಧಿಯಲ್ಲೇ ಜಿಲ್ಲೆಯಲ್ಲಿ ತಾಯಿ, ಶಿಶು ಮರಣ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಪ್ರಿಲ್‌ ತಿಂಗಳಲ್ಲಿ 14 ಶಿಶು ಸಾವನ್ನಪ್ಪಿವೆ. ಮೇ ತಿಂಗಳಲ್ಲಿ 15, ಜೂನ್‌ ತಿಂಗಳಲ್ಲಿ 14 ಹಾಗೂ ಜುಲೈ ತಿಂಗಳಲ್ಲಿ 11 ಶಿಶು ಮೃತಪಟ್ಟಿವೆ. 1ದಿನದಿಂದ ಹಿಡಿದು ಒಂದು ತಿಂಗಳ ಅವಧಿಯ ಶಿಶುಗಳೇ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿವೆ. ಕೋವಿಡ್ ಆರಂಭದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿತ್ತು. ಅಲ್ಲದೇ, ಕೋವಿಡ್ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೋಗಲು ಹಿಂಜರಿಯುತ್ತಿದ್ದರು. ಅಲ್ಲದೇ, ಖಾಸಗಿ ಆಸ್ಪತ್ರೆಗಳ ಬಾಗಿಲು ಬಂದ್‌ ಆಗಿದ್ದರಿಂದ ಅನೇಕರು ಸಮಸ್ಯೆ
ಎದುರಿಸುವಂತಾಯಿತು. ಇವೆಲ್ಲ ಕಾರಣಗಳಿಂದಾಗಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಏಳು ತಾಯಂದಿರ ಸಾವು: ಲಾಕ್‌ಡೌನ್‌ ಅವಧಿಯಲ್ಲಿ ತಾಯಿ ಮರಣ ಪ್ರಮಾಣವೂ ಹೆಚ್ಚಿದೆ. ಏಪ್ರಿಲ್‌ನಿಂದ ಜುಲೈ ವರೆಗೆ 7 ತಾಯಂದಿರು ಮೃತಪಟ್ಟಿದ್ದಾರೆ. ಇವರೆಲ್ಲರೂ ಸುಮಾರು 20 ರಿಂದ 25 ವರ್ಷದೊಳಗಿನವರೇ ಆಗಿರುವುದು ವಿಶೇಷ. ಹೆರಿಗೆಯಾದ ಕೆಲವೇ ದಿನಗಳಲ್ಲಿ ಈ ತಾಯಂದಿರೆಲ್ಲ ಅಸುನೀಗಿದ್ದಾರೆ. ಏಪ್ರಿಲ್‌ನಲ್ಲಿ 1, ಮೇ ತಿಂಗಳಲ್ಲಿ 2, ಜೂನ್‌ನಲ್ಲಿ 2 ಹಾಗೂ ಜುಲೈ ತಿಂಗಳಲ್ಲಿ 2 ತಾಯಿಯರು ಮರಣ ಪ್ರಕರಣ ವರದಿಯಾಗಿದೆ. ಮುಖ್ಯವಾಗಿ ಲಾಕ್‌ಡೌನ್‌ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ದೊರೆಯದಿರುವುದೇ ತಾಯಿ, ಶಿಶು ಮರಣಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಮೊದಲು ಈ ಪ್ರಮಾಣ ಇದಕ್ಕಿಂತ ಕಡಿಮೆಯಿತ್ತು. ಕೊರೊನಾ ಶುರುವಾದ ಮೇಲೆ ಕೋವಿಡ್ ಹೊರತುಪಡಿಸಿ ಬೇರೆ ಯಾವ ಚಿಕಿತ್ಸೆಗೂ ಆಸ್ಪತ್ರೆಗಳಲ್ಲಿ ಗಮನ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಜುಲೈ ಬಳಿಕ ಕೊರೊನಾದೊಂದಿಗೆ ಇನ್ನಿತರ ಕಾಯಿಲೆ, ಆರೋಗ್ಯ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ
ನೀಡಲಾಗುತ್ತಿದೆ. ಆದರೂ ಸಾರ್ವಜನಿಕರು ಆಸ್ಪತ್ರೆಗೆ ಹೋಗಲು ಆತಂಕಪಡುತ್ತಿದ್ದಾರೆ. ಕೋವಿಡ್ ಜೊತೆಗೆ ಹೆರಿಗೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗೆ ಗಮನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ಕಳೆದ 4 ತಿಂಗಳ ಅವಧಿಯಲ್ಲಿ ಪ್ರಮಾಣದಲ್ಲಿ ಶಿಶು, ತಾಯಿ ಮರಣ ಪ್ರಮಾಣ ಹೆಚ್ಚಿರುವುದು ಆತಂಕದ ಸಂಗತಿ. ಆರಂಭಿಕ ದಿನಗಳಲ್ಲಿ ಕೊರೊನಾ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಜೂನ್‌ ಬಳಿಕ ಕೊರೊನಾದೊಂದಿಗೆ ಇನ್ನಿತರ ಆರೋಗ್ಯ ಸೇವೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಅರಿವಿನ ಕೊರತೆ ಹಾಗೂ ತಡವಾಗಿ ಆಸ್ಪತ್ರೆಗೆ ಬರುವುದರಿಂದಲೂ ತಾಯಿ, ಶಿಶು ಮರಣದಲ್ಲಿ ಏರಿಕೆಯಾಗಿದೆ.
– ಡಾ| ರಾಜೇಂದ್ರ ದೊಡ್ಡಮನಿ, ಡಿಎಚ್‌ಒ, ಹಾವೇರಿ

– ವೀರೇಶ ಮಡ್ಲುರಾ

Advertisement

Udayavani is now on Telegram. Click here to join our channel and stay updated with the latest news.

Next