Advertisement

ವಡಾಲದ ಶ್ರೀ ರಾಮ ಮಂದಿರದಲ್ಲಿ  53ನೇ ವಾರ್ಷಿಕ ರಾಮ ನವಮಿ 

05:04 PM Mar 26, 2018 | Team Udayavani |

ಮುಂಬಯಿ: ವಡಾಲದ ಶ್ರೀ ರಾಮ ಮಂದಿರದಲ್ಲಿ 53 ನೇ ವಾರ್ಷಿಕ ರಾಮ ನವಮಿ ಉತ್ಸವ, ರಾಮ ಜನ್ಮೋತ್ಸವ ಹಾಗೂ ಬ್ರಹ್ಮರಥೋತ್ಸವವು ಮಾ. 18 ರಂದು ಪ್ರಾರಂಭಗೊಂಡಿದ್ದು, ಮಾ. 25 ರಂದು ಅದ್ದೂರಿಯಾಗಿ  ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ರಾಮ ನವಮಿ ಆಚರಣೆಯೊಂದಿಗೆ ಸಮಾಪ್ತಿಗೊಂಡಿತು.

Advertisement

ಮಾ. 25 ರಂದು  ಬೆಳಗ್ಗೆಯಿಂದ ವಾರ್ಷಿಕ ಶ್ರೀ ರಾಮನವಮಿ, ರಾಮ ಜನ್ಮೋತ್ಸವ, ಬ್ರಹ್ಮರಥೋತ್ಸವ ಹಾಗೂ ರಥದ ಶೋಭಾಯಾತ್ರೆಯು ಗೋವಿಂದ ಭಟ್‌ ಇವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜರಗಿತು.  ಬೆಳಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಬೆಳಗ್ಗೆ 8.30 ರಿಂದ ರಥವಾಸ್ತು ಹವನ, ತುಲಾಭಾರ ಸೇವೆ, ಅಪರಾಹ್ನ ರಾಮಜನ್ಮೋತ್ಸವ ಶ್ರೀ ರಾಮಮಂದಿರದ ಪ್ರಾಂಗಣದಲ್ಲಿ ನೆರವೇರಿತು.  ಈ ಸಂದರ್ಭದಲ್ಲಿ ಬಾಲಚಂದ್ರ ದೇವರಿಗೆ ವಾದ್ಯ, ಕಹಳೆ, ಮಂತ್ರಘೋಷದೊಂದಿಗೆ ತೊಟ್ಟಿಲು ಸೇವೆಯನ್ನು ಮಂದಿರದ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.

ಮಧ್ಯಾಹ್ನ 2.15 ರಿಂದ ಮಹಾ ಮಂಗಳಾರತಿ, ಮಧ್ಯಾಹ್ನ ಸಮಾರಾಧನೆಯ ಬಳಿಕ ಸಂಜೆ 5 ರಿಂದ ರಥಾರೋಹಣ, ದೇವರ ಉತ್ಸವ ಮೂರ್ತಿಯ ಬ್ರಹ್ಮರಥೋತ್ಸವ, ಸಂಜೆ 6.30ರಿಂದ  ಬ್ರಹ್ಮರಥೋತ್ಸವದ ಶೋಭಾಯಾತ್ರೆಯು  ಶ್ರೀ ರಾಮ ಮಂದಿರದಿಂದ ಪ್ರಾರಂಭಗೊಂಡು ದಾದರ್‌ ಟಿಟಿ ಸೇರಿದಂತೆ ಇನ್ನಿತರ ಮುಖ್ಯ ರಸ್ತೆಗಳಲ್ಲಿ ನೂರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ಶ್ರೀ ರಾಮ ದೇವರ ನಾಮದ ಜಯಘೋಷದೊಂದಿಗೆ ಸಾಗಿತು.

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿ ಹಾಗೂ ಅವರ ಪಟ್ಟಶಿಷ್ಯ ಶ್ರೀಮದ್‌ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಸಾರಸ್ವತ ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಗುಡಿಪಾಡ್ವಾದ ದಿನದಂದು ಉತ್ಸವವು ಪ್ರಾರಂಭಗೊಂಡಿತು.

Advertisement

ಮಾ. 18ರಂದು ಪ್ರಾತಃಕಾಲದಿಂದ ದೇವತಾ ಪ್ರಾರ್ಥನೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ಉತ್ಸವದುದ್ದಕ್ಕೂ ಬೆಳಗ್ಗೆ 9.30 ರಿಂದ ಅಭಿಷೇಕ, ಪೂಜೆ, ಮಧ್ಯಾಹ್ನ 12.30 ಕ್ಕೆ ನೈವೇದ್ಯ, ಮಹಾಮಂಗಳಾರತಿ, ಅಪರಾಹ್ನ 1 ರಿಂದ ಸಮಾರಾಧನೆ, ಸಂಜೆ 6.30 ರಿಂದ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ರಾತ್ರಿ 8.30 ರಿಂದ ರಾತ್ರಿಪೂಜೆ, ಆರತಿ, ಪ್ರಸಾದ ವಿತರಣೆ ಜರಗಿತು.

ಒಂಬತ್ತು ದಿನಗಳ ಕಾಲ ಪಲ್ಲಕ್ಕಿ ಉತ್ಸವದ‌ ಅಷ್ಟಾವಧಾನ ಸೇವಾ ಸಂದರ್ಭದಲ್ಲಿ ಸಂಗೀತ, ನೃತ್ಯ ಸೇವೆಗಳನ್ನು ಆಯೋಜಿಸಲಾಗಿತ್ತು. ಮಾ. 18 ರಿಂದ ಸಂಜೆ ಕ್ರಮವಾಗಿ ರುತುಜಾ ಲಾಡ್‌, ಕಿರಣ್‌ ಕಾಮತ್‌, ಯೋಗೇಶ್‌ ಭಟ್‌, ಅರ್ಚನಾ ಹೆಗ್ಡೇಕರ್‌ ಮತ್ತು ಪ್ರಕಾಶ್‌ ಭಟ್‌, ಮುಕುಂದ ಪೈ, ಗೌತಮಿ ಆಚಾರ್ಯ, ಶಿವಾನಿ ಗಾಯೊ¤ಂಡೆ, ಉಡುಪಿ ಪದ್ಮನಾಭ ಪೈ, ಬಾಲಚಂದ್ರ ಪ್ರಭು, ಅರುಣ್‌ ನಾಯಕ್‌ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮಗಳು ನೆರವೇರಿದವು.

ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿ ಮಾ. 24ರಂದು ಲಘು ವಿಷ್ಣು ಹವನ ನಡೆಯಿತು. ಪ್ರತೀ ದಿನ ಮಹಾಸಂತರ್ಪಣೆ, ಸರ್ವಾಲಂಕಾರ, ಸಂತರ್ಪಣೆ, ಮಹಾಪೂಜೆ, ಪುಷ್ಪಾಲಂಕಾರ, ಪಲ್ಲಕಿ ಉತ್ಸವ, ದೀಪಾರಾಧನೆ, ತುಲಾಭಾರ ಸೇವೆ  ಇನ್ನಿತರ ಸೇವೆಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು, ಸಮಾಜ ಬಾಂಧವರು, ತುಳು-ಕನ್ನಡಿಗರು ಈ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಉತ್ಸವದ ಯಶಸ್ಸಿಗೆ ಸಹಕರಿಸಿದರು. ಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು-ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next