Advertisement

ಲೋಕ ಅದಾಲತ್‌: ಒಂದಾದ 61 ದಂಪತಿ

11:51 PM Mar 12, 2022 | Team Udayavani |

ಬೆಂಗಳೂರು: ಕೊರೊನಾ ಕಾಲದಲ್ಲಿ ಇ-ಲೋಕಅದಾಲತ್‌ ಆಯೋಜಿಸಿ ಪ್ರಶಂಸೆಗೆ ಪಾತ್ರವಾಗಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇದೀಗ ಇದೇ ಮೊದಲ ಬಾರಿಗೆ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ), ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ಲೋಕ ಅದಾಲತ್‌ ಮೂಲಕ ಇತ್ಯರ್ಥಪಡಿಸಿ ದೇಶಕ್ಕೆ ಮಾದರಿಯಾಗಿದೆ.

Advertisement

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾ. 12ರಂದು ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರೇರಾ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿರ್ಧರಿಸಿತ್ತು. ಅದರಂತೆ ಒಟ್ಟು 183 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 8 ಕೋಟಿ ರೂ. ಮೊತ್ತವನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿದೆ. ಅದೇ ರೀತಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ರಾಜಿಯಾಗಬಲ್ಲ 5,586 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇದು ಇಡೀ ದೇಶದಲ್ಲಿ ಮೊದಲ ಪ್ರಯೋಗವಾಗಿದೆ.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿದ ಪ್ರಕರಣಗಳ ಮಾಹಿತಿಯನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿದ್ದ 90 ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ. ಅಲ್ಲದೆ, ವಿಚ್ಛೇದನ ಬಯಸಿದ್ದ ಮೈಸೂರಿನ 32 ಮತ್ತು ಬೆಂಗಳೂರಿನ 29 ದಂಪತಿ ತಮ್ಮ ವೈವಾಹಿಕ ಜೀವನ ಮುಂದುವರೆಸಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಹೈಕಮಾಂಡ್‌ ಬುಲಾವ್‌; ಡಿ.ಕೆ.ಶಿವಕುಮಾರ್‌ ದಿಲ್ಲಿಗೆ

Advertisement

ಸಾರಿಗೆಯ 359 ಪ್ರಕರಣ
ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಮತ್ತು ಇತರ ಕಾರಣಗಳಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳ ಪೈಕಿ ಬೆಂಗಳೂರಿನಲ್ಲಿ 324 ಮಂಗಳೂರಿನಲ್ಲಿ 32 ಮತ್ತು ಕಾರವಾರದಲ್ಲಿ 3 ಪ್ರಕರಣಗಳು ಸೇರಿ ಒಟ್ಟು 359 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ವಿವರಿಸಿದರು.

1.75 ಕೋಟಿ ರೂ. ಗರಿಷ್ಠ ಪರಿಹಾರ
ಮೋಟಾರು ವಾಹನ ಕಾಯ್ದೆಯಡಿ ವಿಚಾರಣ ಹಂತದಲ್ಲಿದ್ದ ಪ್ರಕರಣವೊಂದರಲ್ಲಿ 1.75 ಕೋಟಿ ರೂ.ಗಳ ಪರಿಹಾರ ನೀಡಲು ವಿಮಾ ಕಂಪೆನಿ ಒಪ್ಪಿಕೊಂಡಿದೆ. ಅಲ್ಲದೆ, ಬಾಗಲಕೋಟೆಯ ಪ್ರಕರಣ ವೊಂದರಲ್ಲಿ 81 ಲಕ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 70 ಲಕ್ಷ ರೂ.ಗಳ ಪರಿಹಾರವನ್ನು ವಿಮಾ ಕಂಪೆನಿಗಳಿಂದ ಕೊಡಿಸಲಾಗಿದೆ. ವಾಣಿಜ್ಯ ನ್ಯಾಯಾಲಯ ಗಳಲ್ಲಿ ವಿಚಾರಣಾ ಹಂತದಲ್ಲಿದ್ದ 126 ಪ್ರಕರಣ ಇತ್ಯರ್ಥ ಗೊಂಡಿದ್ದು, 62 ಕೋ.ರೂ.ಗಳನ್ನು ಪರಿಹಾರ ಕೊಡಿ ಸಿರುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

53 ವರ್ಷದ ಪ್ರಕರಣ ಇತ್ಯರ್ಥ
ಆಸ್ತಿ ಪಾಲುದಾರಿಕೆ ವಿವಾದ ಸಂಬಂಧ ಮೈಸೂರಿನಲ್ಲಿ 1969ರಿಂದ ನಡೆಯುತ್ತಿದ್ದ ಪ್ರಕರಣ ಮತ್ತು ಮಂಗಳೂರಿನಲ್ಲಿ 23 ವರ್ಷಗಳಿಂದ ನಡೆಯುತ್ತಿದ್ದ ಸಿವಿಲ್‌ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾ| ಬಿ. ವೀರಪ್ಪ ಅವರು ವಿವರಿಸಿದರು.

3.67 ಲಕ್ಷ ಪ್ರಕರಣ ಇತ್ಯರ್ಥ
ಲೋಕ ಅದಾಲತ್‌ನಲ್ಲಿ 3,67,575 ಲಕ್ಷ ಪ್ರಕರಣ ಇತ್ಯರ್ಥಪಡಿಸಿದ್ದೇವೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3.48 ಲಕ್ಷ ಪ್ರಕರಣಗಳು ಹಾಗೂ 18 ಸಾವಿರ ವ್ಯಾಜ್ಯಪೂರ್ವ ಪ್ರಕರಣಗಳಿವೆ. ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ ಹೈಕೋರ್ಟಿನ 11 ಪೀಠಗಳು ಹಾಗೂ 978 ಜಿಲ್ಲಾ ನ್ಯಾಯ ಪೀಠಗಳು ಕಾರ್ಯನಿರ್ವಹಿಸಿವೆ. ವೀಡಿಯೋ ಕಾನ್ಫರೆನ್ಸ್‌ ಮೂಲಕವೂ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಲೋಕ ಅದಾಲತ್‌ ಮೂಲಕ 910 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ನ್ಯಾ| ಬಿ. ವೀರಪ್ಪ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next