ಸಿಂಧನೂರು: ಸ್ಥಳೀಯ ನಗರಸಭೆಯಲ್ಲಿ ನಡೆದ 2018-19ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ 5,24,591 ಲಕ್ಷ ರೂ. ಗಳ ಉಳಿತಾಯದ ಆಯವ್ಯಯವನ್ನು ಸ್ಥಾಯಿ ಸಮಿತಿ ಅಧ್ಯಕ್ಷ ನಬಿಸಾಬ್ ಮಂಡಿಸಿ ಚರ್ಚೆಯಿಲ್ಲದೇ ಹತ್ತೇ ನಿಮಿಷದಲ್ಲಿ ಅನುಮೋದನೆ ಪಡೆದದ್ದು ವಿಶೇಷವಾಗಿತ್ತು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಮಂಜುಳಾ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ 2018-19ನೇ ಸಾಲಿನ ಆಯವ್ಯಯ ಮಂಡಿಸಲಾಯಿತು. 53,71,90,881 ರೂ.ಗಳ ನಿರೀಕ್ಷಿತ ಆದಾಯ ಹಾಗೂ 53,66,66,290 ರೂ.ಗಳ ನಿರೀಕ್ಷಿತ ಖರ್ಚು ತೆಗೆದು 5,24,591 ರೂ.ಗಳ ಉಳಿಕೆ ಬಜೆಟ್ ಮಂಡಿಸಲಾಯಿತು.
ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 5.40 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ 4 ಕೋಟಿ, 14ನೇ ಹಣಕಾಸು ಅನುದಾನ 6 ಕೋಟಿ, ಕುಡಿಯುವ ನೀರಿನ ಅನುದಾನ 50 ಲಕ್ಷ, ಸಂಸದರ ಅನುದಾನ 10 ಲಕ್ಷ, ಶಾಸಕರ ಅನುದಾನ 5 ಲಕ್ಷ, ಪ್ರಕೃತಿ ವಿಕೋಪ ಅನುದಾನ 1 ಕೋಟಿ ರೂ., ಎಚ್ ಕೆಆರ್‌ಡಿಬಿ ಅನುದಾನ 2 ಕೋಟಿ, ಸ್ವತ್ಛ ಭಾರತ ಮಿಷನ್ ಅನುದಾನ 25 ಲಕ್ಷ, ಎಸ್ ಸಿಪಿ/ಟಿಎಸ್‌ಪಿ ಅನುದಾನ 2 ಕೋಟಿ ಸೇರಿ ಇನ್ನಿತರ ಅನುದಾನ ನಿರೀಕ್ಷಿತ ಆದಾಯದ ಮೂಲಗಳಾಗಿವೆ.
ಇನ್ನು ಸಿಬ್ಬಂದಿ ವೇತನ, ಭತ್ಯೆ, ಸೌಲಭ್ಯಗಳು 60 ಲಕ್ಷ, ಕೂಲಿ 10 ಲಕ್ಷ, ವಂತಿಗೆ 2 ಲಕ್ಷ, ಸೇವಾಂತ್ಯದ ಹಾಗೂ ಪಿಂಚಣಿ ಸೌಲಭ್ಯಗಳು 5 ಲಕ್ಷ, ಬಾಡಿಗೆ, ದರಗಳು, ತೆರಿಗೆಗಳು, ವಿಮೆಗಳು 20 ಲಕ್ಷ, ಜಾಹೀರಾತು ಮತ್ತು ಪ್ರಚಾರ 10 ಲಕ್ಷ, ಕಚೇರಿ ವೆಚ್ಚ 9 ಲಕ್ಷ, ಕೌನ್ಸಿಲ್ ಸಿಬ್ಬಂದಿ ವೆಚ್ಚ 5 ಲಕ್ಷ, ದುರಸ್ತಿ, ನಿರ್ವಹಣೆ ವೆಚ್ಚ 10 ಲಕ್ಷ, ಹೊರಗುತ್ತಿಗೆ ಕಾರ್ಯಾಚರಣೆ ವೆಚ್ಚ 30 ಲಕ್ಷ, ಪ್ರಯಾಣ ಹಾಗೂ ವಾಹನ ಭತ್ಯೆ 12.5 ಲಕ್ಷ, ಪುಸ್ತಕ, ನಿಯತಕಾಲಿಕೆಗಳು, ಮುದ್ರಣ, ಲೇಖನ ಸಾಮಗ್ರಿಗಳು 25 ಲಕ್ಷ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅನುದಾನ ಬಳಕೆ ಸೇರಿದಂತೆ ಒಟ್ಟು 53,66,66,290 ಖರ್ಚಾಗಬಹುದಾಗಿದೆ ಎಂದು ಸಭೆಗೆ ವಿವರಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಸಮ್ಮತಿ ಸೂಚಿಸಿತು. ಬೃಹತ್ ಕುಡಿಯುವ ನೀರಿನ ಯೋಜನೆ ಝೋನ್ 1, 4, 6 ಕಾಮಗಾರಿ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಗಳಿಂದ ಉದ್ಘಾಟನೆ ಮಾಡಿಸಲಾಗಿದೆ.
ಆದರೆ ಝೋನ್-1ರ ವ್ಯಾಪ್ತಿಯಲ್ಲಿ ಬರುವ 29ನೇ ವಾರ್ಡಿಗೆ 10 ದಿನಗಳಾದರೂ ನೀರು ಬರುತ್ತಿಲ್ಲ ಎಂದು ಸದಸ್ಯ ಬಸವರಾಜ ನಾಡಗೌಡ ಅಧ್ಯಕ್ಷರು, ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಉದ್ಘಾಟನೆಗೊಂಡ ವಾರ್ಡ್‌ಗಳಲ್ಲಿ ಪ್ರಾಯೋಗಿಕ ವಾಗಿ ನೀರು ಬಿಡಲಾಗಿತ್ತು. ಸಣ್ಣಪುಟ್ಟ ಸಮಸ್ಯೆಗಳಿವೆ ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದರು.
ನಗರದ ಮಹಿಬೂಬ್ ಕಾಲೋನಿಯಲ್ಲಿ ಮಳೆಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ ಜೆಡಿಎಸ್ ಪಕ್ಷದಿಂದ ದುರಸ್ತಿಗೆ ಮುಂದಾದಾಗ ಪೌರಾಯುಕ್ತರೇ ವಾರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದ್ದರು. ಪಕ್ಷದ ಬ್ಯಾನರ್‌ನಲ್ಲಿ ಮಾಡಬೇಡಿ ಎಂದು ಮನವಿ ಮಾಡಿದ್ದರು. ಮೂರು ತಿಂಗಳು ಕಳೆದರೂ ಕೆಲಸ ಆರಂಭವಾಗಿಲ್ಲ. ಇನ್ನೂ ನನ್ನ ವಾರ್ಡನಲ್ಲಿ ಶಾಸಕರು, ಅಧ್ಯಕ್ಷರು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಭೂಮಿಪೂಜೆ ಮಾಡಿ ಕೇವಲ 3 ಟ್ರಿಪ್ ಮರಂ ಹಾಕಿದ್ದೇ ನಿಮ್ಮ ಸಾಧನೆಯಾಗಿದೆ ಎಂದು ಬಸವರಾಜ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು ಬೃಹತ್ ಕುಡಿಯುವ ನೀರಿನ ಯೋಜನೆಯ ರೆಸ್ಟೋರೇಶನ್‌ಗೆ 3.5 ಕೋಟಿ ಅನುದಾನದಲ್ಲಿ ರಸ್ತೆ ದುರಸ್ತಿಗೆ ನೀಲನಕ್ಷೆ ಸಿದ್ದಪಡಿಸಲಾಗಿತ್ತು. ಆದರೆ ಯೋಜನೆಗೆ ಹೆಚ್ಚುವರಿ ಅನುದಾನ ಬೇಕಾಗಿದ್ದರಿಂದ ರೆಸ್ಟೋರೇಶನ್ ಅನುದಾನದ ಬದಲಾಗಿ ನಗರಸಭಾ ಅನುದಾನದಲ್ಲಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಸಭೆ ಗಮನಕ್ಕೆ ತಂದರು. ಆದರೂ ಸುಮ್ಮನಾಗದ ನಾಡಗೌಡ ರಸ್ತೆ ಸುಧಾರಣೆ ಯಾವಾಗ ಪ್ರಾರಂಭ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇನ್ನೂ 15
ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಪೌರಾಯುಕ್ತರು ಭರವಸೆ ನೀಡಿದರು. ನಗರದ ವಿವಿಧ ವಾರ್ಡ್‌ಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ.
ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಲಿಂಗರಾಜ ಹೂಗಾರ ಆಗ್ರಹಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಅನ್ವರ ಬೇಗಂ, ಎಇಇ ಶ್ಯಾಮಲಾ, ವ್ಯವಸ್ಥಾಪಕ ಗುರುರಾಜ ಸೌದಿ ಸೇರಿದಂತೆ ನಗರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.