ಢಾಕಾ: ಬಾಂಗ್ಲಾದೇಶದ ಜ್ಯೂಸ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸುಮಾರು 52 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಾರಾಯಣ್ ಗಂಜ್ ನಗರದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೇರೆಯವರ ಜಗಳ ನಮಗೆ ಬೇಡ, ಮೇಕೆದಾಟು ಯೋಜನೆ ಸರ್ಕಾರದ ಆದ್ಯತೆ ಆಗಲಿ : ಡಿ.ಕೆ. ಶಿವಕುಮಾರ್
ಬರೋಬ್ಬರಿ 21 ಗಂಟೆಗಳ ಕಾಲ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದು, ಶುಕ್ರವಾರ (ಜುಲೈ 09) ಮಧ್ಯಾಹ್ನ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲು ಸಾಧ್ಯವಾಯಿತು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಆರು ಮಹಡಿ ಕಟ್ಟಡದ ನೆಲ ಅಂತಸ್ತಿನಲ್ಲಿ ಬೆಂಕಿ ಹೊತ್ತಿದ್ದು, ಅದು ನಂತರ ಕೆಮಿಕಲ್ ಮೆಟಿರಿಯಲ್ಸ್ ಇದ್ದ ಪ್ರದೇಶಕ್ಕೆ ಹಬ್ಬಿದ ಪರಿಣಾಮ ಭಾರೀ ಅಗ್ನಿಅನಾಹುತಕ್ಕೆ ಕಾರಣವಾಗಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಬಂಧುಗಳು, ಮನೆಯವರು, ಗೆಳೆಯರು ಅನಾಹುತದಲ್ಲಿ ಸಿಲುಕಿದ್ದಾರೆ ಎಂದು ತಿಳಿಯಲು ಕಟ್ಟಡದ ಮುಂಭಾಗದಲ್ಲಿ ಸಾವಿರಾರು ಮಂದಿ ಜಮಾಯಿಸಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬೆಂಕಿಯಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ವಿಳಂಬವಾಗಿದ್ದರಿಂದ ರೊಚ್ಚಿಗೆದ್ದ ಜನರು ಕಾರುಗಳನ್ನು ಜಖಂಗೊಳಿಸಿದ ಪರಿಣಾಮ ಪೊಲೀಸರ ಜತೆ ಘರ್ಷಣೆಗೆ ಇಳಿದಿರುವುದಾಗಿ ವರದಿ ವಿವರಿಸಿದೆ. ನಂತರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿರುವುದಾಗಿ ವರದಿ ತಿಳಿಸಿದೆ.