Advertisement

ಕಾಸರಗೋಡಿನ 515 ಶಾಲೆಗಳು,1.50 ಲಕ್ಷ  ಮಕ್ಕಳು, 60 ಸ್ವಂತ ವಾಹನಗಳು

06:45 AM May 18, 2018 | |

ಕಾಸರಗೋಡು: ಜಿಲ್ಲೆಯಲ್ಲಿ  ಒಟ್ಟು  515 ಸರಕಾರಿ ಹಾಗೂ ಅನುದಾನಿತ ಶಾಲೆಗಳು ಕಾರ್ಯಾಚರಿಸುತ್ತಿವೆ. ಈ ಶಾಲೆಗಳಲ್ಲಿ  ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟು ವಿದ್ಯಾರ್ಥಿಗಳಿರುವ ಜಿಲ್ಲೆಯ ಶಾಲೆಗಳ ಪೈಕಿ 60 ಶಾಲೆಗಳು ಮಾತ್ರ ಸ್ವಂತ ವಾಹನಗಳನ್ನು  ಹೊಂದಿವೆ.

Advertisement

ಜಿಲ್ಲೆಯಲ್ಲಿ  40ರಷ್ಟು  ಖಾಸಗಿ ಸಿಬಿಎಸ್‌ಇ ಶಾಲೆಗಳಿವೆ. ಒಂದು ಶಾಲೆಗೆ ಸರಾಸರಿ ಆರು ಬಸ್‌ಗಳಿವೆ. 26 ಬಸ್‌ಗಳು ಸ್ವಂತವಾಗಿರುವ ಸಿಬಿಎಸ್‌ಇ ಶಾಲೆ ಕುಂಬಳೆಯಲ್ಲಿದೆ. ಇಲ್ಲಿ  ಒಟ್ಟು  2,200 ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಸಾವಿರಾರು ಮಂದಿ ವಿದ್ಯಾರ್ಥಿಗಳು ಕಲಿಯುವ ಹೆಚ್ಚಿನ ಸರಕಾರಿ ಶಾಲೆಗಳಿಗೆ ಒಂದು ಬಸ್‌ ಕೂಡ ಇಲ್ಲ. 40 ಶಾಲೆಗಳಲ್ಲಾಗಿ ಒಟ್ಟು  32,000 ವಿದ್ಯಾರ್ಥಿಗಳು ಕಲಿಯುತ್ತಿರುವ ಸಿಬಿಎಸ್‌ಇ ಶಾಲೆಗಳಿಗೆ ಒಟ್ಟು  250ರಷ್ಟು ಬಸ್‌ಗಳಿವೆ.

ಕೊಠಡಿ ಸ್ಮಾರ್ಟಾದರೆ ಸಾಲದು
ಸಾರ್ವಜನಿಕ ಶಿಕ್ಷಣದತ್ತ  ವಿದ್ಯಾರ್ಥಿಗಳನ್ನು  ಆಕರ್ಷಿಸಬೇಕಾದರೆ ಸ್ಮಾರ್ಟ್‌ ತರಗತಿ ಕೊಠಡಿ ಮಾತ್ರ ಸಾಲದು. ಸ್ವಂತ ವಾಹನಗಳು ಹಾಗೂ ಇತರ ಸೌಕರ್ಯಗಳು ಇರಬೇಕು. ಸರಕಾರಿ ಮತ್ತು  ಅನುದಾನಿತ ವಲಯಗಳಲ್ಲಿ  ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ  84 ಪ್ರೌಢಶಾಲೆಗಳು, 44 ಸರಕಾರಿ ಶಾಲೆಗಳು ಇವೆ. ಆದರೆ ವಾಹನವಿರುವ ಸರಕಾರಿ ಪ್ರೌಢಶಾಲೆಗಳು 2 ಮಾತ್ರ. ಕುಂಡಂಕುಯಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ನೆಲ್ಲಿಕುಂಜೆ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಗಳು ಮಾತ್ರ ಸ್ವಂತ ಬಸ್‌ ಹೊಂದಿವೆ.

ಈ ಶಿಕ್ಷಣ ಜಿಲ್ಲೆಯ 19 ಅನುದಾನಿತ ಪ್ರೌಢಶಾಲೆಗಳಲ್ಲಿ  9 ಶಾಲೆಗಳಿಗೆ ಸ್ವಂತ ಬಸ್‌ಗಳಿವೆ ಎಂಬುದು ಆಶಾದಾಯಕ ವಿಚಾರ. ಕಾಂಞಂಗಾಡ್‌ ಶಿಕ್ಷಣ ಜಿಲ್ಲೆಯಲ್ಲಿ  52 ಸರಕಾರಿ ಪ್ರೌಢಶಾಲೆಗಳಲ್ಲಿ  16 ಶಾಲೆಗಳಿಗೆ ಸ್ವಂತ ವಾಹನ ಸೌಲಭ್ಯವಿದೆ. 16 ಪ್ರೌಢಶಾಲೆಗಳಿರುವ ಅನುದಾನಿತ ವಲಯದಲ್ಲಿ  ನಾಲ್ಕು ಶಾಲೆಗಳಿಗೆ ಮಾತ್ರ ಸ್ವಂತ ವಾಹನವಿದೆ.

ಮಂಜೇಶ್ವರ ಉಪಜಿಲ್ಲೆ: ಒಂದೂ ವಾಹನವಿಲ್ಲ ಇದೇ ವೇಳೆ ಪ್ರಾಥಮಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. 40 ಶಾಲೆಗಳಿರುವ ಬೇಕಲ ಉಪ ಜಿಲ್ಲೆಯಲ್ಲಿ, 64 ಶಾಲೆಗಳಿರುವ ಮಂಜೇಶ್ವರ ಉಪಜಿಲ್ಲೆಯಲ್ಲಿ, 71 ಶಾಲೆಗಳಿರುವ ಕುಂಬಳೆ ಉಪಜಿಲ್ಲೆಯಲ್ಲಿ  ಒಂದೇ ಒಂದು ಸರಕಾರಿ ಶಾಲೆಗೂ ಸ್ವಂತ ವಾಹನವಿಲ್ಲ. ಮಂಜೇಶ್ವರ ಶಿಕ್ಷಣ ಉಪಜಿಲ್ಲೆಯಲ್ಲಿ  ಎರಡು, ಬೇಕಲದಲ್ಲಿ  ಆರು ಅನುದಾನಿತ ಶಾಲೆಗಳಿಗೆ ಸ್ವಂತ ವಾಹನವಿದೆ. ಕುಂಬಳೆ ಉಪಜಿಲ್ಲೆಯಲ್ಲಿ  ಎರಡು ಶಾಲೆಗಳಿಗೆ ವಾಹನವಿದೆ.

Advertisement

ಎಲ್ಲೆಡೆ ವಾಹನಗಳ ಕೊರತೆ
ಕುಂಬಳೆ ಉಪಜಿಲ್ಲೆಯಲ್ಲಿ  ಎರಡು ಶಾಲೆಗಳು ಶಾಸಕರ ನಿಧಿಯಿಂದ ವಾಹನ ಧನಸಹಾಯಕ್ಕೆ ಅರ್ಜಿ ಸಲ್ಲಿಸಿವೆ.   54 ಶಾಲೆಗಳಿ ರುವ ಚೆರುವತ್ತೂರು ಉಪಜಿಲ್ಲೆಯಲ್ಲಿ  ಐದು ಅನುದಾನಿತ ಶಾಲೆಗಳಿಗೆ ವಾಹನಗಳಿವೆ. ಪಾಡಿಕ್ಕೀಲಿಲ್‌ ಸರಕಾರಿ ಶಾಲೆಗೆ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಬೇರೆ ಯಾವುದೇ ಸರಕಾರಿ ಶಾಲೆಗೆ ವಾಹನವಿಲ್ಲ. ಚಿತ್ತಾರಿಕ್ಕಲ್‌ ಉಪಜಿಲ್ಲೆಯಲ್ಲಿ  36 ಸರಕಾರಿ ಶಾಲೆಗಳಿದ್ದು, 6 ಶಾಲೆಗಳಿಗೆ ವಾಹನವಿದೆ. ಹೊಸದುರ್ಗ ಉಪಜಿಲ್ಲೆಯಲ್ಲಿ  56 ಸರಕಾರಿ ಶಾಲೆಗಳಿದ್ದು, 9 ಶಾಲೆಗಳಿಗೆ ವಾಹನವಿದೆ. ಕಾಸರಗೋಡು ಉಪಜಿಲ್ಲೆಯಲ್ಲಿ  74 ಶಾಲೆಗಳಿದ್ದು, 10 ಶಾಲೆಗಳಿಗೆ ವಾಹನ ಸೌಲಭ್ಯ ಮಾಡಲಾಗಿದೆ.

ಅಂಗಡಿಮೊಗರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಹೇರೂರು ಮೀಪಿರಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಗೆ ಅನೇಕ ಮಂದಿ ಮಕ್ಕಳು ಕಿಲೋ ಮೀಟರ್‌ಗಳಷ್ಟು  ದೂರದಿಂದ ಬರುತ್ತಾರೆ. ಬದಿಯಡ್ಕ, ಮುಳ್ಳೇರಿಯ, ಮುಂತಾದೆಡೆಗಳ ಶಾಲೆಗಳಿಗೂ ವಾಹನ ಸೌಕರ್ಯ ಇಲ್ಲದಿರುವುದರಿಂದ ಗ್ರಾಮೀಣ ವಲಯದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ. 

ರಾಷ್ಟ್ರೀಯ ಹೆದ್ದಾರಿ ಮೊದಲಾದ ಪ್ರಧಾನ ರಸ್ತೆಯ ಪಕ್ಕದಲ್ಲೇ ಶಾಲೆಗಳಿದ್ದರೆ ಅಂತಹ ಶಾಲೆಗಳಿಗೆ ಸ್ವಂತ ವಾಹನ ಅಗತ್ಯವಿಲ್ಲ  ಎಂಬ ನಿಲುವು ತಪ್ಪು  ಎಂದು ಸಿಬಿಎಸ್‌ಇ ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯಲ್ಲಿ  ಐದು-ಹತ್ತು  ವಾಹನಗಳಿರುವ ಖಾಸಗಿ ಶಾಲೆಗಳು ರಾಷ್ಟ್ರೀಯ ಹೆದ್ದಾರಿಯ 100-200 ಮೀಟರ್‌ ದೂರದಲ್ಲಿವೆ. ವಾಹನಗಳು ಮಕ್ಕಳ ಹೆತ್ತವರನ್ನು  ಶಾಲೆಗೆ ಆಕರ್ಷಿಸುವ ಪ್ರಧಾನ ವ್ಯವಸ್ಥೆಯಾಗಿದೆ.

ಎಡಕ್ಕಾನಂ ಮಕ್ಕಳಿಂದ ನಿತ್ಯ 9 ಕಿ.ಮೀ. ಪಾದಯಾತ್ರೆ
ಮಂಜೇಶ್ವರ ಉಪಜಿಲ್ಲೆಯ ಪಾವೂರು, ದೈಗೋಳಿ, ಸುಳ್ಯಮೆ, ಮಚ್ಚಂಪಾಡಿ, ಪೈವಳಿಕೆಯಂತಹ ಪ್ರದೇಶಗಳಲ್ಲಿ ಕಿಲೋ ಮೀಟರ್‌ಗಳಷ್ಟು  ನಡೆದುಕೊಂಡು ಶಾಲೆಗಳಿಗೆ ತೆರಳಬೇಕಾದ ಸ್ಥಿತಿಯಿದೆ. ಚಿತ್ತಾರಿಕ್ಕಲ್‌ ಉಪಜಿಲ್ಲೆಯ ಎಡಕ್ಕಾನಂದಲ್ಲಿ  9 ಕಿಲೋ ಮೀಟರ್‌ ನಡೆದುಕೊಂಡೇ ಮಾಲೋತ್‌ ಕಸಬಾ ಶಾಲೆಗೆ ಆಗಮಿಸುವ ಮಕ್ಕಳಿದ್ದಾರೆ. ಕರ್ನಾಟಕ ಅರಣ್ಯಕ್ಕೆ ಹೊಂದಿಕೊಂಡಿರುವ ಕಮ್ಮಾಡಿ, ಕೋಟ್ಟಂಜೇರಿ, ಪಡಯಂಕಲ್ಸ್‌, ಅತ್ತಿಯಡ್ಕ ಮೊದಲಾದೆಡೆಗಳ ವಿದ್ಯಾರ್ಥಿಗಳು ಮುಂಜಾನೆ 7 ಗಂಟೆಗೆ ನಡೆದುಕೊಂಡು ಬಂದು 10 ಗಂಟೆಗೆ ಶಾಲೆಗೆ ತಲುಪುತ್ತಾರೆ. ಪ್ರಯಾಣ ಸೌಕರ್ಯ ಇಲ್ಲದಿರುವುದರಿಂದ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿದ ಹಲವಾರು ವಿದ್ಯಾರ್ಥಿಗಳು ಈ ಪ್ರದೇಶದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next