ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 2013ರ ಮೇ 8ರಿಂದ 2017ರ ಡಿ. 20ರವರೆಗೆ 515.80 ಕೋ.ರೂ. ವೆಚ್ಚದಲ್ಲಿ 4,481 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಡಿ. 30 ರಂದು ತಾ.ಪಂ. ಸಭಾಂಗಣ ದಲ್ಲಿ ಜರಗಿದ ವಿವಿಧ ಇಲಾಖೆಗಳ ಎಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.
139.40 ಕೋ.ರೂ.ಗಳ 453 ಕಾಮಗಾರಿಗಳು ಪ್ರಗತಿಯಲ್ಲಿವೆ. 163.27 ಕೋ.ರೂ.ಗಳ 424 ಕಾಮಗಾರಿಗಳು ಮಂಜೂರಾಗಿ ಪ್ರಾರಂಭಕ್ಕೆ ಬಾಕಿ ಇವೆ. ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳು ವವರೆಗೆ ವಿಳಂಬಿಸುವುದು ಬೇಡ ಎಂದು ಅವರು ಸೂಚನೆ ನೀಡಿದರು.
ಪರ್ಕಳ-ಆದಿಉಡುಪಿ ಚತುಷ್ಪಥ ಪರ್ಕಳದಿಂದ ಆದಿಉಡುಪಿವರೆಗಿನ ರಾ. ಹೆದ್ದಾರಿ ಹೊಂಡಗಳಿಂದ ಕೂಡಿದ್ದು, ನಿರಂತರ ಸೂಚನೆ ನೀಡಲಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಇದರ ದುರಸ್ತಿ, ಅಭಿವೃದ್ಧಿಗೆ ಅಡ್ಡಿ ಏನು ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೊಂಡ ಮುಚ್ಚುವ ಕಾಮಗಾರಿ ನಡೆಯುತ್ತಿವೆ. ಮೊದಲ ಹಂತದಲ್ಲಿ ಆದಿ ಉಡುಪಿ- ಪರ್ಕಳ ರಸ್ತೆ ಚತುಷ್ಪಥಕ್ಕಾಗಿ 87 ಕೋ.ರೂ.ಗಳ ಅಂದಾಜುಪಟ್ಟಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.
ಆದಿ ಉಡುಪಿ- ಮಲ್ಪೆ ರಸ್ತೆಯ ಚತುಷ್ಪಥ ಕಾಮಗಾರಿಯನ್ನು ಕೂಡ ಕೂಡಲೇ ಕೈಗೆತ್ತಿಕೊಳ್ಳಿ. ಇಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಕೇಂದ್ರ ಸರಕಾರ ಅನುದಾನ, ಪರಿಹಾರ ನೀಡಿದರೆ ಭೂ ಸ್ವಾಧೀನ ಮಾಡಿಕೊಡುತ್ತೇವೆ ಎಂದು ಪ್ರಮೋದ್ ಹೇಳಿದರು.
ಪೆರಂಪಳ್ಳಿ, ನೀಲಾವರ ಸೇತುವೆ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿವೆ. ಉಡುಪಿ ನಗರದಲ್ಲಿ ಹೊಂಡ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ಕಲ್ಸಂಕ ಸೇತುವೆಗೆ ಶಿಲಾನ್ಯಾಸ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಪ್ಪುಪಟ್ಟಿಗೆ ಸೇರಿಸಿ ನಾನು ನೀಡಿದ ಗಡುವಿನೊಳಗೆ ಕಾಮಗಾರಿಗಳು ಪೂರ್ಣಗೊಳಿಸಬೇಕು. ಸೇತುವೆಯಂಥ ಕಾಮಗಾರಿಗಳಿಗೆ ಹೆಚ್ಚು ಸಮಯ ಅಗತ್ಯವಾಗಿರುವುದ ರಿಂದ ಅವನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳು ನಿಗದಿತ ದಿನಾಂಕದೊಳಗೆ ಪೂರ್ಣಗೊಳ್ಳಬೇಕು. ಆಡಳಿತದೊಂದಿಗೆ ಸ್ಪಂದಿಸದ, ಸಮರ್ಪಕವಾಗಿ ಕಾರ್ಯನಿರ್ವಹಿಸದ ಗುತ್ತಿಗೆ ದಾರರನ್ನು ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ. ನನಗೆ ವಾರ, ತಿಂಗಳು ಇತ್ಯಾದಿ ಗಡುವು ಬೇಡ, ಕಾಮಗಾರಿ ಪೂರ್ಣಗೊಳಿಸುವ ನಿರ್ದಿಷ್ಟ ದಿನಾಂಕವನ್ನೇ ತಿಳಿಸಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.