Advertisement

ಗೃಹ ಜ್ಯೋತಿ ಯೋಜನೆಯ ಸರಾಗ ನೋಂದಣಿಗೆ 51 ಲಕ್ಷದ ಮೈಲಿಗಲ್ಲು

09:30 PM Jun 25, 2023 | Team Udayavani |

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಗೆ, ಜೂನ್ 18 ರಿಂದ ಆರಂಭವಾದ ನೋಂದಣಿ ಪ್ರಕ್ರಿಯೆ ಶರವೇಗ ಪಡೆದುಕೊಂಡಿದ್ದು, ಇದೀಗ 50 ಲಕ್ಷ ನೋಂದಣಿಯ ಗಡಿಯನ್ನು ದಾಟಿದೆ ಎಂದು ಇಂಧನ ಇಲಾಖೆ ಪ್ರಕಟಣೆ ತಿಳಿಸಿದೆ.

Advertisement

ಜೂನ್ 25 ಭಾನುವಾರ ಸಂಜೆ 4 ಗಂಟೆಯವರೆಗೆ 51,17,693 ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ವಿಧಾನವನ್ನು ಅತ್ಯಂತ ಸುಲಭಗೊಳಿಸಿರುವುದರಿಂದ, ಗ್ರಾಹಕರು ಅತ್ಯಂತ ಉತ್ಸುಕತೆಯನ್ನು ತೋರುತ್ತಿದ್ದು, ಪ್ರತಿದಿನವೂ ಲಕ್ಷದೋಪಾದಿಯಲ್ಲಿ ನೋಂದಣಿಯ ಪ್ರಮಾಣ ಹೆಚ್ಚುತ್ತಿದೆ.

ಗೃಹ ಜ್ಯೋತಿ ಯೋಜನೆಗೆ ಯಾವುದೇ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಸಂಪೂರ್ಣ ಉಚಿತ. ಗ್ರಾಹಕರು ಮೇಲ್ಕಂಡ ವೆಬ್’ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್’ಸೈಟ್ ಬಳಸದೇ ಇರುವುದು ಸೂಕ್ತ. ಇದಲ್ಲದೇ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಈ ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್ https://energy.karnataka.gov.in ಗೆ ಭೇಟಿ ನೀಡಿ ಅಥವಾ 24×7 ಸಹಾಯವಾಣಿ 1912 ಕ್ಕೆ ಕರೆಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next