Advertisement

ಹೋರಾಟಗಾರರ ವಿರುದ್ಧದ 51 ಪ್ರಕರಣ ವಾಪಸ್‌

10:41 AM Feb 06, 2020 | Lakshmi GovindaRaj |

ಬೆಂಗಳೂರು: ಕಾವೇರಿ ಜಲವಿವಾದ, ಎತ್ತಿನಹೊಳೆ, ಕಳಸಾ-ಬಂಡೂರಿ ಯೋಜನೆ ಸೇರಿದಂತೆ ರಾಜ್ಯದ ಜಲಪರ ಹೋರಾಟ ಗಳಲ್ಲಿ ಭಾಗಿಯಾದ ಸ್ವಾಮೀಜಿಗಳು, ರೈತ ನಾಯಕರು ಸೇರಿದಂತೆ ಇತರರ ವಿರುದ್ಧ ದಾಖಲಿಸಲಾಗಿದ್ದ 51 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆಯಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಸಂಪುಟ ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕಾವೇರಿ ಜಲವಿವಾದ ಸಂಬಂಧ ಮಾಜಿ ಸಂಸದ ಜಿ.ಮಾದೇಗೌಡ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಹೋರಾಟಕ್ಕೆ ಸಂಬಂಧಪಟ್ಟ 35 ಪ್ರಕರಣಗಳನ್ನು ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ.

ಹಾಗೆಯೇ, ಬೇಲೂರು ತಾಲೂಕಿನಲ್ಲಿ ರೈತ ಸಂಘ, ಹಸಿರು ಸೇನೆಯು ರಣಘಟ್ಟ, ಎತ್ತಿನಹೊಳೆ ಯೋಜನೆ ವಿರುದ್ಧ ನಡೆದ ಹೋರಾಟಕ್ಕೆ ಸಂಬಂಧಪಟ್ಟಂತೆ ಪುಷ್ಪಗಿರಿ ಮಠದ ಸ್ವಾಮೀಜಿ ಸೇರಿದಂತೆ ಹಲವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಗರಂ: ದಾಸೋಹ ಯೋಜನೆಗೆ ಅಕ್ಕಿ, ಗೋಧಿ ವಿತರಣೆ ಸ್ಥಗಿತಗೊಂಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ದಾಸೋಹ ನೀಡುತ್ತಿರುವ ಸಂಸ್ಥೆಗಳಿಗೆ ನೆರವಾಗದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
* ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ರೈಟ್ಸ್‌ ಸಂಸ್ಥೆ ಸಲ್ಲಿಸಿರುವ “ಕಾನ್ಸೆಪ್ಟ್ ನೋಟ್‌’ಗೆ ಒಪ್ಪಿಗೆ ನೀಡಿದ್ದು, 220 ಕೋಟಿ ರೂ.ವೆಚ್ಚಕ್ಕೆ ಅನುಮೋದನೆ.

Advertisement

* ನಲಿ- ಕಲಿ ಕಾರ್ಯಕ್ರಮದಡಿ ಕನ್ನಡ ಮಾಧ್ಯಮದ 1ರಿಂದ 3ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಉರ್ದು ಮಾಧ್ಯಮದ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಪೂರೈಕೆಗೆ 27 ಕೋಟಿ ರೂ.

* ನಾನಾ ಜಿಲ್ಲೆಗಳಲ್ಲಿ 120 ಆ್ಯಂಬುಲೆನ್ಸ್‌ ಖರೀದಿಗೆ 32.04 ಕೋಟಿ ರೂ.ಬಿಡುಗಡೆಗೆ ಒಪ್ಪಿಗೆ. ಬೆಂಗಳೂರಿನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯ ಇತರ ನಿರ್ಮಾಣ ಕಾಮಗಾರಿ ವೆಚ್ಚ 263 ಕೋಟಿ ರೂ.ಗೆ ಹೆಚ್ಚಳ.

* ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 10.56 ಕೋಟಿ ರೂ.ವೆಚ್ಚದಲ್ಲಿಎರಡನೇ ಹಂತದ ಅಭಿವೃದ್ಧಿ ಕಾರ್ಯ. ಬೀದರ್‌ನಲ್ಲಿ 1,000 ಬಂಧಿಗಳ ಸಾಮರ್ಥಯದ ವಿಶಿಷ್ಟ ಕಾರಾಗೃಹವನ್ನು 99.95 ಕೋಟಿ ರೂ.ವೆಚ್ಚದಲ್ಲಿ ಮೂರು ವರ್ಷದಲ್ಲಿ ಪೂರ್ಣಗೊಳಿಸಲು ಒಪ್ಪಿಗೆ.

* ಬೆಂಗಳೂರಿನ ಖನಿಜ ಭವನದ ಪಕ್ಕ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 13.12 ಕೋಟಿ ರೂ.

* ಕೊಪ್ಪಳ ಜಿಲ್ಲೆಯ ಹಿರೇಹಳ್ಳಕ್ಕೆ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗೆ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವ 89.69 ಕೋಟಿ ರೂ.ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

* ಮೈಸೂರು ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ 84.69 ಕೋಟಿ ರೂ.ವೆಚ್ಚಕ್ಕೆ ಘಟನೋತ್ತರ ಅನುಮೋದನೆ.

* ನನೆಗುದಿಗೆ ಬಿದ್ದಿದ್ದ ರಾಯಚೂರು ನೂತನ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ.

* ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಗದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 3,404 ಲ್ಯಾಪ್‌ಟಾಪ್‌ ವಿತರಣೆಗೆ 7.30 ಕೋಟಿ ರೂ.ಅನುದಾನಕ್ಕೆ ಒಪ್ಪಿಗೆ.

ದಾಸೋಹ ಯೋಜನೆಯಡಿ 32,700 ಮಕ್ಕಳ ಊಟೋಪ ಚಾರಕ್ಕೆ 351 ಕಲ್ಯಾಣ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಕೇವಲ ಸರ್ಕಾರಿ ಶಾಲೆಗೆ ಮಾತ್ರ ಕೊಡಬೇಕು. ಖಾಸಗಿ ಶಾಲೆಗಳ ಹಾಸ್ಟೆಲ್‌ಗ‌ಳಿಗೆ ಕೊಡಬಾರದು ಎಂಬಂತಾಗಿತ್ತು. ಆದರೆ, ಇದೀಗ ಎಲ್ಲ ಸಂಸ್ಥೆಗಳಿಗೂ ನೀಡಲು ನಿರ್ಧರಿಸಲಾ ಗಿದೆ. ಅದರಂತೆ ಅಕ್ಕಿ, ಗೋಧಿ ಖರೀದಿಸಿ ಪೂರೈಸುವುದನ್ನು ಒಂದು ವರ್ಷ ಮುಂದುವರಿಸಲು 18 ಕೋಟಿ ರೂ.ನೀಡಲು ನಿರ್ಧರಿಸಲಾಗಿದೆ.
-ಜೆ.ಸಿ.ಮಾಧುಸ್ವಾಮಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next