Advertisement

500ನೇ ಪಂದ್ಯ ಕೊಹ್ಲಿ 76ನೇ ಸ್ಮರಣೀಯ ಶತಕ ಸಂಭ್ರಮ

10:46 PM Jul 21, 2023 | Team Udayavani |

ಪೋರ್ಟ್‌ ಆಫ್ ಸ್ಪೇನ್: ಆರಂಭಿಕ ಆಟಗಾರರಾದ ರೋಹಿತ್‌ ಮತ್ತು ಯಶಸ್ವಿ ಜೈಸ್ವಾಲ್‌ ಅವರ ಅರ್ಧಶತಕದ ಬಳಿಕ ವಿರಾಟ್‌ ಕೊಹ್ಲಿ ಅವರ ಅಮೋಘ ಶತಕದಿಂದಾಗಿ ಭಾರತ ತಂಡವು ವೆಸ್ಟ್‌ಇಂಡೀಸ್‌ ತಂಡದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಸುಭದ್ರ ಸ್ಥಿತಿಯಲ್ಲಿದೆ. ದ್ವಿತೀಯ ದಿನದ ಊಟದ ವಿರಾಮದ ವೇಳೆಗೆ ಭಾರತ ಆರು ವಿಕೆಟ್‌ ಕಳೆದುಕೊಂಡಿದ್ದು 373 ರನ್‌ ಗಳಿಸಿದೆ. ಇಶಾನ್‌ ಕಿಶನ್‌ 18 ಮತ್ತು ಆರ್‌. ಅಶ್ವಿ‌ನ್‌ 6 ರನ್ನುಗಳೊಂದಿಗೆ ಆಡುತ್ತಿದ್ದಾರೆ.

Advertisement

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದು 288 ರನ್‌ ಗಳಿಸಿತ್ತು. 87 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ್ದ ಕೊಹ್ಲಿ ಉತ್ತಮವಾಗಿ ಶತಕ ಪೂರ್ತಿಗೊಳಿಸಿದರು. 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಕೊಹ್ಲಿ ಕ್ರಿಕೆಟ್‌ ಬಾಳ್ವೆಯಲ್ಲಿ 76ನೇ ಶತಕ ಬಾರಿಸಿ ಸ್ಮರಣೀಯಗೊಳಿಸಿದರು. ವಿದೇಶದ ಟೆಸ್ಟ್‌ ಸರಣಿಯಲ್ಲಿ 2018ರ ಡಿಸೆಂಬರ್‌ ಬಳಿಕ ಇದು ಅವರು ದಾಖಲಿಸಿದ ಮೊದಲ ಶತಕ ಆಗಿದೆ.

ಆರಂಭಿಕರಾದ ಜೈಸ್ವಾಲ್‌ ಮತ್ತು ರೋಹಿತ್‌ ಅವರು ಮೊದಲ ವಿಕೆಟಿಗೆ 139 ರನ್‌ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಜೈಸ್ವಾಲ್‌ 57 ರನ್‌ ಹೊಡೆದರೆ ರೋಹಿತ್‌ 80 ರನ್‌ ಗಳಿಸಿ ಔಟಾದರು. ಆಬಳಿಕ ಕೊಹ್ಲಿ ಅವರ ಅಮೋಘ ಆಟದಿಂದ ತಂಡ ಸುಸ್ಥಿತಿಗೆ ತಲುಪಿತು. ಅಜಿಂಕ್ಯ ರಹಾನೆ ಬೇಗನೇ ಔಟಾದ ಬಳಿಕ ಕೊಹ್ಲಿ ಅವರನ್ನು ಸೇರಿಕೊಂಡ ರವೀಂದ್ರ ಜಡೇಜ ಇನ್ನಷ್ಟು ಕುಸಿತ ಆಗದಂತೆ ನೋಡಿಕೊಂಡರು.

ಅಂತಿಮ ಅವಧಿಯ ಆಟದಲ್ಲಿ ಕೆಲವೊಂದು ಆಕರ್ಷಕ ಹೊಡೆತಗಳಿಂದ ಗಮನ ಸೆಳೆದ ಕೊಹ್ಲಿ ಮತ್ತು ಜಡೇಜ ದಿನದಾಟ ಅಂತ್ಯಗೊಂಡಾಗ ಮುರಿಯದ ಐದನೇ ವಿಕೆಟಿಗೆ 106 ರನ್‌ ಪೇರಿಸಿದ್ದರು. 20 ಎಸೆತ ಎದುರಿಸಿದ ಬಳಿಕ ರನ್‌ ಖಾತೆ ತೆರೆದಿದ್ದ ಕೊಹ್ಲಿ ಆಬಳಿಕ ಭರ್ಜರಿಯಾಗಿ ಆಡಿ ರಂಜಿಸಿದರು. ಒಟ್ಟಾರೆ 206 ಎಸೆತ ಎದುರಿಸಿದ ಅವರು 121 ರನ್‌ ಗಳಿಸಿ ಔಟಾದರು. 11 ಬೌಂಡರಿ ಹೊಡೆದಿದ್ದ ಅವರು ಐದನೇ ವಿಕೆಟಿಗೆ ಜಡೇಜ ಅವರ ಜತೆ 159 ರನ್‌ ಪೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next