Advertisement

“ನವಕರ್ನಾಟಕ ಮುನ್ನೋಟ 2025’ಕ್ಕೆ 50 ಸಾವಿರ ಸಲಹೆ

06:11 PM Dec 27, 2017 | Team Udayavani |

ಬೆಂಗಳೂರು: ಮುಂದಿನ ಏಳು ವರ್ಷಗಳಲ್ಲಿ ಕರ್ನಾಟಕ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ರಾಜ್ಯಾದ್ಯಂತ ನಾನಾ ವರ್ಗದ ಜನರಿಂದ 50,000ಕ್ಕೂ ಹೆಚ್ಚು ಸಲಹೆ, ಅಭಿಪ್ರಾಯ ಸಲ್ಲಿಕೆಯಾಗಿವೆ! ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ನವಕರ್ನಾಟಕ ಮುನ್ನೋಟ- 2025′ ಪರಿಕಲ್ಪನೆಯಡಿ ಎಲ್ಲ 30 ಜಿಲ್ಲೆಗಳ ಜನರಿಂದ ಅಭಿಪ್ರಾಯ, ಸಲಹೆ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡಿದೆ.

Advertisement

ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು. ಗ್ರಾಮೀಣ ಮಹಿಳೆಯರಿಗೆ ಸ್ಥಾನಮಾನ- ಬಲವರ್ಧನೆ, ಸಾಮಾಜಿಕ ನ್ಯಾಯ ಪಾಲನೆ ಮುಂದುವರಿಸಬೇಕೆಂಬ ಮನವಿಯೂ ಸಲ್ಲಿಕೆಯಾಗಿದೆ. ಇಲಾಖೆ ಕಾರ್ಯದರ್ಶಿಗಳ ಪರಿಶೀಲನೆ ಮುಗಿದಿದ್ದು, ಸಚಿವರ ಹಂತದ ಪರಿಶೀಲನೆ ಬಳಿಕ ಡಿ.31ಕ್ಕೆ ವೆಬ್‌ಸೈಟ್‌ನಲ್ಲಿ ಕರಡು ನೀಲನಕ್ಷೆ ಪ್ರಕಟವಾಗುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜನರ ಅಪೇಕ್ಷೆ, ನಿರೀಕ್ಷೆಗಳನ್ನು ತಿಳಿದು 2025ರ ವೇಳೆಗೆ ಅಭಿವೃದ್ಧಿಪಡಿಸಬೇಕಾದ ಮುನ್ನೋಟ ಸಿದ್ಧಪಡಿಸಲು ಮುಂದಾಗಿದೆ. ಅದರಂತೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ಗ್ರಾಮೀಣಾಭಿವೃದ್ಧಿ, ಮೂಲ ಸೌಕರ್ಯ, ಉದ್ಯೋಗ- ಕೌಶಲ್ಯ, ಕೈಗಾರಿಕಾಭಿವೃದ್ಧಿ, ಸಾಮಾಜಿಕ ನ್ಯಾಯ- ಸಬಲೀಕರಣ, ಆರೋಗ್ಯ, ಶಿಕ್ಷಣ, ನಗರಾಭಿವೃದ್ಧಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ (ನ್ಯಾಯಾಧಿಕಾರ) ಸೇರಿ ಒಟ್ಟು 13 ವಲಯಗಳನ್ನು ಗುರುತಿಸಲಾಗಿತ್ತು.

ಯೋಜನೆಯ ಸಿಇಒ ರೇಣುಕಾ ಚಿದಂಬರಂ ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆಸಿದ್ದು, ಸಾಮಾನ್ಯರು, ಸಂಘ ಸಂಸ್ಥೆಗಳು, ವಿಷಯ ತಜ್ಞರು, ವೃತ್ತಿಪರು ಸೇರಿ ನಾನಾ ವರ್ಗದವರ ಅಭಿಪ್ರಾಯ, ಸಲಹೆ ಸ್ವೀಕರಿಸಿದ್ದಾರೆ. ರಾಜ್ಯಾದ್ಯಂತ ನಡೆಸಿದ ಸಭೆ, ಕಾರ್ಯಾಗಾರಗಳಲ್ಲಿ 45,000ಕ್ಕೂ ಹೆಚ್ಚು ಸಲಹೆಗಳನ್ನು ನೇರವಾಗಿ ಪಡೆಯಲಾಗಿದೆ. ಪತ್ರ, ಇ-ಮೇಲ್‌, ವೆಬ್‌ಸೈಟ್‌ ಸೇರಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್‌ ಮೂಲಕ 5000ಕ್ಕೂ ಹೆಚ್ಚು ಸಲಹೆ ಸಲ್ಲಿಕೆಯಾಗಿವೆ.

ಶಿಕ್ಷಣ, ಆರೋಗ್ಯ, ಮೂಲಸೌಕರ್ಯ: ಒಟ್ಟು 13 ಆದ್ಯತಾ ವಲಯಗಳ ಪೈಕಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸಂಬಂಧ ಅತಿ ಹೆಚ್ಚು ಸಲಹೆ ಸಲ್ಲಿಕೆಯಾಗಿವೆ. ಈ 3 ವಲಯಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಇನ್ನಷ್ಟು ಒತ್ತು ನೀಡಬೇಕೆಂಬ ಮನವಿ ಕೇಳಿಬಂದಿದೆ. ಜತೆಗೆ ಗ್ರಾಮೀಣ ಮಹಿಳೆಯರಿಗೆ ಸ್ಥಾನಮಾನ, ಆರ್ಥಿಕ ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯ ಪಾಲನೆ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮುನ್ನೋಟದ ವಿಶೇಷ: ರಾಜ್ಯದ ಸಾಮಾನ್ಯ ಜನರಿಂದ ಹಿಡಿದು ಎಲ್ಲ ವರ್ಗದವರ ಸಲಹೆ, ಅಭಿಪ್ರಾಯ ಆಲಿಸಿ ರಾಜ್ಯದ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸುವ ಪ್ರಯತ್ನ ದೇಶದಲ್ಲೇ ಪ್ರಥಮ ಎನ್ನಲಾಗಿದೆ. ಜತೆಗೆ ಜನರ ನಿರೀಕ್ಷೆಗಳನ್ನು ತಲುಪಲು ಸಂಬಂಧಪಟ್ಟ ಇಲಾಖೆಗಳ ಪಾತ್ರ ಗುರುತಿಸಿ ಸಂಘಟಿತವಾಗಿ ಕಾರ್ಯಪ್ರವೃತ್ತವಾಗಲು ಸಹಕಾರಿಯಾಗಲಿದೆ. ಇಲಾಖೆಗಳಿಗೆ ಕೇವಲ ಗುರಿ ನೀಡುವ ಬದಲಿಗೆ ಗುರಿ ತಲುಪಲು ಪೂರಕವಾದ ವ್ಯವಸ್ಥೆ ಕಲ್ಪಿಸಲು ಈ ಮುನ್ನೋಟ ಸಹಕಾರಿಯಾಗುವುದು ವಿಶೇಷ ಎಂದು ಮೂಲಗಳು ಹೇಳಿವೆ.

ಜ.15ಕ್ಕೆ ಅಂತಿಮ: ಸಲಹೆ, ಅಭಿಪ್ರಾಯ ಸ್ವೀಕಾರ ಡಿ.23ಕ್ಕೆ ಮುಕ್ತಾಯವಾಗಿದೆ. ಇಲಾಖೆಗಳ ಕಾರ್ಯದರ್ಶಿಗಳ ಹಂತದಲ್ಲಿ ಪರಿಶೀಲನೆ ಮುಗಿದಿದ್ದು, ಸದ್ಯ ಸಚಿವರ ಹಂತದಲ್ಲಿ ಪರಿಶೀಲನೆ ನಡೆಯಬೇಕಿದೆ. ಡಿ.31ಕ್ಕೆ ಕರಡು ಸಲಹೆ, ಅಭಿಪ್ರಾಯಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅಧಿಕಾರಿಗಳು ಚಿಂತಿಸಿದ್ದಾರೆ. 15 ದಿನ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಿ ಬಳಿಕ ಅವುಗಳನ್ನು ಪರಿಶೀಲಿಸಿ ಜ.15ರ ಹೊತ್ತಿಗೆ ಅಂತಿಮಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ರಾಜ್ಯದ ಅಭಿವೃದ್ಧಿ, ಜನ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಜನರ ಅಪೇಕ್ಷೆ ತಿಳಿದು ಸಲಹೆ ಪಡೆಯಲು ಸೆಪ್ಟೆಂಬರ್‌ನಲ್ಲಿ ಆರಂಭವಾದ ಪ್ರಕ್ರಿಯೆ ಡಿ.23ಕ್ಕೆ ಮುಕ್ತಾಯವಾಗಿದೆ. 50,000ಕ್ಕೂ ಹೆಚ್ಚು ಸಲಹೆ ಸಲ್ಲಿಕೆಯಾಗಿದೆ. ದೇಶದಲ್ಲೇ ಪ್ರಥಮವೆನಿಸಿದ ಪ್ರಯತ್ನ ಇತರೆ ರಾಜ್ಯಗಳಿಗೂ ಮಾದರಿಯಾಗುವ ನಿರೀಕ್ಷೆ ಇದೆ.
-ರೇಣುಕಾ ಚಿದಂಬರಂ, “ನವ ಕರ್ನಾಟಕ ಮುನ್ನೋಟ- 2025′ ಯೋಜನೆ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next