Advertisement
ಇದಲ್ಲದೆ, ಐಬಸ್ ಮತ್ತು ಮೈಸೂರು ನಗರ ಕಮಾಂಡೋ ಪಡೆಯ 70 ಕಮಾಂಡೋಗಳು, 60 ಕೆಎಸ್‌ಆರ್‌ಪಿ, ಸಿಎಆರ್-ಡಿಎಆರ್ ತುಕಡಿಗಳು, ಬಾಂಬ್ ನಿಷ್ಕ್ರಿಯ ದಳ, ಕ್ಷಿಪ್ರ ಕಾರ್ಯಪಡೆ ಸೇರಿದಂತೆ 49 ಭದ್ರತಾ ತಪಾಸಣಾ ಪಡೆಗಳು, ಹಾಗೂ 1600 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರಾವ್, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಸಿಸಿಟಿವಿ: ದಸರಾ ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಅಳವಡಿಸಿರುವ ಕಾಯಂ ಸಿಸಿ ಕ್ಯಾಮರಾಗಳ ಜತೆಗೆ ತಾತ್ಕಾಲಿಕವಾಗಿ ಅರಮನೆ, ಬನ್ನಿಮಂಟಪ ಮೈದಾನ, ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಮತ್ತು ಇತರೆ ಸ್ಥಳಗಳಲ್ಲಿ ಒಟ್ಟು 66 ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ದಿನದ 24ಗಂಟೆಗಳ ಕಾಲ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಹಾಯವಾಣಿ: ನಾಡಹಬ್ಬದ ಸಂದರ್ಭದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ನಗರದ 30 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ವಾಹನ ನಿಲುಗಡೆ ಇಲ್ಲ: ಅರಮನೆ ಸುತ್ತಮುತ್ತಲಿನ ರಸ್ತೆಗಳು, ನ್ಯೂ ಸಯ್ನಾಜಿರಾವ್ ರಸ್ತೆ, ಬಿ.ಎನ್.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಸೆ.21ರಿಂದ 30ರವರೆಗೆ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಈ ರಸ್ತೆಗಳ ಬದಿಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 10ಗಂಟೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಭಾರೀ ವಾಹನದಟ್ಟಣೆ ಉಂಟಾಗುತ್ತಿರುವುದರಿಂದ ಈ ವರ್ಷ ಪ್ರಾಯೋಗಿಕವಾಗಿ ಆಹಾರ ಮೇಳ ಹಾಗೂ ಯುವ ದಸರಾ ನಡೆಯುವ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಯಶಸ್ವಿಯಾದರೆ ಮುಂದಿನ ವರ್ಷ ಎಲ್ಲ ಸ್ಥಳಗಳಲ್ಲೂ ವಾಹನ ನಿಲುಗಡೆ ನಿಷೇಧಿಸಲಾಗುವುದು ಎಂದರು.
ಡಿ.ದೇವರಾಜ ಅರಸು ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜಿಸಿರುವುದರಿಂದ ಸೆ.26ರ ರಾತ್ರಿ 9ಗಂಟೆಯಿಂದ ಸೆ.27ರ ರಾತ್ರಿ 10ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಡಿಸಿಪಿಗಳಾದ ವಿಕ್ರಂ ಆಮಟೆ, ವಿಷ್ಣುವರ್ಧನ ಸುದ್ದಿಗೋಷ್ಠಿಯಲ್ಲಿದ್ದರು.
ಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿರ್ಬಂಧ: ದಸರಾ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬರುವುದರಿಂದ ಬೆಟ್ಟದಲ್ಲಿ ಸಂಚಾರ ವ್ಯವಸ್ಥೆ ಹದಗೆಡುವುದನ್ನು ತಪ್ಪಿಸಲು ಸೆ.22 ರಿಂದ 24 ಹಾಗೂ ಸೆ.28ರಿಂದ ಅ.2ರವರೆಗೆ ಪ್ರತಿ ದಿನ ಬೆಳಗ್ಗೆ 6ರಿಂದ ರಾತ್ರಿ 9.30ರವರೆಗೆ ಖಾಸಗಿ ವಾಹನಗಳನ್ನು ತಾವರೆಕಟ್ಟೆಯಿಂದ ಚಾಮುಂಡಿಬೆಟ್ಟಕ್ಕೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಸಾರಿಗೆ ಬಸ್ಸುಗಳ ಸೇವೆ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದರು.