ಹೊಸದಿಲ್ಲಿ: ಉದ್ಯೋಗದ ಆಮಿಷಕ್ಕೆ ಸಿಕ್ಕಿ ಕಾಂಬೋಡಿಯಾಕ್ಕೆ ತೆರಳಿರುವ ಸುಮಾರು 5 ಸಾವಿರದಷ್ಟು ಭಾರತೀಯರು ಈಗ “ಸೈಬರ್ ಗುಲಾಮ’ರಾಗಿ ಆ ದೇಶದಲ್ಲಿ ಅತಂತ್ರರಾಗಿದ್ದಾರೆ. ಅಲ್ಲಿಂದ ಪಾರಾಗಲಾಗದೆ ಒದ್ದಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ವಂಚಿತ ಭಾರತೀಯರು, ಆನ್‌ಲೈನ್‌ನಲ್ಲಿ ಭಾರತೀಯರನ್ನೇ ವಂಚಿಸುವ ಕೆಲಸಕ್ಕೆ ನಿಯೋಜಿತರಾಗಿದ್ದಾರೆ. ಕಳೆದ ತಿಂಗಳಲ್ಲಿ ಹತ್ತಿರಹತ್ತಿರ 500 ಕೋಟಿ ರೂ. ವಂಚನೆ
ಯಾಗಿದೆ ಎನ್ನಲಾಗಿದೆ.
ಗುರಿ ಮುಟ್ಟದಿದ್ದರೆ ಊಟವಿಲ್ಲ!
ಭಾರತೀಯರನ್ನು ಕರೆದೊಯ್ದು ಬಲಾತ್ಕಾರವಾಗಿ ಆನ್‌ಲೈನ್ ವಂಚನೆ ಮಾಡುವ ಕೆಲಸಕ್ಕೆ ಹಚ್ಚಲಾಗಿದೆ. ಕಾನೂನು ಅಧಿಕಾರಿಗಳ ಹೆಸರಿನಲ್ಲಿ ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಶಂಕಿತ ವಸ್ತುಗಳಿವೆ ಎಂದು ಹೆದರಿಸುವುದು ನಡೆಯುತ್ತಿದೆ. ಹಾಗೆ ಕೆಲಸ ಮಾಡುವ ವ್ಯಕ್ತಿಗಳಿಗೆ ದಿನಕ್ಕೆ ಇಷ್ಟು ವಂಚನೆ ಮಾಡಬೇಕೆಂಬ ಗುರಿಗಳಿರುತ್ತವೆ. ಗುರಿ ಸಾಧಿಸದಿದ್ದರೆ ಉಪವಾಸ ಕೆಡವಲಾಗುತ್ತದೆ. ಮಹಿಳೆಯರ ಚಿತ್ರಗಳನ್ನು ಹಾಕಿಕೊಂಡು ನಕಲಿ ಸಾಮಾಜಿಕ ತಾಣ ಖಾತೆ ತೆರೆಯ ಲಾಗುತ್ತದೆ. ಅದಕ್ಕೆ ವಿವಿಧ ಮೂಲಗಳಿಂದ ಚಿತ್ರ ಪಡೆಯ ಲಾಗುತ್ತದೆ ಎಂದು ಸ್ಟೀಫನ್ ಎಂಬ ವ್ಯಕ್ತಿ ಹೇಳಿದ್ದಾರೆ.
ಈ ಬಗ್ಗೆ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, “ಕಾಂಬೋಡಿಯದಲ್ಲಿ ಭಾರತೀಯರು ಅತಂತ್ರರಾಗಿರುವ ಮಾಹಿತಿ ನಮಗೆ ಸಿಲುಕಿದೆ. ಆ ದೇಶದಲ್ಲಿರುವ ನಮ್ಮ ರಾಯಭಾರ ಕಚೇರಿ ಭಾರತೀಯರಿಂದ ಬರುವ ಎಲ್ಲ ದೂರುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ. ಉದ್ಯೋಗದ ಆಮಿಷ ಒಡ್ಡಿ ಕಾಂಬೋಡಿಯಕ್ಕೆ ಕರೆಸಿಕೊಂಡು ಅನಂತರ ಅವರನ್ನು ಅಕ್ರಮ ಸೈಬರ್ ವಂಚನೆಯ ಜಾಲಕ್ಕೆ ಸೇರಿಸ ಲಾಗಿರುವ ದೂರುಗಳು ಬಂದಿವೆ. ಈ ಸಂಬಂಧ ನಾವು 250 ಭಾರ ತೀಯ ರನ್ನು ಪಾರು ಮಾಡಿದ್ದೇವೆ. ಕಳೆದ 3 ತಿಂಗಳಲ್ಲಿ 75 ಭಾರ ತೀಯರು ದೇಶಕ್ಕೆ ಮರಳಿದ್ದಾರೆ’ ಇಲಾಖೆ ಹೇಳಿದೆ. ಈ ರೀತಿಯ ವಂಚನೆಗಳ ಕುರಿತಂತೆ ವಿದೇಶಾಂಗ ಇಲಾಖೆ ಭಾರತೀಯರಿಗೆ ಎಚ್ಚರಿಕೆ ನೀಡಿದೆ.
ಕಾಂಬೋಡಿಯ ಸರಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಕೇಂದ್ರ ನಿರ್ಧರಿಸಿದೆ.ಚೀನದ ವ್ಯಕ್ತಿ ಬಾಸ್, ಮಲೇಷ್ಯಾದವ ಸಹಾಯಕ ಆನ್‌ಲೈನ್ ವಂಚನೆಗಳಲ್ಲಿ ಚೀನೀಯರ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತದೆ. ಸ್ಟೀಫನ್ ವಂಚನೆಗೊಳಗಾದ ಜಾಗದಲ್ಲಿ ಚೀನೀ ತಂಡ ಕಾರ್ಯನಿರ್ವಹಿಸುತ್ತಿತ್ತು. ಅದಕ್ಕೆ ಮಲೇಷ್ಯಾದ ವ್ಯಕ್ತಿಯೊಬ್ಬರು ಸಹಾಯ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
ಮಂಗಳೂರಿನ ವ್ಯಕ್ತಿಯಿಂದ ಆಫರ್!
ರಕ್ಷಿಸಲ್ಪಟ್ಟ ಸ್ಟೀಫನ್ ಎಂಬ ಐಟಿಐ ಪದವೀಧರ ಹಲವು ಮಾಹಿತಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ತಾನು ಕಂಪ್ಯೂಟರ್ ಕೋರ್ಸ್ ಮಾಡಿದ್ದೆ. ಉದ್ಯೋಗಾಕಾಂಕ್ಷಿಯಾಗಿದ್ದ ತನಗೆ ಮಂಗಳೂರಿನ ಒಬ್ಬರು ಕಾಂಬೋಡಿಯಾದಲ್ಲಿ ಡಾಟಾ ಎಂಟ್ರಿ ಕೆಲಸದ ಆಫರ್ ನೀಡಿದ್ದರು. ಆಂಧ್ರದ ಬಾಬುರಾವ್ ಸೇರಿ ನಾವು ಮೂವರಿದ್ದೆವು. ವಲಸೆ ಕೇಂದ್ರದಲ್ಲಿ ಏಜೆಂಟ್ ಒಬ್ಬರು ನಮ್ಮ ಪ್ರವಾಸಿ ವೀಸಾದ ವಿಚಾರ ತಿಳಿಸಿದರು. ಆಗ ತನಗೆ ಸಂಶಯ ಬಂತು ಎಂದಿದ್ದಾರೆ.