ಧಾರವಾಡ: ಕೋವಿಡ್-19ಲಾಕ್‌ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೊಳಗಾಗಿರುವ ಮೆಕ್ಕೆಜೋಳ ಬೆಳೆದ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ 5,000 ರೂ. ಪಾವತಿಸಲಾಗುವುದು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಸಮೀಕ್ಷೆ ತಂಡಗಳು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಪಟ್ಟಿ ಸಿದ್ಧಪಡಿಸಿ ಒದಗಿಸಬೇಕು ಎಂದರು.
ಸಾರ್ವಜನಿಕರ ಮಾಹಿತಿಗೆ ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕಚೇರಿಗಳಲ್ಲಿ ಜಿಲ್ಲೆಯ ಮೆಕ್ಕಜೋಳ ಬೆಳೆಗಾರರ ಪಟ್ಟಿ ಪ್ರದರ್ಶಿಸಬೇಕು. ಪಟ್ಟಿ ಪರಿಶೀಲಿಸಿದ ನಂತರ ಮೆಕ್ಕೆಜೋಳ ಬೆಳೆದ ರೈತರ ಹೆಸರುಗಳು ಬೆಳೆ ಸಮೀಕ್ಷೆ ಪಟ್ಟಿಯಲ್ಲಿಲ್ಲದಿದ್ದರೆ ಅಥವಾ ಕೆ-ಕಿಸಾನ್ ತಂತ್ರಾಂಶದಲ್ಲಿ ಹೆಸರು ಮತ್ತು ಸರ್ವೇ ನಂಬರ್ ದಾಖಲಾಗದೇ ಇದ್ದರೆ ಅಂತಹ ರೈತರು ಜೂನ್ 25 ರ ಅಕ್ಷೇಪಣೆ ಸಲ್ಲಿಸಬೇಕು.
ರೈತರ ಸಂಪರ್ಕ ಕೇಂದ್ರದ ಸಿಬ್ಬಂದಿಯೂ ಬೆಳೆ ಸಮೀಕ್ಷೆ ಹಾಗೂ FRUITS (Farmer Registration & Unifi ed benefi – ciary information system) ಪೋರ್ಟ್ ಲ್‌ಗಳಲ್ಲಿ ಮಾಹಿತಿಯನ್ನು ಪರಿಶೀಲಿಸಿ ತಕ್ಷಣವೇ ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು ಎಂದರು. FRUITS ತಂತ್ರಾಂಶದಲ್ಲಿ ನೊಂದಣಿಯಾಗದಿರುವ ರೈತರು ತಮ್ಮ ಆಧಾರಸಂಖ್ಯೆ, ಬ್ಯಾಂಕ್ ಖಾತೆ, ಆರ್‌ಟಿಸಿ, ಜಮೀನಿನ ದಾಖಲೆಗಳು, ಮೊಬೈಲ್ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸದ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮೆಕ್ಕಜೋಳ ಬೆಳೆ ಹಾನಿಗೊಂಡ ರೈತರಿಗೆ ಈಗಾಗಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗಿದೆ. ಅಂತಹ ಪರಿಹಾರ ಪಡೆದ ರೈತರನ್ನು ಹೊರತುಪಡಿಸಿ ಅನುಮೋದನೆ ನೀಡಬೇಕು. ಜಂಟಿ ಖಾತೆದಾರರು ಇದ್ದರೆ ಆರ್ಥಿಕ ನೆರವು ಪಡೆಯುವ ಫಲಾನುಭವಿಯನ್ನು ಪರಿಶೀಲಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ 51,740 ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಕಲಘಟಗಿ ತಾಲೂಕಿನಲ್ಲಿ ಅತಿ ಹೆಚ್ಚು 26,398, ಅಣ್ಣಿಗೇರಿ ತಾಲೂಕಿನಲ್ಲಿ ಅತಿ ಕಡಿಮೆ 487 ರೈತರಿದ್ದಾರೆ. ಉಳಿದಂತೆ ಅಳ್ನಾವರ 1332, ಧಾರವಾಡ 9786, ಹುಬ್ಬಳ್ಳಿ 3777, ಹುಬ್ಬಳ್ಳಿ ನಗರ 515, ಕುಂದಗೋಳ 3264, ನವಲಗುಂದ 6181 ರೈತರಿದ್ದಾರೆ ಎಂದು ಕೃಷಿ ಇಲಾಖೆ ಅ ಧಿಕಾರಿಗಳು ಸಭೆಗೆ ತಿಳಿಸಿದರು.
ಜಿಪಂ ಸಿಇಒ ಡಾ|ಬಿ.ಸಿ.ಸತೀಶ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಕೃಷಿ ಉಪ ನಿರ್ದೇಶಕರಾದ ಸ್ಮಿತಾ .ಆರ್., ಮಂಜುನಾಥ ಅಂತರವಳ್ಳಿ, ತಹಶೀಲ್ದಾರ್‌ರಾದ ಸಂತೋಷ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವೀನ ಹುಲ್ಲೂರ, ಕೊಟ್ರೇಶ್, ಅಶೋಕ ಶಿಗ್ಗಾಂವಿ, ಜಿಲ್ಲಾ ಕಾರ್ಮಿಕ ಇಲಾಖ ಅಧಿಕಾರಿಗಳಾದ ಅಶೋಕ ಬಾಳಿಗಟ್ಟಿ, ಮಾರಿಕಾಂಬ, ಸಹಾಯಕ ಕೃಷಿ ನಿರ್ದೇಶಕರಾದ ಎನ್.ಎಫ್. ಕಟ್ಟೇಗೌಡ್ರ, ಎಸ್.ಕೆ. ಖಾನೂರೆ, ಸಿ.ಜಿ. ಮೇತ್ರಿ, ಅನಗೌಡರ್, ದಂಡಗಿ ಇದ್ದರು.