ಬೆಂಗಳೂರು: ರಾಜ್ಯದಲ್ಲಿ “ಲೋಕಲ್ ಫೈಟ್’ ಕಣ ರಂಗೇರುತ್ತಿದ್ದು, ಚುನಾವಣೆ ನಡೆಯಲಿರುವ 61 ನಗರ ಸ್ಥಳೀಯ ಸಂಸ್ಥೆಗಳ 1,326 ವಾರ್ಡ್‌ಗಳಿಗೆ 5,099 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, ಅಂತಿಮ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿದಿದ್ದಾರೆ ಎನ್ನುವುದು ಮಂಗಳವಾರ ಗೊತ್ತಾಗಲಿದೆ.
ಉಮೇದುವಾರಿಕೆ ಸಲ್ಲಿಸಲು ಮೇ 16 ಕೊನೆಯ ದಿನವಾಗಿತ್ತು. ಅದರಂತೆ 5,576 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮೇ 17ರಂದು ನಡೆದ ನಾಮಪತ್ರ ಪರಿಶೀಲನೆ ವೇಳೆ 270 ಅಭ್ಯರ್ಥಿಗಳ 476 ನಾಮಪತ್ರಗಳು ತಿರಸ್ಕೃತಗೊಂಡು 5,099 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆ.
ರಾಜ್ಯದ 22 ಜಿಲ್ಲೆಗಳ 8 ನಗರಸಭೆ, 32 ಪುರಸಭೆ, 21 ಪಟ್ಟಣ ಪಂಚಾಯಿತಿ ಸೇರಿ 61 ನಗರ ಸ್ಥಳೀಯ ಸಂಸ್ಥೆಗಳ 1,326 ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. 2019ರ ಮಾರ್ಚ್ ಹಾಗೂ ಜುಲೈ ತಿಂಗಳಲ್ಲಿ ಅವಧಿ ಪೂರ್ಣಗೊಳ್ಳಲಿರುವ 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಬಾಕಿ ಇರುವ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೇ 2ರಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು.
ನೆಲಮಂಗಲ ಪುರಸಭೆ ಹಾಗೂ ಸೊರಬ ಪಟ್ಟಣ ಪಂಚಾಯಿತಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಎರಡೂ ಕಡೆ ನಾಮಪತ್ರ ಸಲ್ಲಿಕೆಗೆ ಮೇ 21, ಕೊನೆಯ ದಿನವಾಗಿದೆ.