ಅಂತರಿಕ್ಷದಲ್ಲಿ ತೇಲಾಡುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್), ಗುರುವಾರ ಹೊಸ ಜೀವಿಯೊಂದು ಸೇರ್ಪಡೆಗೊಂಡಿದೆ. ಅದರ ಹೆಸರು “ಬ್ಲಾಬ್’! ಇದರ ವಿಶೇಷವೇನು ಗೊತ್ತೇ? ಇದು ಮನುಷ್ಯನಲ್ಲ, ಪ್ರಾಣಿಯೂ ಅಲ್ಲ; ಸಸ್ಯ ಅಲ್ಲ ಅಥವಾ ಶಿಲೀಂಧ್ರವೂ ಅಲ್ಲ… ಹಾಗಿದ್ದರೆ ಏನಿದು? ಏಕೆ ಇದನ್ನು ಐಎಸ್‌ಎಸ್‌ಗೆ ಕಳುಹಿಸಲಾಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ.
ಯಾವ ವರ್ಗಕ್ಕೂ ಸೇರದ್ದು! :
ನೋಡಲು ಹಳದಿ ಬಣ್ಣದ, ಸ್ಪಾಂಜಿನ ಗುಣಲಕ್ಷಣಗಳಿರುವ ಇದರ ವೈಜ್ಞಾನಿಕ ಹೆಸರು, ಫೈಝಾರಮ್ ಪಾಲಿಸೆಫಾಲಮ್ (ಕಜysಚruಞ ಟಟlycಛಿಟಜಚluಞ). ಸುಮಾರು 50 ಕೋಟಿ ವರ್ಷಗಳ ಹಿಂದೆ ಇದು ಭೂಮಿಯಲ್ಲಿ ಉಗಮವಾಗಿದೆ ಎಂದು ನಂಬಲಾಗಿದೆ. ಇದೊಂದು ಏಕಾಣು ಜೀವಿ. ಆದರೆ ಏಕಾಣು ಜೀವಿಗಳಲ್ಲಿರುವಂತೆ ಇದರಲ್ಲಿ ನ್ಯೂಕ್ಲಿಯಸ್ ಇರುವುದಿಲ್ಲ. ಇದನ್ನು ಈ ಹಿಂದೆ, ಶಿಲೀಂಧ್ರಗಳ ವರ್ಗಕ್ಕೆ ಸೇರಿಸಲಾಗಿತ್ತಾದರೂ, ಆನಂತರ ಅದರ ಜೈವಿಕ ವ್ಯತ್ಯಾಸಗಳಿಂದಾಗಿ ಅದನ್ನು ಆ ವರ್ಗದಿಂದ ಹೊರಗಿಡಲಾಯಿತು. ಅಂದಿನಿಂದ ಇಲ್ಲಿಯವರೆಗೂ ಅದು “ಅವರ್ಗೀಯ’ವಾಗಿಯೇ ಉಳಿದಿದೆ.
ಸೋಜಿಗಜೀವಿ “ಬ್ಲಾಬ್’ನ ವಿಚಿತ್ರ ಜೀವನ, ವಿಶೇಷಣ! :
ಸಾಮಾನ್ಯವಾಗಿ ಯಾವುದೇ ಜೀವಿಯಲ್ಲಿ ಗಂಡು- ಹೆಣ್ಣು ಎಂಬ ಪ್ರಭೇದವಿರುತ್ತದೆ. ಆದರೆ ಇದರಲ್ಲಿ 720 ಪ್ರಭೇದಗಳಿವೆ! ಇದಕ್ಕೆ ಬಾಯಿ, ಅಂಗಾಂಗಗಳು, ಮೆದುಳು ಇಲ್ಲ. ಆದರೆ ಇದು ಆಹಾರ ಸೇವಿಸುತ್ತದೆ, ಅತ್ಯಂತ ನಿಧಾನವಾಗಿ ಚಲಿಸುತ್ತದೆ. ಇನ್ನೊಂದು ವಿಶೇಷವೆಂದರೆ, ಸಾಮಾನ್ಯವಾಗಿ ಏಕಾಣು ಜೀವಿಗಳು ಜೀವಕೋಶಗಳ ವಿಭಜನೆಯಿಂದ ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ಬ್ಲಾಬ್‌ನಲ್ಲಿ ಈ ಪ್ರಕ್ರಿಯೆ ನಡೆಯದೇ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತದೆ.
ಐಎಸ್‌ಎಸ್‌ಗೆ ಕಳುಹಿಸಿದ್ದೇಕೆ? :
ಭೂಮಿಯ ಮೇಲಿನ ಯಾವುದೇ ಜೀವಿಗೆ ಇರದಂಥ ಸೋಜಿಗಗಳನ್ನು ಹೊಂದಿರುವ ಇದು ಗುರುತ್ವಾಕರ್ಷಣವಿಲ್ಲದ ಕಡೆ ಹೇಗೆ ಬೆಳೆಯಬಲ್ಲದು ಎಂಬ ಕುತೂಹಲ ವಿಜ್ಞಾನಿಗಳದ್ದು. ಹಾಗಾಗಿ, ಇದನ್ನು ಐಎಸ್‌ಎಸ್‌ಗೆ ಕಳುಹಿಸಲಾಗಿದೆ. ಅಲ್ಲಿ, ಖಗೋಳಯಾತ್ರಿಕರು ಇದನ್ನು ಆಳವಾಗಿ ಅಧ್ಯಯನ ಮಾಡಲಿದ್ದಾರೆ. ಇದೇ ಅಧ್ಯಯನವನ್ನು ಫ್ರಾನ್ಸ್‌ನ ಶಾಲಾ ವಿದ್ಯಾರ್ಥಿಗಳು
ಫ್ರಾನ್ಸ್‌ನಲ್ಲಿ ಕೈಗೊಳ್ಳಲಿದ್ದಾರೆ. ಎರಡೂ ಕಡೆಗಳಲ್ಲಿ ಈ ಜೀವಿಯ ಜೀವನ ಶೈಲಿಯಲ್ಲಿ ಕಾಣುವ ವ್ಯತ್ಯಾಸವನ್ನು ಗ್ರಹಿಸಲು ಉದ್ದೇಶಿಸಲಾಗಿದೆ.