Advertisement
ಕಪಿಲ್‌ದೇವ್ ಟೆಸ್ಟ್‌ನಲ್ಲಿ 434, ಏಕದಿನದಲ್ಲಿ 253 ವಿಕೆಟ್ ಕಿತ್ತ ಪರಾಕ್ರಮಿ. ಇದರಲ್ಲಿ ಸ್ಟಂಪಿಂಗ್ ಮೂಲಕ ಲಭಿಸಿದ್ದು ಒಂದು ವಿಕೆಟ್ ಮಾತ್ರ. ಇದು 1986ರ ಆಸ್ಟ್ರೇಲಿಯ ಎದುರಿನ ಹೈದರಾಬಾದ್ ಏಕದಿನ ಪಂದ್ಯದಲ್ಲಿ ಲಭಿಸಿತ್ತು. ಇವರ ಎಸೆತಕ್ಕೆ ಸ್ಟಂಪ್ಡ್ ಆದ ಆಟಗಾರ ಗ್ರೆಗ್ ರಿಚಿ. ಇವರನ್ನು ಸ್ಟಂಪೌಟ್ ಮಾಡಿದ ಕೀಪರ್ ಚಂದ್ರಕಾಂತ್ ಪಂಡಿತ್. ಸ್ವಾರಸ್ಯವೆಂದರೆ, ಇದನ್ನು ಕೆಲವು ಮಾಧ್ಯಮಗಳು ಕ್ಯಾಚ್ ಎಂದೇ ವರದಿ ಮಾಡಿದ್ದವು. ಆದರೆ ಆಗ ವೀಡಿಯೋ ದೃಶ್ಯಾವಳಿ ಇಲ್ಲದ ಕಾರಣ, ರಿಚಿ “ಬೀಟನ್’ ಆದುದನ್ನು ಹಾಗೂ ಕೀಪರ್ ಪಂಡಿತ್ ನಿಂತ ಭಂಗಿಯನ್ನು ಗಮನಿಸಿದ ಬಳಿಕ ಇದು ಸ್ಟಂಪಿಂಗ್ ಎಂಬುದು ಖಾತ್ರಿಯಾಗಿತ್ತು!
ಶ್ರೀಲಂಕಾದ ಎಡಗೈ ವೇಗದ ಬೌಲರ್ ಚಮಿಂಡ ವಾಸ್ ಸಾಹಸ ಎಲ್ಲರಿಗೂ ತಿಳಿದ ಸಂಗತಿ. ಇವರ 761 ವಿಕೆಟ್‌ಗಳಲ್ಲಿ ಸ್ಟಂಪಿಂಗ್ ಮೂಲಕ ಔಟಾದ ಏಕೈಕ ಆಟಗಾರನೆಂದರೆ ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ. ಸ್ಟಂಪಿಂಗ್ ಮಾಡಿದ ಹೆಗ್ಗಳಿಕೆ ಕುಮಾರ ಸಂಗಕ್ಕರ ಅವರದು.
ಅದು 2007ರ ವಿಶ್ವಕಪ್ ಟೂರ್ನಿಯ “ಸೂಪರ್ 8′ ಹಂತದ ಪಂದ್ಯವಾಗಿತ್ತು. ತೃತೀಯ ಅಂಪಾಯರ್ ಮೂಲಕ ಈ ತೀರ್ಪು ಬಂದಿತ್ತು. ಟಿಮ್ ಸೌಥಿ
ನ್ಯೂಜಿಲ್ಯಾಂಡಿನ ಟಿಮ್ ಸೌಥಿ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಬೌಲರ್. ಮೂರೂ ಮಾದರಿಗಳಲ್ಲಿ ಒಟ್ಟು 591 ವಿಕೆಟ್ ಹಾರಿಸಿದ್ದಾರೆ. ಆದರೆ ಸ್ಟಂಪ್ಡ್ ವಿಕೆಟ್ ಮಾತ್ರ ಒಂದೇ ಒಂದು. ಇದು ಒಲಿದದ್ದು 2011ರ ವಿಶ್ವಕಪ್‌ನಲ್ಲಿ. ಸ್ಟಂಪ್ಡ್ ಆದ ಆಟಗಾರ ಆಸೀಸ್ ಕಪ್ತಾನ ರಿಕಿ ಪಾಂಟಿಂಗ್. ಫ್ಲಿಕ್ ಶಾಟ್ ಬಾರಿಸಲು ವಿಫಲ ಪ್ರಯತ್ನ ಮಾಡಿದಾಗ ಕೀಪರ್ ಬ್ರೆಂಡನ್ ಮೆಕಲಮ್ ಮಿಂಚಿನ ವೇಗದಲ್ಲಿ ಬೇಲ್ಸ್ ಹಾರಿಸಿದ್ದರು. ಸ್ವಾರಸ್ಯವೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಂಟಿಂಗ್ ಸ್ಟಂಪ್ಡ್ ಆದದ್ದು ಇದೊಂದೇ ಸಲ!
Related Articles
ಆಸ್ಟ್ರೇಲಿಯದ ಸ್ಪೀಡ್‌ಸ್ಟಾರ್ ಗ್ಲೆನ್ ಮೆಕ್‌ಗ್ರಾತ್ ಅವರಿಗೂ ಸ್ಟಂಪಿಂಗ್ ಮೂಲಕ ಸಿಕ್ಕಿದ್ದು ಒಂದು ವಿಕೆಟ್ ಮಾತ್ರ. 2005ರ ನ್ಯೂಜಿಲ್ಯಾಂಡ್ ಪ್ರವಾಸದ ವೆಲ್ಲಿಂಗ್ಟನ್ ಏಕದಿನದಲ್ಲಿ ಕ್ರೆಗ್ ಮೆಕ್‌ಮಿಲನ್ ಆವರನ್ನು ಆ್ಯಡಂ ಗಿಲ್‌ಕ್ರಿಸ್ಟ್ ಸ್ಟಂಪ್ಡ್ ಮಾಡಿ ಮೆಕ್‌ಗ್ರಾತ್‌ಗೆ ಈ ವಿಕೆಟ್ ಲಭಿಸುವಂತೆ ಮಾಡಿದ್ದರು. ಅಂದಹಾಗೆ ಮೆಕ್‌ಗ್ರಾತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 949 ವಿಕೆಟ್ ಕಿತ್ತ ಸಾಹಸಿ!
Advertisement
ಶಾನ್ ಪೋಲಾಕ್ಹರಿಣಗಳ ನಾಡಿನ ವೇಗಿ ಶಾನ್ ಪೋಲಾಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 829 ವಿಕೆಟ್ ಉಡಾಯಿಸಿದ್ದಾರೆ. 2005ರ ವೆಸ್ಟ್ ಇಂಡೀಸ್ ಪ್ರವಾಸದ ಕಿಂಗ್‌ಸ್ಟನ್ ಟೆಸ್ಟ್‌ನಲ್ಲಿ ಇವರಿಗೆ ಏಕೈಕ ಸ್ಟಂಪ್ಡ್ ವಿಕೆಟ್ ಲಭಿಸಿತ್ತು. ವಿಂಡೀಸ್ ಬ್ಯಾಟ್ಸ್‌ಮನ್ ರಾಮ್‌ನರೇಶ್ ಸರವಣ್ ಅವರನ್ನು ಮಾರ್ಕ್ ಬೌಷರ್ ಸ್ಟಂಪ್ಡ್ ಬಲೆಗೆ ಬೀಳಿಸಿದ್ದರು.