ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಮುಂದಾಗಿರುವ ಉಗ್ರರು ನಿರಂತರ ದಾಳಿಗಳನ್ನು ನಡೆಸುತ್ತಾ ಭದ್ರತಾ ಪಡೆಗಳ ನಿದ್ದೆಗೆಡಿಸಿದ್ದು ಸೇನೆ ಹಠಕ್ಕೆ ಬಿದ್ದು ಭಾರೀ ಕಾರ್ಯಾಚರಣೆಗೆ ಮುಂದಾಗಿದೆ.
ಪಾಕಿಸ್ಥಾನದಿಂದ ಒಳ ನುಸುಳಿರುವ 50-55 ಉಗ್ರರ ಬೇಟೆಯಾಡಲು ಸೇನೆಯು ಸುಮಾರು 500 ಪ್ಯಾರಾ ವಿಶೇಷ ಪಡೆಗಳ ಕಮಾಂಡೋಗಳನ್ನು(Para Commandos) ಕಾರ್ಯಾಚರಣೆಗೆ ನಿಯೋಜಿಸಿದೆ ಎಂದು ರಕ್ಷಣಾ ಮೂಲಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿವೆ.
ಉಗ್ರರು ಇತ್ತೀಚಿನ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳನ್ನು ಹೊಂದಿದ್ದಾರೆ. ಉಗ್ರರ ಬೇಟೆಗೆ ಗುಪ್ತಚರ ಸಂಸ್ಥೆಗಳು ತಮ್ಮ ಕಾರ್ಯವನ್ನು ಬಲಪಡಿಸಿದ್ದು, ಉಗ್ರರನ್ನು ಬೆಂಬಲಿಸುವ ಭೂಗತ ಕೆಲಸಗಾರರು ಸೇರಿದಂತೆ ಮೂಲಸೌಕರ್ಯವನ್ನು ನೀಡುತ್ತಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿವೆ.
ಆಕ್ರಮಣವನ್ನು ಎದುರಿಸಲು ಸೇನೆಯು ಈಗಾಗಲೇ ಸುಮಾರು 3,500-4000 ಸಿಬಂದಿಯ ಒಂದು ಬ್ರಿಗೇಡ್ ಬಲವನ್ನು ಒಳಗೊಂಡ ಪಡೆಗಳನ್ನು ಜಮ್ಮು ಪ್ರದೇಶಕ್ಕೆ ಕರೆತಂದಿದೆ.
ಉಗ್ರ ದಾಳಿಗಳ ಕುರಿತು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸಿ” ಶತ್ರು ದೇಶದ ದಾಳಿಗಳನ್ನು ನಿಭಾಯಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಚರ್ಚಿಸಲಾಗದ ಕೆಲವು ತಂತ್ರಗಳನ್ನು ಮಾಡಲಾಗಿದೆ. ನಾವು ವಿಡಿಜಿಗಳನ್ನು (Village Defence Guards) ಪುನರುಜ್ಜೀವನಗೊಳಿಸಲು ಪ್ರಸ್ತಾಪಿಸಿದ್ದೇವೆ.ಸರ್ಕಾರವೂ ಒಪ್ಪಿಕೊಂಡಿದೆ. ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳನ್ನು ಆಧುನೀಕರಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಗ್ರ ದಾಳಿಗಳ ಘಟನೆಗಳ ಬಗ್ಗೆ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅದನ್ನು ಸ್ವತಃ ಪ್ರಧಾನಿಯೇ ಪರಿಶೀಲಿಸುತ್ತಿದ್ದಾರೆ. ನಮ್ಮ ಸೇನೆ ಮತ್ತು ಸೇನಾ ಪಡೆಗಳು ಕೆಲವು ಹೊಸ ತಂತ್ರಗಳನ್ನು ರೂಪಿಸಿವೆ” ಎಂದು ತಿಳಿಸಿದ್ದಾರೆ.