ಸುಮಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮತ್ತಷ್ಟು ಭೀಕರತೆ ಪಡೆಯುತ್ತಿದೆ. ಉಕ್ರೇನ್ ನಾಗರಿಕ ಪ್ರದೇಶಗಳ ಮೇಳೆ ರಷ್ಯಾ ದಾಳಿ ನಡೆಸುತ್ತಿದ್ದು, ಸುಮಿ ನಗರದ ವಸತಿ ಸಮುಚ್ಛಯದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ,
ಉಕ್ರೇನ್ ನ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದೆ. ಘಟನೆಯಲ್ಲಿ ಇಬ್ಬರು ಮಕ್ಕಳೂ ಅಸುನೀಗಿದ್ದಾರೆ ಎಂದಿದೆ.
“ರಷ್ಯಾದ ಯುದ್ಧ ಪೈಲಟ್ ಗಳು ಕಳೆದ ರಾತ್ರಿ ಮತ್ತೊಂದು ಅಪರಾಧ ಕೃತ್ಯ ನಡೆಸಿದ್ದಾರೆ. ಅವರು ಸುಮಾರು 500 ಕೆಜಿ ತೂಕದ ಬಾಂಬನ್ನು ಸುಮಿ ನಗರದ ವಸತಿ ಕಟ್ಟಡದ ಮೇಲೆ ಹಾಕಿದ್ದಾರೆ. ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ” ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಸ್ಫೋಟಗೊಳ್ಳದ ಬಾಂಬ್!: ಇದರ ನಡುವೆಯೇ, ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಚೆರ್ನಿಹಿವ್ ನಲ್ಲಿ ವಸತಿ ಕಟ್ಟಡವೊಂದರ ಮೇಲೆ ರಷ್ಯಾ ಪಡೆಗಳು ಬರೋಬ್ಬರಿ 500 ಕೆಜಿ ತೂಕದ ಬಾಂಬ್ ವೊಂದನ್ನು ಹಾಕಿದೆ. ಆದರೆ ಅದೃಷ್ಟವಶಾತ್ ಆ ಬಾಂಬು ಸ್ಫೋಟಗೊಂಡಿಲ್ಲ.
ಇದನ್ನೂ ಓದಿ:ರಷ್ಯಾ ಯುದ್ಧದ ಪರಿಣಾಮ; ಷೇರುಪೇಟೆ ಸೆನ್ಸೆಕ್ಸ್ ಇಳಿಕೆ, ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ
ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಉಕ್ರೇನ್ ವಿದೇಶಾಂಗ ಸಚಿವ ಕುಲೇಬಾ, “ಅದೃಷ್ಟಕ್ಕೆ ಈ 500 ಕೆಜಿಯ ಬಾಂಬ್ ಸ್ಫೋಟಗೊಳ್ಳದೇ ಉಳಿಯಿತು. ಆದರೆ, ಇನ್ನು ಎಷ್ಟೋ ಬಾಂಬುಗಳು ಸ್ಫೋಟಗೊಂಡು, ಮಕ್ಕಳು, ಮಹಿಳೆಯರು ಸೇರಿ ಹಲವು ಅಮಾಯಕರನ್ನು ಬಲಿಪಡೆದು ಕೊಂಡಿವೆ’ ಎಂದು ಬರೆದಿದ್ದಾರೆ.
ಜತೆಗೆ ರಷ್ಯಾದ ಈ ಬೀಭತ್ಸ ಆಕ್ರಮಣದಿಂದ ನಮ್ಮ ಜನರನ್ನು ರಕ್ಷಿಸಲು ಜಗತ್ತು ನಮಗೆ ಸಹಾಯ ಮಾಡಬೇಕು. ನಮ್ಮ ಗಗನವನ್ನು ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲು ನೆರವಾಗಬೇಕು, ನಮಗೆ ಸಮರ ವಿಮಾನ ಗಳನ್ನು ರವಾನಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.