Advertisement

ಹೇಮೆ ಕಾಲುವೆ ಆಧುನೀಕರಣಕ್ಕೆ 500 ಕೋಟಿ ಬಿಡುಗಡೆ

09:13 PM Feb 26, 2020 | Team Udayavani |

ತುರುವೇಕೆರೆ: ಕ್ಷೇತ್ರ ವ್ಯಾಪ್ತಿಯ ಹೇಮಾವತಿ ನಾಲಾ ಆಧುನೀಕರಣಕ್ಕೆ ಸರ್ಕಾರ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಮಸಾಲಾ ಜಯರಾಮ್‌ ಹೇಳಿದರು.

Advertisement

ಅನುದಾನ ತಂದಿದ್ದ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ತಾಲೂಕಿನ ಮೂಲಕ ಹಾದು ಹೋಗುವ 70 ಕಿ.ಮೀ.ನಿಂದ 166 ಕಿ.ಮೀ.ವರೆಗೆ ನಾಲೆ ಆಧುನೀಕರಣವಾಗಲಿದೆ. ಇದು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಯಾಗಿದ್ದು, ಪೂರ್ಣವಾದ ನಂತರ ರೈತರು ನೀರಿಗೆ ಹಾಹಾಕಾರ ಪಡಬೇಕಿಲ್ಲ ಎಂದು ಅಭಯ ನೀಡಿದರು.

800 ಕ್ಯೂಸೆಕ್‌ ನೀರು ಹರಿಯುವ ಪ್ರಮಾಣ ಇತ್ತಾದರೂ ಕಾಲುವೆಗಳಲ್ಲಿ ಗಿಡಗಂಟಿಗಳು ಮತ್ತು ಹೂಳು ತುಂಬಿದ್ದರಿಂದ ಕಡಿಮೆ ನೀರು ಹರಿಯುತಿತ್ತು. ಕಾಮಗಾರಿ ಮುಗಿದ ನಂತರ ಸರಿ ಸುಮಾರು 2500 ಕ್ಯೂಸೆಕ್‌ ನೀರು ಹರಿಯಲಿದೆ. ಏ.2ರಿಂದ ಮತ್ತೆ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ. 1 ತಿಂಗಳು ಹರಿಯಲಿದ್ದು, ಆ ಸಂದರ್ಭ ನಾಲಾ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದರು.

ಶೀಘ್ರ ಪೂಜೆ: ನಾಲಾ ಆಧುನೀಕರಣ ಕಾಮಗಾರಿಗೆ ಶೀಘ್ರ ಪೂಜೆ ನೆರವೇರಿಸಲಾಗುವುದು. ಹೇಮಾವತಿ ನದಿಯಲ್ಲಿ 18.5 ಟಿಎಂಸಿ ನೀರು ಇದ್ದು, ಜಿಲ್ಲೆಗೆ ಇನ್ನೂ 8.5 ಟಿಎಂಸಿ ಹರಿಯಲಿದೆ. ಎತ್ತಿನಹೊಳೆ ಯೋಜನೆಯು ತಾಲೂಕಿನ ಮೂಲಕ ಹಾದು ಹೋಗಲಿದೆ. ಇದಕ್ಕಾಗಿ ತಾಲೂಕಿನ ಸುಮಾರು 52 ಎಕರೆ ಜಮೀನು ಬಳಕೆಯಾಗಿದೆ. ಜಮೀನು ನೀಡಿರುವ ರೈತರಿಗೆ ಪರಿಹಾರ ಧನ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.

ಅಲ್ಲದೇ ತಾಲೂಕಿಗೆ ಒಂದು ಟಿಎಂಸಿ ನೀರೂ ಹರಿಯಲಿದೆ ಎಂದು ಹೇಳಿದರು. ಹಲವಾರು ವರ್ಷಗಳಿಂದ ಹೇಮಾವತಿ ನಾಲೆಗಳಲ್ಲಿ ನೀರು ಹರಿಯದಿರುವ ಕಾರಣಕ್ಕೆ ತಾಲೂಕಿನ ಡಿ 8 ಮತ್ತು ಡಿ 10 ನಾಲೆಗಳಲ್ಲಿ ಹೂಳು ತುಂಬಿದ್ದು, ತೆಗೆಯುವ ಸಲುವಾಗಿ ಸುಮಾರು 600 ಕೋಟಿ ರೂ. ಸರ್ಕಾರ ಕಾವೇರಿ ನೀರಾವರಿ ನಿಗಮದ ಮೂಲಕ ಬಿಡುಗಡೆ ಮಾಡಲು ಸಿದ್ಧವಿದೆ ಎಂದರು.

Advertisement

ಜಿಲ್ಲೆಯ ಹಾಗೂ ಕ್ಷೇತ್ರಕ್ಕೆ ಅಗತ್ಯವಿರುವ ನೀರು ಹರಿದಲ್ಲಿ ರೈತರ ನೀರಿನ ಹಾಹಾಕಾರ ಶೇ.99ರಷ್ಟು ಇಲ್ಲದಂತಾಗುತ್ತದೆ. ಯೋಜನೆಗೆ ಕಾರ್ಯಗತಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಬೇಕು ಎಂದು ಹೇಳಿದರು. ತಾಲೂಕು ಬಿಜೆಪಿ ವಕ್ತಾರ ವಕೀಲ ಮುದ್ದೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ದುಂಡರೇಣುಕಯ್ಯ, ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್‌, ಮಾಚೇನಹಳ್ಳಿ ವಿಶ್ವನಾಥ್‌, ಜಯಶೀಲಾ, ಸಾಗರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next