Advertisement

18 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೆ ವರ್ಲಿಯಲ್ಲಿ 500 ಹಾಸಿಗೆಗಳ ಸಿದ್ಧತೆ: ಬಿಎಂಸಿ

09:47 AM May 11, 2021 | Team Udayavani |

ಮುಂಬಯಿ:  3ನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗಬಹುದು ಎಂದು ತಜ್ಞರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ 500 ಹಾಸಿಗೆಗಳ ಪ್ರತ್ಯೇಕ ಜಂಬೋ ಕೋವಿಡ್‌ ಮತ್ತು 6,000 ಹಾಸಿಗೆಗಳನ್ನು ಹೊಂದಿರುವ ಮೂರು ಪ್ರತ್ಯೇಕ ಜಂಬೋ ಕೋವಿಡ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್‌ ಚಾಹಲ್‌ ಅವರು ಹೇಳಿದ್ದಾರೆ.

Advertisement

ಮಕ್ಕಳ ವೈದ್ಯರ ಕಾರ್ಯಪಡೆ ರಚನೆ :

ನಿಗಮವು ತನ್ನ 20,000 ಹಾಸಿಗೆಗಳ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇನ್ನು ಮುಂದೆ ಆಮ್ಲಜನಕಕ್ಕಾಗಿ ರಾಜ್ಯ ಕೇಂದ್ರ ಸರಕಾರವನ್ನು ಅವಲಂಬಿಸಬೇಕಾಗಿಲ್ಲ. ಮೂರನೇ ಅಲೆಯಿಂದ  ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತದೆ ಎಂದು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರೊಂದಿಗೆ ಸಭೆ ನಡೆಸಲಾಗಿದ್ದು, ಮಕ್ಕಳ ಚಿಕಿತ್ಸೆಗಾಗಿ ಮಾರ್ಗ ಸೂಚಿಗಳನ್ನು ನಿರ್ಧರಿಸಲು  ಮಕ್ಕಳ ವೈದ್ಯರ ಕಾರ್ಯಪಡೆ ರಚಿಸಲಾಗಿದೆ ಎಂದು ಆಯುಕ್ತ ಚಾಹಲ್‌ ಹೇಳಿದ್ದಾರೆ.

ಶೇ. 70ರಷ್ಟು  ಆಮ್ಲಜನಕ ಹಾಸಿಗೆಗಳು :

ಪುರಸಭೆಯ ಮೂಲಕ ಮುಂಬಯಿಯ ವರ್ಲಿ ಯಲ್ಲಿ 500 ಹಾಸಿಗೆಗಳ ಜಂಬೋ ಕೋವಿಡ್‌ ಕೇಂದ್ರವನ್ನು ಸ್ಥಾಪಿಸಲಾಗುವುದು. ಒಂದರಿಂದ 18 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಮಕ್ಕಳ ಜತೆ ತಾಯಿಯೂ ಉಳಿಯುವುದು ಅಗತ್ಯವಾಗಿರುತ್ತದೆ. ಈ ಪೈಕಿ  ಶೇ. 70ರಷ್ಟು ಆಮ್ಲಜನಕ ಹಾಸಿಗೆಗಳು ಮತ್ತು 200  ತೀವ್ರ ನಿಗಾ ಘಟಕದಲ್ಲಿ ಹಾಸಿಗೆಗಳನ್ನು ನಿರ್ಮಿಸಲಾಗು ವುದು ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

ಮೂರು ಜಂಬೋ ಕೋವಿಡ್‌  ಆಸ್ಪತ್ರೆಗಳ ನಿರ್ಮಾಣ:

ಮಕ್ಕಳ ಜಂಬೋ ಕೋವಿಡ್‌ ಕೇಂದ್ರವನ್ನು ಮೇ 31ರ ಮೊದಲು ಸ್ಥಾಪಿಸಲಾಗುವುದು. ಇದಲ್ಲದೆ ತಲಾ 2,000 ಹಾಸಿಗೆಗಳ ಸಾಮರ್ಥ್ಯದ ಮೂರು ಜಂಬೋ ಕೋವಿಡ್‌ ಆಸ್ಪತ್ರೆಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ಮಲಾಡ್‌, ಸಯಾನ್‌ನ ಸೋಮಯ್ಯ ವೈದ್ಯಕೀಯ ಕೇಂದ್ರ ಮತ್ತು ಕಾಂಜುಮಾರ್ಗದ ಕ್ರಾಂಪ್ಟನ್‌ ಕಂಪೆನಿಯಲ್ಲಿ ಹೊಸ ಜಂಬೋ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.

ಈಗಿರುವ ಎಲ್ಲ ನಾಲ್ಕು ಜಂಬೋ ಕೋವಿಡ್‌ ಆಸ್ಪತ್ರೆಗಳನ್ನು ಅಗತ್ಯವಿರುವಂತೆ ವಿಸ್ತರಿಸಲು ಯೋಜಿಸಲಾಗಿದೆ. ಇವುಗಳಿಂದ ಒಟ್ಟು 6,000 ಹಾಸಿಗೆಗಳನ್ನು ಪಡೆಯಬಹುದು ಎಂದು ಆಯುಕ್ತ ಚಾಹಲ್‌ ಹೇಳಿದರು.

30,000ಕ್ಕೂ ಹೆಚ್ಚು ಹಾಸಿಗೆಗಳು ಮೇ ತಿಂಗಳ ಅಂತ್ಯ ಮತ್ತು ಜೂನ್‌ ತಿಂಗಳ :

ಮಧ್ಯದ ವೇಳೆಗೆ ಜಂಬೋ ಕೋವಿಡ್‌ ಆಸ್ಪತ್ರೆಗಳಲ್ಲಿ ಆರೂವರೆ ಸಾವಿರ ಹೆಚ್ಚುವರಿ ಹಾಸಿಗೆಗಳನ್ನು ಸ್ಥಾಪಿಸ ಲಾಗುವುದು ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪುರಸಭೆಯ ಡ್ಯಾಶ್‌ಬೋರ್ಡ್‌ ನಲ್ಲಿ ರುವ 22,000 ಹಾಸಿಗೆಗಳು ಶೀಘ್ರದಲ್ಲೇ 30,000ಕ್ಕೂ ಹೆಚ್ಚು ಹಾಸಿಗೆಗಳಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

2 ದಿನಗಳಲ್ಲಿ 50 ಕೋಟಿ ರೂ. ಗಳ ನೆರವು :

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಬಯಿ ಮಹಾನಗರ ಪಾಲಿಕೆಗೆ ಸಹಾಯ ಮಾಡಲು ಅನೇಕ ಕಂಪೆನಿಗಳು ಮತ್ತು ಉದ್ಯಮ ಗುಂಪುಗಳು ಮುಂದೆ ಬಂದಿವೆ. ಕೊರೊನಾದ ಮೊದಲ ಅಲೆಯಲ್ಲಿ ಮುಂಬಯಿ ಮಹಾನಗರ ಪಾಲಿಕೆ ಸಿಎಸ್‌ಆರ್‌ನಿಂದ 5 ಕೋ. ರೂ. ಗಳನ್ನು ಪಡೆಯಲಾಗಿದೆ. ವಿವಿಧ ಕಂಪೆನಿಗಳಿಂದ ಕಳೆದ ಎರಡು ದಿನಗಳಲ್ಲಿ 50 ಕೋಟಿ ರೂ. ಗಳನ್ನು ಸ್ವೀಕರಿಸಲಾಗಿದ್ದು, ಮೂರು ದೊಡ್ಡ ಕೈಗಾರಿಕೆಗಳು ಶೀಘ್ರದಲ್ಲೇ ತಮ್ಮ ಸಹಾಯವನ್ನು ಪ್ರಕಟಿಸಲಿವೆ ಎಂದು ಚಾಹಲ್‌ ಹೇಳಿದ್ದಾರೆ.

ವಿವಿಧೆಡೆಗಳಿಂದ ನೆರವು :

35 ಕೋಟಿ ರೂ.ಗಳನ್ನು ಎಚ್‌ಡಿಎಫ್‌ಸಿ ಘೋಷಿಸಿದೆ, ಇದರಲ್ಲಿ ಆಕ್ಸಿಜನ್‌ ಪ್ಲಾಂಟ್‌ ಮತ್ತು ವರ್ಲಿಯ ಜಂಬೋ ಕೋವಿಡ್‌ ಆಸ್ಪತ್ರೆ ಇರಲಿದೆ. ಇದಲ್ಲದೆ ಡಿಸ್ನಿ ಮತ್ತು ಸ್ಟಾರ್‌  ಚಾನೆಲ್‌ನ ಮಾಧವನ್‌ ಅವರು 90 ವೆಂಟಿಲೇಟರ್‌ಗಳನ್ನು ನೀಡಿದ್ದಾರೆ. ಹಿರಿಯ ನಟ ಅಮಿತಾಬ್‌ ಬಚ್ಚನ್‌ 1 ಕೋಟಿ ರೂ.ಗಳ ಚೆಕ್‌ ಹಸ್ತಾಂತರಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟು 11 ಜಂಬೋ ಕೋವಿಡ್‌ ಆಸ್ಪತ್ರೆಗಳು ನಿರ್ಮಾಣ ವಾಗಲಿವೆ. ಆಸ್ಪತ್ರೆಯಲ್ಲಿ ಸುಮಾರು 20,000 ಹಾಸಿಗೆಗಳು ಇರಲಿದ್ದು, ಈ ಎಲ್ಲ ಆಸ್ಪತ್ರೆಗಳು ಆಮ್ಲಜನಕದಲ್ಲಿ ಶೇ. 100ರಷ್ಟು ಲಭಿಸಲಿದೆ ಎಂದು ಆಯುಕ್ತ ಚಾಹಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next