ದಾವಣಗೆರೆ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು ಐವತ್ತು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನ. 1 ರಿಂದ ಒಂದು ವರ್ಷ ವಿವಿಧ, ವೈವಿಧ್ಯಮಯ ಕಾರ್ಯಕ್ರಮ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರಾಯಿತು ಕನ್ನಡ.. ಉಸಿರಾಗಲಿ ಕನ್ನಡ… ಎಂಬ ಘೋಷವಾಕ್ಯದೊಂದಿಗೆ ವರ್ಷವಿಡೀ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೈಸೂರು ರಾಜ್ಯಕ್ಕೆ ದೇವರಾಜ ಅರಸು ಅವರು ಕರ್ನಾಟಕ ಎಂದು ಹೆಸರಿಟ್ಟು ಐವತ್ತು ವರ್ಷ ತುಂಬಿರುವ ಸಂದರ್ಭದ ಲ್ಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಹಿಂದುಳಿದ, ದಲಿತ ಸಮುದಾಯದ ಅಭಿವೃದ್ಧಿಯ ಚಿಂತನೆ ಮಾಡುವಂತಹವರು ಎಂದರು.
ಬೆಳಗಾವಿಯಲ್ಲಿ ಆ. 22 ರಂದು ಬೆಳಗಾವಿ ವಿಭಾಗ ಮಟ್ಟದ ಸಭೆ ನಡೆಸಲಾಗುವುದು.ನಾಲ್ಕೂ ಕಂದಾಯ ವಿಭಾಗದಲ್ಲಿ ಹಿರಿಯ ಸಾಹಿತಿಗಳು ಒಳಗೊಂಡಂತೆ ಎಲ್ಲರ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಿಗದಿಯಾಗಿತ್ತು ಎಂಬುದರ ಮಾಹಿತಿ ಇದೆ. ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.