ಕಳೆದ 70ರ ದಶಕ ಭಾರತೀಯ ಕ್ರಿಕೆಟಿನ “ಸುವರ್ಣ ಯುಗ’ವಾಗಿ ದಾಖಲಾಗಿದೆ. ಸುನೀಲ್ ಗಾವಸ್ಕರ್ ಎಂಬ ಅಸಾಮಾನ್ಯ ಬ್ಯಾಟ್ಸ್‌ಮನ್ ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ದಶಕವದು. ದಾಖಲೆಗಳ ಮೇಲೆ ದಾಖಲೆ ಪೇರಿಸುತ್ತ, ಅದೆಷ್ಟೋ ವಿಶ್ವದಾಖಲೆಗಳನ್ನು ಪೋಣಿಸುತ್ತ ಜಾಗತಿಕ ಕ್ರಿಕೆಟಿನ ಸಾರ್ವಭೌಮನಾಗಿ ಮೆರೆದ ಹೆಗ್ಗಳಿಕೆ ಈ “ಲಿಟ್ಲ ಮಾಸ್ಟರ್’ನದ್ದು. ಗಾವಸ್ಕರ್ ಸಾಧನೆಯಿಂದ ಭಾರತದ ಕ್ರಿಕೆಟ್ ಕೂಡ ಶ್ರೀಮಂತಗೊಂಡಿತು. ಇವರ ವರ್ಣರಂಜಿತ ಟೆಸ್ಟ್ ಬದುಕಿಗೆ ಶನಿವಾರ 50 ವರ್ಷ ತುಂಬಲಿದೆ. 1971ರ ಮಾರ್ಚ್ 6ರಂದು ಇವರ ಕ್ರಿಕೆಟ್ ರಂಗಪ್ರವೇಶವಾಗಿತ್ತು.
ವಿಂಡೀಸ್ ದೈತ್ಯರೇ ಗಢಗಢ!
ಆ ಕಾಲದಲ್ಲಿ ವೆಸ್ಟ್ ಇಂಡೀಸ್ ದೈತ್ಯ ತಂಡ. ಬ್ಯಾಟ್ಸ್ ಮನ್‌ಗಳ ದೇಹವನ್ನೇ ಗುರಿಯಾಗಿಸಿ ಚೆಂಡನ್ನೆಸೆಯುವ ಘಾತಕ ವೇಗಿಗಳಿಂದ ವಿಂಡೀಸ್ ಅತ್ಯಂತ ಅಪಾಯಕಾರಿಯಾಗಿ ಬೆಳೆದು ನಿಂತಿತ್ತು. ಈ ಕ್ರಿಕೆಟ್ ದೈತ್ಯರ ನಾಡಿಗೆ 1971ರಲ್ಲಿ ಭಾರತ ಪ್ರವಾಸ ಹೊರಟಾಗ “ವಾಮನಮೂರ್ತಿ’ ಸುನೀಲ್ ಮನೋಹರ್ ಗಾವಸ್ಕರ್ ಕೂಡ ಆಯ್ಕೆಯಾಗಿದ್ದರು. ಆಗ ಅಜಿತ್ ವಾಡೇಕರ್ ಸಾರಥ್ಯದ ಭಾರತ ಅಲ್ಲಿ ಸರಣಿ ಗೆಲ್ಲಲಿದೆ, ಗಾವಸ್ಕರ್ ರನ್ ಪ್ರವಾಹ ಹರಿಸಲಿದ್ದಾರೆ ಎಂಬುದೆಲ್ಲ ಊಹಿಸಲೂ ಆಗದ ಸಂಗತಿಗಳಾಗಿದ್ದವು.
4 ಪಂದ್ಯಗಳಿಂದ 774 ರನ್!
ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾವಸ್ಕರ್ ಆಡುವ ಬಳಗದಲ್ಲಿರಲಿಲ್ಲ. ಪೋರ್ಟ್ ಆಫ್ ಸ್ಪೇನ್‌ನ 2ನೇ ಪಂದ್ಯ ದಲ್ಲಿ ಟೆಸ್ಟ್‌ಕ್ಯಾಪ್ ಧರಿಸಿದರು. ಅಲ್ಲಿಗೆ ಅದೃಷ್ಟವೊಂದು ಭಾರತ ತಂಡಕ್ಕೆ ಒಲಿದು ಬಂತು. ಅಶೋಕ್ ಮಂಕಡ್ ಜತೆ ಇನ್ನಿಂಗ್ಸ್ ಆರಂಭಿಸಿದ ಗಾವಸ್ಕರ್ 65 ಮತ್ತು ಅಜೇಯ 67 ರನ್ ಬಾರಿಸಿ ಪರಾಕ್ರಮ ತೋರಲಾರಂಭಿಸಿದರು. ಭಾರತ ಈ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದಿತು. ಇದು ಕೆರಿಬಿಯನ್ ನಾಡಿನಲ್ಲಿ ಭಾರತಕ್ಕೆ ಒಲಿದ ಮೊದಲ ಜಯ. ಮುಂದೆ 5 ಪಂದ್ಯಗಳ ಸರಣಿ ಕೂಡ 1-0 ಅಂತರದಿಂದ ಭಾರತದ ವಶವಾಯಿತು. ವಿಂಡೀಸ್ ನೆಲದಲ್ಲಿ ಭಾರತ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿತ್ತು.
ಈ ಯಶಸ್ಸಿಗೆಲ್ಲ ಕಾರಣ ಸುನೀಲ್ ಗಾವಸ್ಕರ್. ಆಡಿದ 4 ಟೆಸ್ಟ್‌ಗಳಲ್ಲಿ 3 ಶತಕ, ಒಂದು ದ್ವಿಶತಕ ಸಹಿತ 774 ರನ್ (ಸರಾಸರಿ 154.80) ಪೇರಿಸಿದ ಅಮೋಘ ಸಾಧನೆ ಈ ಮುಂಬೈಕರ್‌ನದ್ದಾಗಿತ್ತು. ಮುಂದಿನ 17 ವರ್ಷಗಳ ಕಾಲ ಅವರು ಜಾಗತಿಕ ಟೆಸ್ಟ್ ಕ್ರಿಕೆಟಿನ ಅನಭಿಷಕ್ತ ಸಾಮ್ರಾಟನಾಗಿ ಮೆರೆದರು.
Related Articles
ಆ ಕಾಲದಲ್ಲಿ ಯಾವುದೇ ಅಂಗರಕ್ಷಕ ಸಾಧನಗಳಿರಲಿ, ಹೆಲ್ಮೆಟ್ ಕೂಡ ಇರಲಿಲ್ಲ. ಹೋಲ್ಡರ್, ಗಾರ್ನರ್, ರಾಬಟ್ಸ್, ಮಾರ್ಷಲ್, ಹೋಲ್ಡಿಂಗ್ ಅವರಂಥ ವೇಗಿಗಳ ಎಸೆತಗಳನ್ನು ತಡೆದು ನಿಲ್ಲುವುದು ಸುಲಭದ ಮಾತಾಗಿರಲಿಲ್ಲ. ಕೇವಲ ದೊಡ್ಡ ಟೊಪ್ಪಿಯೊಂದನ್ನೇ ಧರಿಸಿದ ಗಾವಸ್ಕರ್ ಜಗತ್ತಿನ ಎಲ್ಲ ಬೌಲರ್‌ಗಳನ್ನು ಬೆಚ್ಚಿಬೀಳಿಸಿದ ಸಾಹಸಗಾಥೆ ಇಂದಿನ ಪೀಳಿಗೆಗೂ ರೋಮಾಂಚನ ಮೂಡಿ ಸುತ್ತದೆ. ನಾಯಕನಾಗಿ, ವೀಕ್ಷಕ ವಿವರಣಕಾರನಾಗಿ, ಕ್ರಿಕೆಟ್ ವಿಶ್ಲೇಷಕ ನಾಗಿಯೂ ಗಾವಸ್ಕರ್ ಬಹಳ ಎತ್ತರ ತಲುಪಿದ್ದಾರೆ.
ಪುಟಾಣಿ ಕಂದ ಅದಲು ಬದಲಾದಾಗ…!
ಗಾವಸ್ಕರ್ ಹುಟ್ಟಿನಿಂದಲೇ ಸುದ್ದಿಯಾದ ಕಥನ ಬಹಳ ಕುತೂಹಲಕರ. 1949ರ ಜುಲೈ 10ರಂದು ಮುಂಬಯಿಯ ಆಸ್ಪತ್ರೆಯಲ್ಲಿ ಗಾವಸ್ಕರ್ ಜನನವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರ ಕುಟುಂಬದವರು ಬಂದು ನೋಡುವಾಗ ಏನೋ ಅನುಮಾನ. ತಾಯಿಯ ಪಕ್ಕದಲ್ಲಿದ್ದ ಮಗು ತಮ್ಮದಲ್ಲ ಎಂಬ ಶಂಕೆ ಮೂಡಿತು. ಅದು ನಿಜವೂ ಆಯಿತು. ಹುಡುಕುವಾಗ ಪುಟಾಣಿ ಗಾವಸ್ಕರ್ ಮೀನುಗಾರ ತಾಯಿಯೊಬ್ಬರ ಪಕ್ಕ ಇದ್ದದ್ದು ಕಂಡುಬಂತು. ಮೈಮೇಲಿನ ಮಚ್ಚೆಯೊಂದರಿಂದ ಇದನ್ನು ಪತ್ತೆಹಚ್ಚಲಾಯಿತು. ದಾದಿ ಮಕ್ಕಳಿಗೆ ಸ್ನಾನ ಮಾಡಿಸಿ ತರುವಾಗ ಈ ಎಡವಟ್ಟು ಸಂಭವಿಸಿತ್ತು! ಅಕಸ್ಮಾತ್‌ಇದು ಅರಿಯದೇ ಹೋಗಿದ್ದರೆ?!
70ರ ದಶಕದ ಆರಂಭದಲ್ಲಿ ನಟನೆಗೆ ಅಮಿತಾಬ್, ಗಾಯನಕ್ಕೆ ಕಿಶೋರ್ ಕುಮಾರ್ ಖ್ಯಾತರಾಗಿದ್ದರು. ಇವರ ಶ್ರೇಣಿಯಲ್ಲಿ ನಾನೂ ಇದ್ದೇನೆ ಎಂದು ವಿನೀತನಾಗಿ ಭಾವಿಸುತ್ತೇನೆ.
– ಗಾವಸ್ಕರ್