Advertisement

ರಾಜಧಾನಿಗೆ 50 ಟೆಂಡರ್‌ ಶ್ಯೂರ್‌ರಸ್ತೆ

11:43 AM May 17, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಬಿಬಿಎಂಪಿ ನಗರದ ವಿವಿಧೆಡೆ ಅಭಿವೃದ್ಧಿಪಡಿಸಿರುವ ಆರು ಟೆಂಡರ್‌ಶ್ಯೂರ್‌ ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಚಾರಕ್ಕೆ ಮುಕ್ತಗೊಳಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, “ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ 700 ಕೋಟಿ ರೂ. ವೆಚ್ಚದಲ್ಲಿ 50 ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 12 ರಸ್ತೆಗಳ ಪೈಕಿ 9 ರಸ್ತೆಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ 3 ರಸ್ತೆಗಳನ್ನು ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,’ ಎಂದು ಹೇಳಿದರು.

ನಾಗರಿಕ ಸೇವಾ ಸಂಸ್ಥೆಗಳು ರಸ್ತೆಗಳನ್ನು ಅಗೆಯುವುದುನ್ನು ತಡೆಯುವ ಉದ್ದೇಶದಿಂದ ಟೆಂಡರ್‌ಶ್ಯೂರ್‌ ಯೋಜನೆ ಜಾರಿಗೊಳಿಸ­ಲಾಗಿದೆ. ಮೊದಲ ಹಂತದ 7 ಹಾಗೂ ಎರಡನೇ ಹಂತದ 5ರಲ್ಲಿ 2 ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ 50 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ನಡಿ ಅಭಿವೃದ್ಧಿ ಮಾಡಲಾಗುವುದು,’ ಎಂದರು.  

ಟೆಂಡರ್‌ಶ್ಯೂರ್‌ ನಿರ್ಮಿಸಬೇಕಾದ ಪ್ರಮುಖ ರಸ್ತೆ­ಗಳನ್ನು ಗುರುತಿಸಿ ಸರ್ಕಾರದಿಂದ ಮಂಜೂರಾತಿ ಪಡೆಯುವಂತೆ ಇದೇ ಸಂದರ್ಭದಲ್ಲಿ  ಅಧಿಕಾರಿಗಳಿಗೆ ಸೂಚನೆ ನೀಡಿದರು. ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ಸಂಚಾರಕ್ಕೆ ಸುಗಮಗೊಳಿಸಿದ ನಂತರ ನವೀಕರಣಗೊಂಡ ಬ್ರಿಗೇಡ್‌ ಜಂಕ್ಷನ್‌ “ದಿ ಗ್ರೇಟ್‌ ವಾರ್‌’ ಯುದ್ಧ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. 

ಪುರಭವನದ ವರೆಗೆ ವಿಸ್ತರಿಸಿ: ಇದಕ್ಕೂ ಮುನ್ನ ನೃಪತುಂಗ ರಸ್ತೆಯ ವೈಟ್‌ಟಾಪಿಂಗ್‌ ರಸ್ತೆಯನ್ನು ಕಂಡು ಸಂತಸಗೊಂಡ ಸಿಎಂ ಕೆ.ಆರ್‌.ವೃತ್ತದಿಂದ ಆರಂಭವಾಗುವ ಕಾಂಕ್ರಿಟ್‌ ರಸ್ತೆಯನ್ನು ಕಾರ್ಪೊರೇಷನ್‌ ವೃತ್ತದವರಿಗೆ ನಿರ್ಮಿಸಿರುವ ಬಗ್ಗೆ ಮಾಹಿತಿ ಪಡೆದರು. ಕಾಂಕ್ರಿಟ್‌ ರಸ್ತೆಯನ್ನು ಪುರಭವನದವರೆಗೆ ಮುಂದುವರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಅಮಾನತು ಮಾಡಿ: ರಸ್ತೆ ಪರಿಶೀಲನೆ ವೇಳೆಯೇ ಮೈಸೂರು ರಸ್ತೆಯಲ್ಲಿ ರಾಜಕಾಲುವೆ ಪೂರ್ಣಗೊಳಿಸದಿರುವ ಬಗ್ಗೆ ನೆನಪು ಮಾಡಿಕೊಂಡು ಮುಖ್ಯಮಂತ್ರಿಗಳು 6 ತಿಂಗಳೊಳಗೆ ಪೂಣಗೊಳಿಸುವಂತೆ ಸೂಚಿಸಿದ ನಂತರವೂ ಪೂರ್ಣಗೊಳಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಕೂಡಲೇ ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ನ್ನು ಅಮಾನತುಗೊಳಿಸಿ ಎಂದು ಗುಡುಗಿದರು.  ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಎಂ.ಕೃಷ್ಣಪ್ಪ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಆದರೆ, ಅದಕ್ಕೆ ಸಮಾಧಾನಗೊಳ್ಳದ  ಸಿಎಂ “”ಗುತ್ತಿಗೆ­ದಾರರು ವಿಳಂಬ ಮಾಡ್ತಿದ್ರೆ ಎಂಜಿನಿಯರ್‌ ಏನ್‌ ಮಾಡ್ತಿದಾನೆ. ರೀ… ಪ್ರಸಾದು ಕಾಮಗಾರಿ ಯಾಕೆ ವಿಳಂಬ ಆಯ್ತು ಅಂತ ತಿಳ್ಕೊಂಡು ನೀವು ನನಗೆ ಮಾಹಿತಿ ಕೊಡಬೇಕು” ಎಂದರು. ಸಚಿವರಾದ ಕೆ.ಜೆ.ಜಾರ್ಜ್‌, ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಆರ್‌. ರೋಷನ್‌ ಬೇಗ್‌, ಶಾಸಕ ಎನ್‌. ಎ.ಹ್ಯಾರೀಸ್‌, ಮೇಯರ್‌ ಜಿ.ಪದ್ಮಾವತಿ, ವಿಧಾನಪರಿಷತ್‌ ಸದಸ್ಯ ಗೋವಿಂದರಾಜು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆಯ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ಹಾಜರಿದ್ದರು. 

“ನಾನು ಸೈನಿಕರು, ರೈತರು, ಕಾರ್ಮಿಕರ ಪರ ‘
ಬ್ರಿಗೇಡ್‌ ರಸ್ತೆ ಜಂಕ್ಷನ್‌ ಬಳಿ ನವೀಕರಣಗೊಂಡ ಯುದ್ಧ ಸ್ಮಾರಕ ಉದ್ಘಾಟನೆ ಬಳಿಕ ಸಿಎಂ ತಮ್ಮ ಕುಂದು ಕೊರತೆಗಳನ್ನು ಆಲಿಸಲಿಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿದ್ದ ಕೆಲ ಸೈನಿಕರು ಕಾರ್ಯಕ್ರಮ ಬಹಿಷ್ಕರಿಸಿದರು.  ಇದರಿಂದ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಮೂಡಿತ್ತು. ಇದೇ ವೇಳೆ ಮಾತನಾಡಿದ ಸಿಎಂ ನಾನು ಸೈನಿಕರು, ರೈತರು ಮತ್ತು ಕಾರ್ಮಿಕರ ಪರವಾಗಿದ್ದೇನೆ ನಿಮ್ಮ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳಿಗೆ ಪರಿಹಾರ ಒದಗಿಸಲು ನಾನು ಸದಾ ಸಿದ್ಧವೆಂದು ಹೇಳಿದರು.  

ಅನಂತರ ಮಾತನಾಡಿದ ನಿವೃತ್ತ ಯೋಧ ಜಿ.ಬಿ.ಅತ್ರಿ, ದಕ್ಷಿಣ ಭಾರತ ಅತ್ಯಂತ ಪುರಾತನ ಯುದ್ಧ ಸ್ಮಾರಕವನ್ನು ನವೀಕರಣಗೊಳಿಸಿದ್ದು ಸ್ವಾಗತಾರ್ಹ. ಸ್ಮಾರಕವನ್ನು ನವದೆಹಲಿಯ ಅಮರ್‌ ಜವಾನ್‌ ಜ್ಯೋತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು. 

ಉದ್ಘಾಟನೆಗೊಂಡ ರಸ್ತೆ
ಮೊದಲ ಹಂತ
* ರೆಸಿಡೆನ್ಸಿ ರಸ್ತೆ
*  ರಿಚ್‌ಮಂಡ್‌ ರಸ್ತೆ
* ಕಮಿಷನರೇಟ್‌ ರಸ್ತೆ
* ಮ್ಯೂಸಿಯಂ ರಸ್ತೆ

ಎರಡನೇ ಹಂತ
* ನೃಪತುಂಗ ರಸ್ತೆ
* ಕೆ.ಜಿ.ರಸ್ತೆ

ಟೆಂಡರ್‌ ಆಹ್ವಾನ
* ಸುಬೇದಾರ್‌ ಛತ್ರ ರಸ್ತೆ
* ಗುಬ್ಬಿ ತೋಟದಪ್ಪ ರಸ್ತೆ
* ಧನ್ವಂತರಿ ರಸ್ತೆ , 
* ಹನುಮಂತಪ್ಪ ರಸ್ತೆ
* ಗಾಂಧಿನಗರ,ಮೆಜೆಸ್ಟಿಕ್‌ ಸುತ್ತಲಿನ ರಸ್ತೆಗಳು
* ಕೆ.ಆರ್‌.ಮಾರುಕಟ್ಟೆ ಸುತ್ತಲಿನ ರಸ್ತೆಗಳು 

ಡಿಪಿಆರ್‌ ಸಿದ್ಧ
* ಕಲಾಸಿಪಾಳ್ಯ ಸುತ್ತಲಿನ ರಸ್ತೆಗಳು
* ಬ್ರಿಗೇಡ್‌ ರಸ್ತೆ
* ಮಲ್ಲೇಶ್ವರ ಮಾರ್ಗೋಸ ರಸ್ತೆ
* ಪ್ಯಾಲೇಸ್‌ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next