Advertisement

ಡೀಮ್ಡ್ ವಿವಿಗಳಲ್ಲಿ ರಾಜ್ಯಕ್ಕೆ ಶೇ.50 ರಷ್ಟು ಮೀಸಲಾತಿ

11:51 AM Jul 15, 2018 | |

ಬೆಂಗಳೂರು: ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಡೀಮ್ಡ್ ವಿಶ್ವವಿದ್ಯಾಲಯಗಳ ಪಿಜಿ ಕೋರ್ಸ್‌ಗಳಲ್ಲಿ ಶೇ.50 ಹಾಗೂ ಯುಜಿ ಕೋಸ್‌ಗಳಲ್ಲಿ ಶೇ.25ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡು ವಂತೆ ಕಾನೂನು ಮುಂದಿನ ವರ್ಷದಿಂದ
ಜಾರಿಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾಲೇಜುಗಳಿವೆ. ಆದರೆ, ಅವುಗಳಲ್ಲಿನ ಸೀಟುಗಳು ಇತರೆ ರಾಜ್ಯದ ವಿದ್ಯಾರ್ಥಿಗಳ ಪಾಲಾಗುತ್ತಿದೆ. ಹೀಗಾಗಿ ತಜ್ಞರ ಜತೆಗೆ ಸಭೆ ನಡೆಸಿ ಡೀಮ್ಡ್ ವಿವಿಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಕುರಿತು ಕೇಂದ್ರದಿಂದ ಒಪ್ಪಿಗೆ ಪಡೆಯಲಾಗಿದೆ. ತಾಂತ್ರಿಕ ಕಾರಣಗಳಿಂದ ಈ ಕಾನೂನು ತಡವಾಗಿದ್ದು 2019-20ನೇ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಒಂದಿಷ್ಟು ಹೊಸ ಪ್ರಯೋಗ ಹಾಗೂ ಯೋಜನೆಗಳನ್ನು ತರುವ ಚಿಂತನೆ ನಡೆಸಿದ್ದೇನೆ. ಅವುಗಳಲ್ಲಿ ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳಿಗೆ 1 ವರ್ಷದ ಪ್ಯಾರಾ ಮೆಡಿಕಲ್‌ ಅಥವಾ ನರ್ಸಿಂಗ್‌ ತರಬೇತಿಯನ್ನು ಆರಂಭಿಸುವ ಯೋಜನೆ ಇದೆ ಎಂದು ಹೇಳಿದರು.

ವೈದ್ಯ ಶಿಕ್ಷಣ ಪೂರೈಸಿದವರು ಖಡ್ಡಾಯ ಒಂದು ವರ್ಷ ಗ್ರಾಮೀಣ ಸೇವೆ ಮಾಡುವ ನಿಯಮದಿಂದ ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ರೂಪಿಸಲು ಇತರೆ ರಾಜ್ಯಗಳಲ್ಲಿ ನಿಯಮ ಹಾಗೂ ಕಾನೂನು ಅಧ್ಯಯನ ನಡೆಸುತ್ತಿದ್ದೇವೆ ಎಂದು ಹೇಳಿದರು. 

ವೈದ್ಯಕೀಯ ಕ್ಷೇತ್ರದ ಕುರಿತು ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ತಮ್ಮ ವಿಚಾರಗಳನ್ನು ಸಲಹೆ ರೂಪದಲ್ಲಿ ನೀಡಬಹುದು. ಅದಕ್ಕಾಗಿ ಜು.15ರಿಂದ ಜಾಹೀರಾತು ಹೊರಡಿಸುತ್ತಿದ್ದು, ದೂರವಾಣಿ ಅಥವಾ ಪತ್ರದ ಮೂಲಕ ಸಾರ್ವಜನಿಕರು ತಮ್ಮ ಸೂಕ್ತ ಸಲಹೆಗಳನ್ನು ನೀಡಬಹುದು ಎಂದರು. 

Advertisement

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಡಾ. ಎಚ್‌.ಎನ್‌.ರವೀಂದ್ರ ಮಾತನಾಡಿ, ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು, ಸಾಕಷ್ಟು ಕುಟುಂಬಗಳಿಗೆ ಸರಿಯಾದ ರೀತಿಯಲ್ಲಿ ಆರೋಗ್ಯ ಕರ್ನಾಟಕ ಕಾರ್ಡ್‌ ವಿತಣೆಯಾಗಿಲ್ಲ. ಹಾಗಾಗಿ ಮುಂದಿನ ಒಂದು ವರ್ಷಗಳ ಕಾಲ ಯಶಸ್ವಿನಿ ಯೋಜನೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.  

ನಕಲಿ ವೈದ್ಯರ ಹಾವಳಿಗೆ ಸೂಕ್ತ ಕ್ರಮ ಯಶಸ್ವಿನಿ ಯೋಜನೆಯಡಿ ಸಾಕಷ್ಟು ಆಸ್ಪತ್ರೆಗಳಲ್ಲಿ ಸರ್ಕಾರದ ಹಣ  ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಂದಿಷ್ಟು ಯೋಜನೆಗಳನ್ನು ಒಗ್ಗೂಡಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ರೂಪಿಸಲಾಗಿದೆ. ಈ ಸಮಗ್ರ ಯೋಜನೆಯ ಕುರಿತು ಅನೇಕರಿಗೆ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳಿವೆ. ಅವುಗಳನ್ನು ಭಾರತೀಯ ವೈದ್ಯಕೀಯ ಸಂಘದ ಜತೆಗೆ ಪುನರ್‌ವಿಮರ್ಶೆ ಮಾಡಿ ಬಗೆಹರಿಸಿಕೊಳ್ಳಲಾಗುವುದು. ಇನ್ನು ರಾಜ್ಯದಲ್ಲಿನ ನಕಲಿ ವೈದ್ಯರ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next