ಪುಣೆ: ಸತತ 5 ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್‌ರೈಡರ್ ಗೆಲುವಿನ ಟ್ರ್ಯಾಕ್ ಹತ್ತಿದೆ. ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಮುರಿಯದ 4ನೇ ವಿಕೆಟಿಗೆ 66 ರನ್ ಬಾರಿಸಿ ಕೋಲ್ಕತಾಕ್ಕೆ ಸುಲಭ ಜಯ ತಂದಿತ್ತರು.
ಅಜೇಯ 42 ರನ್ (23 ಎಸೆತ, 6 ಬೌಂಡರಿ, 1 ಸಿಕ್ಸರ್) ಜತೆಗೆ ಫೀಲ್ಡಿಂಗ್‌ನಲ್ಲೂ ಅಮೋಘ ನಿರ್ವಹಣೆ ತೋರಿ 2 ಕ್ಯಾಚ್ ಪಡೆದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸ್ವಾರಸ್ಯವೆಂದರೆ, ಈ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡುವ ಬಗ್ಗೆ ರಿಂಕು ಸಿಂಗ್ ಅವರಿಗೆ ಮೊದಲೇ ತಿಳಿದಿತ್ತು ಎಂಬುದು. ಅವರು ತಮ್ಮ ಕೈ ಮೇಲೆ “50 ನಾಟೌಟ್’ ಎಂದು ಪಂದ್ಯಕ್ಕೂ ಮೊದಲೇ ಬರೆದುಕೊಂಡಿದ್ದೇ ಇದಕ್ಕೆ ಕಾರಣ!
ಪಂದ್ಯದ ಬಳಿಕ ಅವರು ಇದನ್ನು ಜತೆಗಾರ ನಿತೀಶ್ ರಾಣಾಗೆ ತೋರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ರಿಂಕು ಸಿಂಗ್ ಅವರಿಗೆ ಅರ್ಧ ಶತಕ ಬಾರಿಸುವ ಅವಕಾಶ ಸಿಗಲಿಲ್ಲವಾದರೂ ನಾಟೌಟ್ ಆಗಿ ಉಳಿಯುವಲ್ಲಿ ಯಶಸ್ವಿಯಾದರು.
ಹೀಗೆ ಬರೆದುಕೊಂಡ ಬಗ್ಗೆ ರಿಂಕು ಸಿಂಗ್ ಕಾರಣವನ್ನೂ ನೀಡಿದ್ದಾರೆ. “ಈ ಪಂದ್ಯದಲ್ಲಿ ನನಗೆ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿತ್ತು. ಕಳೆದ 5 ವರ್ಷಗಳಿಂದಲೂ ನಾನು ಇಂಥದೊಂದು ಅವಕಾಶಕ್ಕಾಗಿ ಕಾಯುತ್ತಲೇ ಇದ್ದೆ. ಇಂದು ಸಿಕ್ಕಿತು. ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡೆ’ ಎಂದರು.
ಉತ್ತರಪ್ರದೇಶದವರಾದ 24 ವರ್ಷದ ರಿಂಕು ಸಿಂಗ್ 2018ರಲ್ಲಿ ಆರ್‌ಸಿಬಿ ವಿರುದ್ಧ ಐಪಿಎಲ್ ಪದಾರ್ಪಣೆ ಮಾಡಿದ್ದರು. ಈವರೆಗೆ 13 ಪಂದ್ಯಗಳನ್ನಾಡಿದ್ದು, 177 ರನ್ ಗಳಿಸಿದ್ದಾರೆ. ರಾಜಸ್ಥಾನ್ ವಿರುದ್ಧ ಅಜೇಯ 42 ರನ್ ಹೊಡೆದದ್ದೇ ಇವರ ಅತ್ಯುತ್ತಮ ಪ್ರದರ್ಶನವಾಗಿದೆ.