ಟೆಹ್ರಾನ್: ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಹ್ಸಾ ಅಮಿನಿಯ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಭದ್ರತಾ ಪಡೆಗಳು ನಡೆಸಿದ ದಮನದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಓಸ್ಲೋ ಮೂಲದ ಇರಾನ್ ಮಾನವ ಹಕ್ಕುಗಳ ಎನ್ ಜಿಒ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಪತ್ತೆ: ಈ ಕಾರಣದಿಂದ ನಾಪತ್ತೆ
ವರದಿಯ ಪ್ರಕಾರ, ಪೊಲೀಸ್ ವಶದಲ್ಲಿದ್ದ 22 ವರ್ಷದ ಅಮಿನಿಯ ಸಾವನ್ನಪ್ಪಿದ ಬಳಿಕ ಇರಾನ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿರುವುದಾಗಿ ವರದಿ ವಿವರಿಸಿದೆ.
ಇರಾನ್ ನಲ್ಲಿ ಪ್ರತಿಭಟನೆ ತೀವ್ರಗೊಂಡ ಪರಿಣಾಮ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ. ಕಳೆದ ಒಂದು ವಾರದಿಂದ ಇರಾನ್ ನ 80 ನಗರಗಳಲ್ಲಿ ಮತ್ತು ಸ್ಥಳೀಯ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಶುಕ್ರವಾರ ಸಾವಿರಾರು ಮಂದಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇರಾನ್ ನಲ್ಲಿ ಹಿಜಾಬ್ ಪರ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆ ಕೂಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.