Advertisement

ಬಿಜೆಪಿಯಿಂದ 50 ಲಕ್ಷ ಹೊಸ ಸದಸ್ಯತ್ವದ ಗುರಿ

08:41 AM Jun 23, 2019 | Team Udayavani |

ಬೆಂಗಳೂರು: ರಾಜ್ಯಾದ್ಯಂತ 50 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ 44 ವಿಧಾನಸಭಾ ಕ್ಷೇತ್ರಗಳಲ್ಲೇ ಹೆಚ್ಚು ಗಮನ ಹರಿಸಲಿದ್ದೇವೆ. 8980808080 ಕರೆ ಮಾಡುವ ಮೂಲಕ ಬಿಜೆಪಿ ಸದಸ್ಯರಾಗಿ ಯಾರು ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಪರಿಶ್ರಮದಿಂದ 25 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ನಮ್ಮನ್ನು ಸಿಂಗಲ್‌ ಡಿಜಿಟ್‌ಗೆ ಇಳಿಸುತ್ತೇವೆ ಎಂದವರು ಒಂದೊಂದು ಸ್ಥಾನಕ್ಕೆ ಇಳಿದಿದ್ದಾರೆ ಎಂದು ಲೇವಡಿ ಮಾಡಿದರು.

171 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. 43 ವಿಧಾನಸಭಾ ಕ್ಷೇತ್ರದಲ್ಲಿ ನಾವು ನಿರೀಕ್ಷೆಯಂತೆ ಮತ ಪಡೆಯಲು ಸಾಧ್ಯವಾಗಿಲ್ಲ. ಹೊಸದಾಗಿ ಸದಸ್ಯತ್ವ ಮಾಡುವಾಗ ವಿಶೇಷವಾಗಿ 44 ವಿಧಾನಸಭಾ ಕ್ಷೇತ್ರದ ಕಡೆಗೆ ಹೆಚ್ಚು ಗಮನ ನೀಡುತ್ತೇವೆ. ಕಳೆದ ಬಾರಿ 80 ಲಕ್ಷ ನೊಂದಣಿ ಮಾಡಿದ್ದೇವೆ. ಈ ಬಾರಿ ಕನಿಷ್ಠ 50 ಲಕ್ಷ ನೋಂದಣಿ ಮಾಡಬೇಕು.

ಈ ಗುರಿ ಮುಟ್ಟುವುದು ಕಷ್ಟವಲ್ಲ. ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಮನೆಗೆ ಹೋದರೂ ನೂರಕ್ಕೆ 95ರಷ್ಟು ಜನ ಬಿಜೆಪಿ ಎಂದು ಸದಸ್ಯರಾಗುತ್ತಾರೆ. ರಾಜಕಾರಣದಲ್ಲಿ ಆಸಕ್ತಿ ಇರುವ ಯುವಕ, ಯುವತಿಯರು ಸಿಗುತ್ತಾರೆ. ಒಂದು ಡೈರಿಯಲ್ಲಿ ವಿಶೇಷ ಆಸಕ್ತಿ ಇರುವ ಕಾರ್ಯಕರ್ತರ ಪಟ್ಟಿ ಮಾಡಿಕೊಳ್ಳಬೇಕು.

Advertisement

ತಾಲೂಕು, ಜಿಲ್ಲಾಮಟ್ಟದಲ್ಲಿ ಪದಾಧಿಕಾರಿ ಘೋಷಣೆ ಸಂದರ್ಭದಲ್ಲಿ ಹೊಸ ಸದಸ್ಯರಿಗೆ, ಉತ್ಸಾಹಿಗಳಿಗೆ ಯುವಮೋರ್ಚಾ, ಎಸ್ಸಿ/ಎಸ್ಟಿ, ಮಹಿಳಾ, ರೈತ ಮೋರ್ಚಾಗಳಲ್ಲಿ ಜವಾಬ್ದಾರಿ ಹಂಚಿಕೆ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಸದಸ್ಯತ್ವ ಅಭಿಯಾನ ನಡೆಸಲು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಕಾರ್ಯಕರ್ತರು, ಸಂಘ ಪರಿವಾರದ ಸದಸ್ಯರ ಸಭೆಯಲ್ಲಿ ಚರ್ಚಿಸಿದಂತೆ ಸದ್ಯ ನಮ್ಮ ಆದ್ಯತೆ, ರಾಜ್ಯದ ಅಭಿವೃದ್ಧಿ, ಪಕ್ಷ ಸಂಘಟನೆ ಹಾಗೂ ಸದಸ್ಯತ್ವ ಅಭಿಯಾನ. ಇದರ ಜತೆಗೆ ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ನಾವೇನು ಮಾಡಬಹುದು ಎಂಬುದರ ಬಗ್ಗೆಯೂ ಗಮನ ನೀಡಬೇಕು.

ತಾಲೂಕಿಗೆ ಒಂದು ಅಥವಾ ಎರಡು ಟ್ಯಾಂಕರ್‌ ಅಳವಡಿಸಿ, ಶುದ್ಧ ನೀರಿನ ವ್ಯವಸ್ಥೆ ನಮ್ಮಿಂದ ಆಗಬೇಕು. ಕಳೆದ 40 ವರ್ಷದಲ್ಲಿ ಈ ರೀತಿಯ ಭೀಕರ ಬರಗಾಲ ಬಂದಿಲ್ಲ. ಶೇ.10ರಷ್ಟು ಬಿತ್ತನೆಯಾಗಿಲ್ಲ. ನಾಟಿಗೆ ಬೇಕಾದ ತಯಾರಿ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನಾವೆಲ್ಲರೂ ಅವರಿಗೆ ಸಹಕಾರಿಯಾಗಬೇಕು. ಬರಗಾಲಕ್ಕೆ ತುತ್ತಾಗಿರುವ ಹಳ್ಳಿಗಳಲ್ಲಿ ಖುದ್ದಾಗಿ ಓಡಾಡಿ, ಅದರ ವರದಿಯನ್ನು ರಾಜ್ಯದ ಕಚೇರಿಗೆ ಕಳುಹಿಸಿಕೊಡಬೇಕು ಎಂದರು.

ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಮಾತನಾಡಿ, ಸಂಘಟನೆಯಿಂದಾಗಿ ಬಿಜೆಪಿ ಹೆಚ್ಚಿನ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಕರ್ನಾಟಕದಲ್ಲೂ ಬಿಜೆಪಿಯ ಸಂಘಟನೆ ದಿನೇದಿನೆ ಸದೃಢವಾಗುತ್ತಿದೆ. ಕಾಂಗ್ರೆಸ್‌ನವರು ಶಕ್ತಿ ಆ್ಯಪ್‌ ಮಾಡಿದರು. ಆದರೆ, ಅದರಲ್ಲಿ ಸಂಘಟನೆಯ ಶಕ್ತಿಯೇ ಇರಲಿಲ್ಲ. ಬಿಜೆಪಿ ಸಂಘಟನಾ ಕೌಶಲ್ಯ ಎಲ್ಲರಿಗೂ ಆದರ್ಶವಾಗಿದೆ ಮತ್ತು ಇಲ್ಲಿ ವ್ಯಕ್ತಿ ನಿರ್ಮಾಣದ ಆದರ್ಶ ಇದೆ ಎಂದು ಹೇಳಿದರು.

ಕರ್ನಾಟಕದ ವಿಕಾಸ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘಟನೆಯ ವಿಸ್ತರಣೆಗಾಗಿ ಕರ್ನಾಟಕ ಮಾದರಿಯಾಗಬೇಕು. ಆಂಧ್ರ, ತೆಲಂಗಾಣ, ತಮಿಳುನಾಡಿಗೂ ಕರ್ನಾಟಕ ಮಾದರಿಯಾಗಬೇಕು. ಸದಸ್ಯರನ್ನಾಗಿ ಮಾಡಿದರೆ ಸಾಲದು, ಸದಸ್ಯತ್ವ ಪಡೆದವರು ಶಾಶ್ವತವಾಗಿ ಬಿಜೆಪಿಗೆ ಮತ ಹಾಕುವಂತಾಗಬೇಕು ಹಾಗೂ ಅವರು ಪಕ್ಷದ ಕಾರ್ಯಕರ್ತರಾಗಿ ಬೆಳೆಯುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡದರು.

ಸಂಸದರಾದ ಶೋಭಾ ಕರಂದ್ಲಾಜೆ, ಜಿ.ಎಂ.ಸಿದ್ಧೇಶ್ವರ್‌, ಪ್ರಧಾನ ಕಾರ್ಯದರ್ಶಿಗಳಾದ ಎನ್‌.ರವಿಕುಮಾರ್‌, ಅರವಿಂದ ಲಿಂಬಾವಳಿ, ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌, ಕಾರ್ಯದರ್ಶಿಗಳಾದ ಜಗದೀಶ್‌ ಹಿರೇಮನಿ, ಭಾರತಿ ಮುಗ್ಧಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next