Advertisement

ನೀರಿಗಾಗಿ 50 ಲಕ್ಷ ರೂ. ಬೇಡಿಕೆ

11:45 AM Dec 18, 2018 | Team Udayavani |

ಅಫಜಲಪುರ: ತಾಲೂಕಿನಾದ್ಯಂತ ಈ ಬಾರಿ ಭೀಕರ ಬರ ಆವರಿಸಿದೆ. ಹೀಗಾಗಿ ಜನ ಜಾನುವಾರುಗಳು ಸಂಕಷ್ಟ ಪಡುವಂತಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ಪಿಡಿಒಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸಿ ಎಂದು ಶಾಸಕ ಎಂ.ವೈ. ಪಾಟೀಲ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ
ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ಜನರಲ್ಲಿ ಮನವರಿಕೆ ಮಾಡಬೇಕು. ಗ್ರಾಪಂ ವ್ಯಾಪ್ತಿಗಳಲ್ಲಿ ಬರದಿಂದ ಜನರು ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಬೇಕು. ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರದಿಂದ ತಾಲೂಕಿಗೆ ನೀರಿನ ಸಮಸ್ಯೆಗಾಗಿ ಈಗಾಗಲೇ 50 ಲಕ್ಷ ರೂ. ಅನುದಾನ ಬಂದಿದೆ. ಇನ್ನೂ 50 ಲಕ್ಷ ರೂ. ಅನುದಾನ ನೀಡುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾಗಿ ಹೇಳಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಲಿಯಾಕತ್‌ ಅಲಿ ಮಾತನಾಡಿ, ತಾಲೂಕಿನ ರೇವೂರ(ಕೆ), ರೇವೂರ(ಬಿ) ಹಾಗೂ ವಡ್ಡಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಹೊಸೂರ, ಚಿಂಚೋಳಿ, ಚಿಣಮಗೇರಾ ಹಾಗೂ ಭೈರಾಮಡಗಿ ಗ್ರಾಮಗಳಲ್ಲಿ ಖಾಸಗಿಯವರ ಬಳಿಯಿಂದ ನೀರು ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ.

ರಾಮನಗರ ಮತ್ತು ಹಿರಿಯಾಳಗಳಲ್ಲಿ ಸಮಸ್ಯೆ ಇದೆ. ಅಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತದೆ. ಚವಡಾಪುರ,
ಚಿಣಮಗೇರಾಗಳಲ್ಲಿಯೂ ನೀರಿನ ಸಮಸ್ಯೆ ಇದೆ. ಅಲ್ಲಿನ ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆ, ಕಿತ್ತೂರು ಚನ್ನಮ್ಮ
ಶಾಲೆಗೆ ನೀರಿನ ಸಮಸ್ಯೆ ಕಾಡುತ್ತಿದೆ. ಕಿತ್ತೂರು ಚನ್ನಮ್ಮ ಶಾಲೆಯಲ್ಲಿ 8 ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಬಂದಿಲ್ಲ ಎಂದು ವಿವರಿಸಿದಾಗ, ಶಾಸಕರು ಮಾತನಾಡಿ, ಕಿತ್ತೂರು ಚನ್ನಮ್ಮ ಶಾಲೆಗೆ ನದಿಯಿಂದಲೋ ಅಥವಾ ಬೇರೆ ಮಾರ್ಗದಿಂದಲೋ ನೀರು ಪೂರೈಸುವ ಯೋಜನೆ ಸಿದ್ದಪಡಿಸಿ ತಂದು ಕೊಡಿ ಎಂದು ಸೂಚಿಸಿದರು.

Advertisement

ನಿಲೂರ ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೀಗಾಗಿ ಅಲ್ಲಿ ನೀರಿನ ಸಮಸ್ಯೆಯಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಹಾಗೂ ಪಿಡಿಒಗೆ ಸೂಚಿಸಿದರು.

ಕೋಗನೂರ ಪಿಡಿಒ ಸಿದ್ದರಾಮ ಬಬಲೇಶ್ವರ ಮಾತನಾಡಿ, ಕೋಗನೂರ ಗ್ರಾಮದ ಬಳಿ ಅಮರ್ಜಾ ನದಿಗೆ ನಿರ್ಮಿಸಲಾದ ಬ್ರಿಜ್‌ ಕಂ ಬ್ಯಾರೇಜ್‌ನ ಗೇಟ್‌ಗಳು ಹಳತಾಗಿವೆ. ಅದರಲ್ಲಿ ನೀರು ನಿಲ್ಲುತ್ತಿಲ್ಲ. ಹೀಗಾಗಿ ಹೊಸ ಗೇಟ್‌ ಅಳವಡಿಸಿದರೆ ಒಂದು ಕಿಮೀ ವರೆಗೆ ನೀರು ನಿಲ್ಲುತ್ತದೆ. ಅಲ್ಲದೆ ನದಿಯಲ್ಲಿರುವ ಎರಡು ಸರ್ಕಾರಿ ಬಾವಿಗಳಿಗೆ ಸಾಕಷ್ಟು ಅಂತರ್ಜಲ ಹೆಚ್ಚಾಗಲಿದೆ. ಆದ್ದರಿಂದ ಬ್ಯಾರೇಜ್‌ಗೆ ಹೊಸ ಗೇಟ್‌ ಅಳವಡಿಸಿ ಎಂದು ಮನವಿ ಮಾಡಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಲಿಯಾಕತ್‌ ಅಲಿ ಮಾತನಾಡಿ, ಬ್ಯಾರೇಜ್‌ ಗೆ ಗೇಟ್‌ ಅಳವಡಿಸುವುದು ನಮ್ಮ ಇಲಾಖೆಗೆ ಬರುವುದಿಲ್ಲ. ಸಣ್ಣ ನೀರಾವರಿ ಇಲಾಖೆಯವರು ಅಳವಡಿಸುತ್ತಾರೆ. ಅವರಿಗೆ ಸಮಸ್ಯೆ ತಿಳಿಸೋಣ ಎಂದು ಹೇಳಿದರು.

ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿಸಿಪಾಯಿ ಮಾತನಾಡಿ, ಡಿ.18ರಂದು ಆರ್‌ಸಿ ಸಭೆ ಇದೆ. ಹೀಗಾಗಿ 18ರಂದು
ಬೆಳಗ್ಗೆ 10:00ರೊಳಗೆ ಯಾವ ಊರಲ್ಲಿ ನೀರಿನ ಸಮಸ್ಯೆ ಇದೆ. ಆದ್ದರಿಂದ ಪಿಡಿಒಗಳು ಸಂಪೂರ್ಣ ಮಾಹಿತಿನೀಡಬೇಕು ಎಂದು ತಾಕೀತು ಮಾಡಿದರು. ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಪಿಡಿಒಗಳಾದ ರಮೇಶ ಪಾಟೀಲ, ಮಲ್ಲಿಕಾರ್ಜುನ ಹಿಟ್ನಳ್ಳಿ, ಶರಣಪ್ಪ ಡೆಂಗಿ, ಮಹಾಂತೇಶ ಸಾಲಿಮಠ, ಸೈಯ್ಯದ್‌ ಪಟೇಲ್‌, ಶಪುದ್ದೀನ್‌ ನದಾಫ್‌, ರವಿ ಸಣದಾನಿ, ವಾಸೀಮ್‌ ಮಣೂರಕರ, ನಾಗಪ್ಪ ತಳವಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next