ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಅರ್ಧಕ್ಕೆ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಕೈಬಿಡಲಿದ್ದಾರೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ 14183 ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಈ ಪೈಕಿ ಶೇ.50ರಷ್ಟು (7091) ಅತಿಥಿ ಉಪನ್ಯಾಸಕರ ನೇಮಕಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
7091 ಅತಿಥಿ ಉಪನ್ಯಾಸಕರನ್ನು ಈ ಸಾಲಿನಲ್ಲಿ ನೇಮಿಸಿಕೊಳ್ಳಲು ಇಲಾಖೆಯಿಂದ ಈಗಾಗಲೇ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಲಿಖೀತ ರೂಪದಲ್ಲಿ ಉತ್ತರಿಸಿರುವ ಸಚಿವರು, ಈಗಾಗಲೇ ಎಲ್ಲ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೇ.50ರಷ್ಟು ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮೋದನೆ ನೀಡಿದ್ದೇವೆ. ಉಳಿದ ಶೇ.50ರಷ್ಟು(7092) ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಅನುಮೋದನೆಗಾಗಿ ಕಡತ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮನಗೂಳಿ ಮುತ್ಯಾ ಉತ್ತರಾಧಿಕಾರಿ ಯಾರು?
2019-20ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಅತಿಥಿ ಉಪನ್ಯಾಸಕರು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸುವ ಜತೆಗೆ ಕಳೆದ ವರ್ಷ ಸೇವೆ ಸಲ್ಲಿಸಿದವರನ್ನೇ ಮುಂದುವರಿಸಬೇಕು ಎಂದು ಅತಿಥಿ ಉಪನ್ಯಾಸಕರು ಈಗಾಗಲೇ ಸರ್ಕಾರವನ್ನು ಆಗ್ರಹಿಸಿದರು.