ಕಲಬುರಗಿ: ಮಹಾದೇವಪ್ಪ ರಾಂಪುರೆ ಅವರು ಉಸಿರಾಡಿದ್ದು 50ವರ್ಷ 6 ತಿಂಗಳು. ಆದರೆ, ಅವರ ಜೀವಿಸುತ್ತಿರುವುದು ಮಾತ್ರ 50 ತಲೆಮಾರಿನದ್ದು ಎಂದು ಎಚ್‌ಕೆಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ| ಎಸ್.ಜಿ.ಪಾಟೀಲ ಅಭಿಪ್ರಾಯಪಟ್ಟರು. ನಗರದ ಎಚ್‌ಕೆಇ ಸಂಸ್ಥೆಯ ಪೂಜ್ಯದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಅವರ 44ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರೊಬ್ಬ ದಾರ್ಶನೀಕ ಶಿಕ್ಷಣ ತಜ್ಞ. ಅವರು ಹಾಕಿಕೊಟ್ಟಿರುವ ಶಿಕ್ಷಣ ಕ್ಷೇತ್ರದಲ್ಲಿನ ಹೆದ್ದಾರಿಯಲ್ಲಿ ನಾವು ನಡೆಯಬೇಕಿದೆ. ಅದರಿಂದ ಕೇವಲ ವಿದ್ಯಾರ್ಥಿಗಳಿಗೆ ಅಥವಾ ಪ್ರಾಧ್ಯಾಪಕರಿಗಲ್ಲದೆ, ಇಡೀ ಸಮಾಜಕ್ಕೆ ಒಳ್ಳೆಯದಾಗಲಿದೆ. ಮಹಿಳಾ ಶಿಕ್ಷಣಕ್ಕೂ ಅವರು ದಾರಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಡಾ| ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ಮಹಾದೇವಪ್ಪ ರಾಂಪುರೆ ಅವರು ಒಬ್ಬ ವ್ಯಕ್ತಿಯಾಗಿರದೆ ಒಬ್ಬ ಶಕ್ತಿಯಾಗಿದ್ದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಕ್ಷೇತ್ರದ ಪಿತಾಮಹಾ. ಹೈದ್ರಾಬಾದ ಕರ್ನಾಟಕ ಮಾನವೀಯ ರಾಂಪುರೆ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಕ್ಷೇತ್ರದ ಕಣ್ಮಣಿ, ಹಿರಿಯ ರಾಜಕಾರಣಿ, ಮಹಾ ಮುತ್ಸದ್ದಿ, ಸೋಲರಿಯದ ಜೀವಿ, ದಕ್ಷ ಆಡಳಿತಗಾರ ಎಂಬ ಹಲವು ತಲೆಬರಹಗಳನ್ನು ರಾಂಪುರೆ ನಿಧನರಾಗಿದ್ದಾಗ ಪತ್ರಿಕೆಗಳು ಬರೆದು ಗೌರವ ಸೂಚಿಸಿದ್ದವು. ಅಂತಹ ನಿಲುವಿನ ವ್ಯಕ್ತಿತ್ವ ಅವರದು ಎಂದು ಹೇಳಿದರು.
ಪ್ರೊ| ಇಂದುಮತಿ ದೇಶಮಾನೆ, ಡಾ| ಪಿ.ಕೆ. ಕುಲಕರ್ಣಿ, ಪ್ರೊ| ವಿ.ಬಿ. ಮೆಹತಾ, ಉಪ ಪ್ರಾಚಾರ್ಯ ಡಾ| ಗಾದಗೆ, ಅಧ್ಯಕ್ಷತೆ ವಹಿಸಿದ್ದ ಡಾ| ಓ.ಡಿ. ಹೆಬ್ಟಾಳ ಮಾತನಾಡಿ, ನಮ್ಮಲ್ಲಿರುವ ಚೇತನವನ್ನು ಪುನಃಶೆತನ ಮಾಡಿಕೊಳ್ಳುವ ಸಲುವಾಗಿ ರಾಂಪುರೆ ಅವರು ಮಾಡಿದ ಸಾಧನೆ ಮೆಲುಕು ಹಾಕುವುದರಿಂದ ಮತ್ತು ಆ ದಿಸೆಯಲ್ಲಿ ಕಾರ್ಯ ತತ್ಪರರಾದರೆ ಮಹಾದೇವಪ್ಪ ರಾಂಪುರೆ ಅವರಿಗೆ ಗೌರವ ಸಲ್ಲಿಸಿದಂತಾಗುವುದೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಡಾ| ನಾಗೇಂದ್ರ ಹಾಗೂ ಪ್ರೊ| ಸಂಜಯ ಮಾಕಲ ಮಾತನಾಡಿದರು. ಭೀಮಾಶಂಕರ ಝಳಕೀಕರ್ ಹರಸೂರ ಕಾರ್ಯಕ್ರಮ ನಿರೂಪಿಸಿದರು. ಡಾ| ರಾಜೇಂದ್ರಕುಮಾರ ವಂದಿಸಿದರು.