ಬೇಲೂರು: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕದಂತೆ ಅರಿವು ಮೂಡಿಸಿ ನಾಮಫಲಕ ಅಳವಡಿಸಿದರೂ ರಸ್ತೆ ಬದಿಯಲ್ಲಿ ಕಸ ತಂದು ಸುರಿಯುತ್ತಿರುವುದುಮ ನಿಂತಿಲ್ಲ. ಈ ನಡುವೆ ಮನೆಯ ಕಸವನ್ನೆಲ್ಲ ವ್ಯಕ್ತಿಯೊಬ್ಬರು ಆಟೋದಲ್ಲಿ ತಂದು ಸುರಿಯುತ್ತಿರುವಾಗಲೇ ಆಟೋ ಮತ್ತು ವ್ಯಕ್ತಿಯನ್ನು ವಶಕ್ಕೆ ಪಡೆದು ದಂಡ ವಿಧಿಸಿ ಎಚ್ಚರಿಸಿ ಕಳುಹಿಸಿದ್ದೇವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೆಳಿದರು.
ಪಟ್ಟಣದ ಮೂಡಿಗೆರೆ ರಸ್ತೆಯ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಸಮೀಪ ಪುರಸಭೆಯಿಂದ ಸ್ವಚ್ಛಗೊಳಿಸಿದ್ದ ಸ್ಥಳಕ್ಕೆ ವ್ಯಕ್ತಿಯೊಬ್ಬರು ಆಟೋದಲ್ಲಿ ಮನೆ ಕಸ ತಂದು ಸುರಿಯುತಿದ್ದ ಸಂದರ್ಭ ಆಟೋ ಮತ್ತು ವ್ಯಕ್ತಿಯನ್ನು ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆದು ಮಾತನಾಡಿ, ಪ್ರವಾಸಿ ತಾಣ ಬೇಲೂರು ಪಟ್ಟಣವನ್ನು ಅಂದವಾಗಿಡುವ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ಅಲ್ಲದೇ ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವುದಲ್ಲದೆ, ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್‌ಗಳನ್ನು ಎರಡು ಸಮಯದಲ್ಲಿ ಬಿಟ್ಟಿದ್ದೇವೆ.ಆದರೂ ಸಾರ್ವಜನಿಕರು ಮಾತ್ರ ಸ್ವಚ್ಛಗೊಳಿಸಿದ ಸ್ಥಳಕ್ಕೆ ಪುನಃ ಕಸ ತಂದು ಹಾಕುತಿದ್ದಾರೆ ಎಂದು ದೂರಿದರು.
ಐದು ಸಾವಿರ ರೂ. ದಂಡ: ಕಸ ಹಾಕುವವರನ್ನು ಪತ್ತೆ ಹಚ್ಚಲೇಬೇಕೆಂದು ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆದರೆ, ಪಟ್ಟಣದ ವ್ಯಕ್ತಿಯೊಬ್ಬರು ಮನೆ ಸ್ವಚ್ಛಗೊಳಿಸಿದ ಕಸವನ್ನೆಲ್ಲ ಆಟೋದಲ್ಲಿ ತಂದು ಸುರಿಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ನೋಡಿ ದೂರವಾಣಿ ಮೂಲಕ ಕರೆ ಮಾಡಿದ್ದರಿಂದ ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ ಆಟೋ ಪೂರ್ತಿ ಮನೆ ಕಸವನ್ನು ಸುರಿಯುತಿದ್ದರು. ತಕ್ಷಣವೇ ಕಸ ತಂದಿದ್ದ ಆಟೋ ಮತ್ತು ವ್ಯಕ್ತಿಯನ್ನು ವಶಕ್ಕೆ ಪಡೆದು ಪುನಃ ಕಸ ಹಾಕದಂತೆ 5000 ರೂ. ದಂಡ ಧಿಸಿ ಎಚ್ಚರಿಸಿ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಲೋಹಿತ್, ಸಿಬ್ಬಂದಿ ಹರೀಶ್, ವಿಶ್ವ ಸೇರಿದಂತೆ ಇತರರಿದ್ದರು.
ಮುಂದಿನ ದಿನಗಳಲ್ಲಿ ಇದೇ ರೀತಿಯ ಘಟನೆಗಳು ಕಂಡು ಬಂದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಹೆಚ್ಚಿನ ದಂಡದೊಂದಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕು.
– ತೀರ್ಥಕುಮಾರಿ, ಪುರಸಭೆ ಅಧ್ಯಕ್ಷೆ